ಕಾಪು ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಆಗಬಾರದೆಂದು ಕಾಂಗ್ರೆಸ್ ನ ಸೋತ ಅಭ್ಯರ್ಥಿಯಾದ ವಿನಯ್ ಕುಮಾರ್ ಸೊರಕೆ ತಡೆ ಒಡ್ಡುತ್ತಿದ್ದಾರೆ : ಗುರ್ಮೆ ಸುರೇಶ್ ಶೆಟ್ಟಿ
Posted On:
30-07-2024 06:39PM
ಕಾಪು : ವಿಧಾನಸಭಾ ಕ್ಷೇತ್ರದಲ್ಲಿ ವಿನಯ್ ಕುಮಾರ್ ಸೊರಕೆ ಇವರು 2 ಬಾರಿ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದು, ಜನಾದೇಶ ಇವರ ಪರವಾಗಿ ಇಲ್ಲದೇ ಇದ್ದು, 2 ಬಾರಿ ಸೋತು ಈ ಹತಾಶೆಯಿಂದ ಪ್ರಸ್ತುತ ಶಾಸಕನಾದ ನನ್ನ ಮೇಲೆ ಕ್ಷೇತ್ರದಲ್ಲಿ ಅಭಿವೃದ್ಧಿಯ ಕೆಲಸಗಳು ಆಗುತ್ತಿಲ್ಲವೆಂದು ಸುಳ್ಳು ಆಪಾದನೆಯನ್ನು ಹೊರಿಸಿರುತ್ತಾರೆ ಎಂದು ಕಾಪು ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು. ಅವರು ಕಾಪುವಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ ಇವರು ಪತ್ರಿಕಾಗೋಷ್ಟಿಯಲ್ಲಿ ಶಾಸಕನಾದ ನನ್ನ ಮೇಲೆ ವ್ಯವಹಾರಿಕರಣದ ಉದ್ದೇಶದಿಂದ ಕೆಲಸ ಮಾಡುತ್ತಿರುವರೆಂದು ಅಪಾದನೆಯನ್ನು ಮಾಡಿರುತ್ತಾರೆ. ಆದರೆ ನಾನು ಕಳೆದ 40 ವರ್ಷಗಳಿಂದ ನ್ಯಾಯೋಚಿತವಾಗಿ ವಿವಿಧ ಕಡೆಗಳಲ್ಲಿ ವ್ಯವಹಾರವನ್ನು ನಡೆಸಿಕೊಂಡು ಬಂದಿದ್ದು, ಬಂದ ಆದಾಯದ ಸ್ವಲ್ಪ ಭಾಗವನ್ನು ಶಾಸಕನಾಗುವ ಪೂರ್ವದಿಂದಲೂ ಇಂದಿನವರೆಗೆ ಸಮಾಜದ ಕಟ್ಟ ಕಡೆಯ ನೊಂದ ವ್ಯಕ್ತಿಗಳ ಕಣ್ಣೀರು ಒರೆಸುವ ಸಮಾಜಮುಖಿ ಕೆಲಸವನ್ನು ಮಾಡುತ್ತಾ ಬಂದಿರುವುದು ಸಾರ್ವಜನಿಕ ವೇದ್ಯವಾಗಿರುತ್ತದೆ. ಆದರೆ ಯಾವುದೇ ಆದಾಯ ಮೂಲಗಳಿಲ್ಲದೆ ಕೋಟ್ಯಾಂತರ ರೂಪಾಯಿಗಳ ಆಸ್ತಿಯನ್ನು ಸಂಪಾದಿಸಿರುವುದು ಯಾವ ವ್ಯವಹಾರದಿಂದ ಎಂಬುದು ಸೊರಕೆ ಅವರು ಸ್ಪಷ್ಟಪಡಿಸಬೇಕಿರುತ್ತದೆ?
ವಿನಯ ಕುಮಾರ್ ಸೊರಕೆ ಇವರು ಈ ಹಿಂದೆ ನಗರಾಭಿವೃದ್ಧಿ ಸಚಿವರಾಗಿದ್ದ ಸಂದರ್ಭದಲ್ಲಿ ಕಾಪು ಪುರಸಭಾ ವ್ಯಾಪ್ತಿಯ 500 ವಸತಿ ರಹಿತ ಕುಟುಂಬಗಳಿಗೆ ವಸತಿ ಸಮುಚ್ಚಯದ ಸೌಲಭ್ಯವನ್ನು ಒದಗಿಸುವುದಾಗಿ ಹಾಗೂ 100 ಕೋಟಿ ವಿಶೇಷ ಅನುದಾನವನ್ನು ಪುರಸಭಾ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಚಟುವಟಿಕೆಗಳಿಗೆ ಒದಗಿಸಿರುವುದಾಗಿ ಸಾರ್ವಜನಿಕ ವೇದಿಕೆಗಳಲ್ಲಿ ಸುಳ್ಳು ಭರವಸೆಯನ್ನು ನೀಡಿದ್ದು ಅದು ಇನ್ನು ಕಾರ್ಯಗತವಾಗದೇ ಇರುವುದಕ್ಕೆ ಕಾರಣವೇನು ಎಂಬುದರ ಬಗ್ಗೆ ಸೊರಕೆಯವರು ಉತ್ತರಿಸಬೇಕು? ಕಾಪು ಪುರಸಭಾ ರಚನಾ ಸಂದರ್ಭದಲ್ಲಿ ಪೂರ್ವ ಯೋಜನೆ ಇಲ್ಲದೆ ಪುರಸಭೆಯನ್ನಾಗಿ ಘೋಷಿಸಿದ್ದರಿಂದ ಕಾಪು ಪುರಸಭಾ ವ್ಯಾಪ್ತಿಯ 5 ಕೀಮೀ ಒಳಗಿನ ಗ್ರಾಮಂತರ ಪ್ರದೇಶವನ್ನು ಯಾವುದೇ ಮಾಸ್ಟರ್ ಪ್ಲಾನ್ ಇಲ್ಲದೆ ಯೋಜನಾ ಪ್ರಾಧಿಕಾರದ ವ್ಯಾಪ್ತಿಗೆ ಸೇರಿಸಿದ್ದರಿಂದ ಸಾರ್ವಜನಿಕರು ಅನುಭವಿಸುವ ಸಂಕಷ್ಟಗಳಿಗೆ ಸೊರಕೆಯವರು ನೇರ ಕಾರಣಿಭೂತರಾಗಿರುತ್ತಾರೆ.
ಎಲ್ಲೂರು ಐ.ಟಿ.ಐ ಕಾಲೇಜಿಗೆ ನಿವೇಶನವನ್ನು ಕಾಲೇಜಿನ ಹೆಸರಿಗೆ ಮಂಜೂರು ಮಾಡದೇ 5 ಕೋಟಿ ಅನುದಾನವನ್ನು ಸೊರಕೆಯವರು ಬಿಡುಗಡೆಗೊಳಿಸಿರುವುದು ಯಾವ ಉದ್ದೇಶಕ್ಕೆ ? ಆದ್ದರಿಂದ ಈಗಿನ ಎಲ್ಲೂರು ಐ.ಟಿ.ಐ ಕಾಲೇಜಿನ ಪರಿಸ್ಥಿತಿಗೆ ಸೊರಕೆ ನೇರ ಕಾರಣರಾಗಿರುತ್ತಾರೆ.
ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಡಲ್ಕೊರೆತ ಭಾಧಿತ ಪ್ರದೇಶಗಳಲ್ಲಿ ಸಂಬಂಧಪಟ್ಟ ಇಲಾಖೆಯಿಂದ ಹಣ ಮಂಜೂರು ಮಾಡುವ ಬಗ್ಗೆ ಸಾರ್ವಜನಿಕರಲ್ಲಿ ಸುಳ್ಳು ಭರವಸೆಯನ್ನು ನೀಡಿದ್ದಲ್ಲದೇ ಗುತ್ತಿಗೆದಾರರಿಗೆ ಶಿಫಾರಸ್ಸು ಪತ್ರವನ್ನು ನೀಡಿ ರಾಜ್ಯದಲ್ಲಿ ತಮ್ಮದೇ ಸರಕಾರವಿದ್ದರೂ ಇಲ್ಲಿಯವರೆಗೆ ಕಡಲ್ಕೊರೆತ ತಡೆಗೋಡೆಗೆ ಹಣ ಮಂಜೂರು ಮಾಡಿರುವುದಿಲ್ಲ. ಅಲ್ಲದೇ ಹಿಂದಿನ ಸರ್ಕಾರದ ಅವಧಿಯಲ್ಲಿ ಕಡಲ್ಕೊರೆತ ಸಂರಕ್ಷಣೆಗೆ ಕಾಮಗಾರಿಯ ಪೂರ್ಣಗೊಳಿಸದ ಗುತ್ತಿಗೆದಾರಿಗೆ ಸರಕಾರ ಅನುದಾನ ಬಿಡುಗಡೆ ಮಾಡಿರುವುದೇ ಹೊರತು ಇದರಲ್ಲಿ ನನ್ನ ವ್ಯವಹಾರದ ಉದ್ದೇಶವಿರುವುದಿಲ್ಲ ಎಂಬವುದು ಸೊರಕೆಯವರ ಗಮನಕ್ಕೆ ಬಾರದಿರುವುದು ತೀರಾ ವಿಷಾದನೀಯ. ಇತ್ತೀಚೆಗೆ ನಡಿಪಟ್ಣದಲ್ಲಿ ಕಡಲ್ಕೊರೆತ ತೀವ್ರವಾಗಿದ್ದು ಈ ಬಗ್ಗೆ ಮೀನುಗಾರಿಕಾ ಸಚಿವರಾದ ಮಾಂಕಾಳ್ ವೈದ್ಯರಲ್ಲಿ ಖುದ್ದು ಭೇಟಿ ಮಾಡಿ ಪ್ರಸ್ತಾಪಿಸಿದ ಮೇರೆಗೆ ನಡಿಪಟ್ಟ ಕಡಲಕೊರೆತ ಪ್ರದೇಶಕ್ಕೆ ಬೇಟಿ ನೀಡಿದ್ದು, ತುರ್ತು ಕಡಲ್ಕೊರೆತ ಸಂರಕ್ಷಣಾ ಕಾಮಗಾರಿಗೆ 1 ಕೋಟಿ ಮಂಜೂರು ಮಾಡುವ ಬಗ್ಗೆ ಭರವಸೆ ನೀಡಿರುತ್ತಾರೆ. ಸೊರಕೆ ಇವರು ಮೇಲ್ನೋಟದಲ್ಲಿ ಅಭಿವೃದ್ಧಿಯ ಕಡೆಗೆ ಶ್ರಮಿಸುತ್ತೇನೆಂದು ಸಾರ್ವಜನಿಕರಲ್ಲಿ ಬಿಂಬಿಸುತ್ತಾರೆ ಹೊರತು ಉದ್ದೇಶ ಪೂರ್ವಕವಾಗಿ ಅಭಿವೃದ್ಧಿಯನ್ನು ಕುಂಠಿತಗೊಳಿಸುವ ಒಂದು ವ್ಯವಸ್ಥಿತ ಷಡ್ಯಂತ್ರವಾಗಿರುತ್ತದೆ.
ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಆಡಳಿತಾತ್ಮಕ ಹಾಗೂ ಅಭಿವೃದ್ಧಿ ವಿಷಯದಲ್ಲಿ ಶಾಸಕರ ಹಕ್ಕು ಭಾದ್ಯತೆಗಳಿಗೆ ತಡೆಯೊಡ್ಡಿ, ತಮ್ಮ ಸರಕಾರವಿದೆಯೆಂದು ಅಧಿಕಾರಿಗಳಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷ ಪ್ರಭಾವ ಬೀರಿ ಆಡಳಿತಾತ್ಮಕ ಹಾಗೂ ಅಭಿವೃದ್ಧಿ ವಿಷಯದಲ್ಲಿ ತೊಂದರೆ ಉಂಟು ಮಾಡಿರುತ್ತಾರೆ. ಅಲ್ಲದೇ ಸರಕಾರಿ ನೌಕರರ ಹಾಗೂ ಅಧಿಕಾರಿಗಳ ಸಾಮಾನ್ಯ ವರ್ಗಾವಣೆಯಲ್ಲಿ ತನ್ನ ಶಿಫಾರಸ್ಸು ಪತ್ರವನ್ನು ಶಾಸಕನಾದ ನನ್ನ ಹಕ್ಕು ಭಾದ್ಯತೆಗೆ ವ್ಯತಿರಿಕ್ತವಾಗಿ ವರ್ಗಾವಣೆ ದಂಧೆಯನ್ನು ನಡೆಸಿರುತ್ತಾರೆ.
ಕಾಪು ಕ್ಷೇತ್ರದ ಜನಪ್ರತಿನಿಧಿಯಾಗಿ ರಸ್ತೆಗಳ ಅಭಿವೃದ್ಧಿ, ಕಡಲ್ಕೊರೆತ ಭಾಧಿತ ಪ್ರದೇಶಗಳಲ್ಲಿ ಶಾಶ್ವತ ತಡೆಗೋಡೆ ರಚನೆ, ಪ್ರವಾಸೋದ್ಯಮ ತಾಣಗಳ ಅಭಿವೃದ್ಧಿ, ನದಿದಂಡೆ ಸಂರಕ್ಷಣೆ, ಕಿಂಡಿ ಅಣೆಕಟ್ಟುಗಳ ನಿರ್ಮಾಣ, ಲೊಕೋಪಯೋಗಿ ರಸ್ತೆಗಳ ಅಭಿವೃದ್ಧಿ, ಪ.ಜಾತಿ ಮತ್ತು ಪ.ಪಂಗಡಗಳ ಕಾಲನಿಗಳಿಗೆ ಮೂಲಭೂತ ಸೌಕರ್ಯ ಮುಂತಾದವುಗಳ ಬಗ್ಗೆ ಸಂಬಂಧಪಟ್ಟ ಇಲಾಖಾ ಸಚಿವರಲ್ಲಿ ಖುದ್ದು ಭೇಟಿಯಾಗಿ ಪ್ರಸ್ತಾವನೆಯನ್ನು ಸಲ್ಲಿಸಿದ್ದರೂ ಉದ್ದೇಶ ಪೂರ್ವಕವಾಗಿ ಅಭಿವೃದ್ಧಿ ಕೆಲಸಗಳಿಗೆ ಅನುದಾನ ಮಂಜೂರು ಮಾಡದೇ ಇದ್ದು, ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಆಗಬಾರದೆಂದು ಕಾಂಗ್ರೆಸ್ ನ ಸೋತ ಅಭ್ಯರ್ಥಿಯಾದ ವಿನಯ್ ಕುಮಾರ್ ಸೊರಕೆ ಅವರೆ ತಡೆ ಒಡ್ಡುತ್ತಿದ್ದಾರೆ.
ಕೆಲವೊಂದು ಅಭಿವೃದ್ಧಿ ಕಾಮಗಾರಿಗಳಿಗೆ ಹಿಂದಿನ ಬಾರಿ ಅನುದಾನ ಮಂಜೂರಾಗಿದ್ದರೂ ಪ್ರಸ್ತುತ ಬಿ.ಜೆ.ಪಿ ಶಾಸಕರು ಕ್ಷೇತ್ರವನ್ನು ಪ್ರತಿನಿಧಿಸುವ ಕಡೆಗಳಲ್ಲಿ ಉದ್ದೇಶಪೂರ್ವಕವಾಗಿ ಅನುದಾನವನ್ನು ಬಜೆಟ್ ಕೊರತೆಯ ನೆಪವೊಡ್ಡಿ ತಡೆಹಿಡಿದಿರುವುದು ಅಭಿವೃದ್ಧಿಯ ಕೆಲಸಕ್ಕೆ ಹಿನ್ನಡೆ ಉಂಟಾಗಿರುತ್ತದೆ.
ಸೊರಕೆ ಇವರು ಅಭಿವೃದ್ಧಿಯ ವಿಚಾರದಲ್ಲಿ ಇಚ್ಛಾಶಕ್ತಿಯ ಕೊರತೆ ಇರುವ ಬಗ್ಗೆ ಆಪಾದನೆ ಮಾಡಿರುತ್ತಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವಿದ್ದು, ಬಿ.ಜೆ.ಪಿ ಶಾಸಕರು ಇರುವ ಕಡೆಗಳಲ್ಲಿ ಉದ್ದೇಶಪೂರ್ವಕವಾಗಿ ಅಭಿವೃದ್ಧಿ ಚಟುವಟಿಕೆಗೆ ಅನುದಾನ ಬಿಡುಗಡೆ ಮಾಡದೇ ಇರುವುದು ವಿಷಾದನೀಯ ಸಂಗತಿ. ಹಿಂದಿನ ವರ್ಷದಲ್ಲಿ ಭಾರತ ಸರಕಾರದ ಕೇಲೋ ಇಂಡಿಯಾ ಯೋಜನೆಯಡಿಯಲ್ಲಿ ನನ್ನ ವಿಶೇಷ ಪ್ರಯತ್ನದಿಂದಾಗಿ ಕಾಪು ತಾಲೂಕು ಕ್ರೀಡಾಂಗಣದಲ್ಲಿ ಸಮಗ್ರ ಕ್ರೀಡಾ ಚಟುವಟಿಕೆಗಳಾದ ಪುಟ್ ಬಾಲ್ ಕ್ರೀಡಾಂಗಣ, ಒಳಾಂಗಣ ಕ್ರೀಡಾಂಗಣ ಹಾಲ್, ಸ್ವಿಮ್ಮಿಂಗ್ ಪೂಲ್ ನಿರ್ಮಾಣ ಬಗ್ಗೆ ರೂ.25.20 ಕೋಟಿ ಮಂಜೂರಾಗಿರುತ್ತದೆ. ಅಲ್ಲದೆ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳನ್ನು ಕ್ಷೇತ್ರಕ್ಕೆ ತರುವ ಪ್ರಯತ್ನದಲ್ಲಿರುವುದು ನನ್ನ ಇಚ್ಚಾ ಶಕ್ತಿಯಿಂದಲೇ ಎನ್ನುವುದು ಸೊರಕೆಯವರು ಅರಿಯುವಂತಾಗಲಿ. ಅಲ್ಲದೆ ಕಾಪು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ನಿವೇಶನ ರಹಿತರಿಗೆ ನಿವೇಶನವನ್ನು ಗುರುತಿಸಿ ಹಂಚಿಕೆ ಮಾಡುವ ಜಿಲ್ಲಾಧಿಕಾರಿಯವರಿಗೆ ಹಾಗೂ ಸಂಬಂದಿಸಿದ ತಾಲೂಕು ವ್ಯಾಪ್ತಿಯ ತಹಶೀಲ್ದರಾರಿಗೆ ಸೂಚಿಸಿದ್ದು, ಅಲ್ಲದೆ ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಈ ಬಗ್ಗೆ ನಿವೇದಿಸಿಕೊಂಡಿದ್ದು ಕಂದಾಯ ಹಾಗೂ ಅರಣ್ಯ ಇಲಾಖೆಯವರು ಜಂಟಿ ಸರ್ವೆ ಕಾರ್ಯ ಪ್ರಗತಿಯಲ್ಲಿರುವುದಾಗಿ ತಿಳಿಸಿರುವುದರಿಂದ ನಿವೇಶನ ಹಂಚಿಕೆ ವಿಳಂಬಕ್ಕೆ ಸರ್ಕಾರವೇ ನೇರ ಹೊಣೆಯಾಗಿರುತ್ತದೆ.
ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಹಾನಿಗೊಳಗಾದ ಮನೆಗಳಿಗೆ ಬಿ.ಜೆ.ಪಿ ಸರಕಾರ ಇದ್ದ ಸಂದರ್ಭದಲ್ಲಿ ಎ.ಬಿ.ಸಿ ಕೆಟಗರಿವಾರು ಅನುದಾನ ನೀಡುತ್ತಿದ್ದು, ಪ್ರಸ್ತುತ ತಡೆಹಿಡಿದು, ಸಂಪೂರ್ಣ ಹಾನಿಯಾದ ಮನೆಗಳಿಗೆ ಕೇವಲ 1.20 ಲಕ್ಷ ಭಾಗಶಃ ಹಾನಿಯಾದ ಮನೆಗಳಿಗೆ 6,500 ದಂತೆ ನೀಡುತ್ತಿದ್ದು, ಇದರಿಂದ ನೊಂದ ಕುಟುಂಬಗಳ ಸಮಸ್ಯೆ ಸೊರಕೆಯವರ ಗಮನಕ್ಕೆ ಬಂದಿಲ್ಲವೇ..? ಇದು ನನ್ನ ಕೊನೆಯ ಚುನಾವಣೆ ಎಂದು ಪ್ರತಿ ಬಾರಿ ಹೇಳುತ್ತಾ ಜನರನ್ನು ಭಾವನಾತ್ಮಕವಾಗಿ ವಂಚಿಸುತ್ತಾ ಮತ ಪಡೆಯಲು ವಿಫಲ ಪ್ರಯತ್ನ ಮಾಡಿ ಇನ್ನೂ ರಾಜಕೀಯದಲ್ಲಿ ಇರುವುದು ಸೊರಕೆಯವರ ಸುಳ್ಳಿನ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ನಾನು ಶಾಸಕನಾದ ನಂತರ ಪಕ್ಷ, ಜಾತಿ, ಧರ್ಮ ಭೇದ ಮಾಡದೇ ಜನರ ಸಂಕಷ್ಟಗಳಿಗೆ ಸ್ಪಂಧಿಸುವುದು ಪ್ರಾಮಾಣಿಕವಾಗಿ ಕೆಲಸ ಮಾಡಿಕೊಂಡು ಬರುತ್ತಿದ್ದು, ನನ್ನ ಸಾರ್ವಜನಿಕ ಹಾಗೂ ರಾಜಕೀಯ ಜೀವನ ತೆರೆದ ಪುಸ್ತಕದಂತಿದೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ನನ್ನಿಂದಾದ ಸಹಾಯ ಸರಕಾರದ ವತಿಯಿಂದಲೂ ಹಾಗೂ ವೈಯುಕ್ತಿಕ ನೆಲೆಯಲ್ಲಿ ಮಾಡುತ್ತ ಬಂದಿರುತ್ತೇನೆ. ಇದರಿಂದ ಸಹಿಸದೆ ಸುಳ್ಳನ್ನೆ ತನ್ನ ಮನೆ ದೇವರು ಮಾಡಿಕೊಂಡಿರುವ ವಿನಯ ಕುಮಾರ್ ಸೊರಕೆ ಇವರು ಹತಾಶ ಮನೋಭಾವದಿಂದ ರಾಜಕೀಯ ಅಸ್ತಿತ್ವ ಕಳೆದುಕೊಳ್ಳುವ ಭೀತಿಯಿಂದ ಇಲ್ಲ ಸಲ್ಲದ ಆರೋಪ ಮಾಡಿರುವುದು ಹಿರಿಯವರಾದ ವಿನಯ್ ಕುಮಾರ್ ಸೊರಕೆ ಅವರಿಗೆ ಇದು ಶೋಭೆ ತರುವುದೇ..?
ಈ ರೀತಿ ಅಭಿವೃದ್ಧಿ ಕೆಲಸಗಳಿಗೆ ಅಡ್ಡ ಕಾಲು ಹಾಕಿ ಪಕ್ಷತೀತಾವಾಗಿ ಅಭಿವೃದ್ಧಿ ಕೆಲಸಕ್ಕೆ ಕೈ ಜೋಡಿಸಿ ಇರುವ ಸ್ವಲ್ಪ ಮರ್ಯಾದೆಯನ್ನು ಉಳಿಸಿಕೊಂಡರೇ ಉತ್ತಮ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.