ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕಾಪು : ಸ್ವತಃ ಫೀಲ್ಡಿಗಿಳಿದ ಸಾಹಸಿ ತಹಶಿಲ್ದಾರ್ ಡಾ. ಪ್ರತಿಭಾ ಆರ್.

Posted On: 01-08-2024 08:39PM

ಕಾಪು : ಸಾಮಾನ್ಯವಾಗಿ ಅಧಿಕಾರಿಗಳೆಂದರೆ ಭರವಸೆಯ ಮಾತುಗಳಿಗೆ ಸೀಮಿತ ಎಂಬ ಅಪವಾದವಿದೆ. ಆದರೆ ಇಲ್ಲೊಬ್ಬರು ಮಹಿಳಾ ಅಧಿಕಾರಿ ಜನರ ಸಮಸ್ಯೆಗೆ ತಕ್ಷಣ ಸ್ಪಂದಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಅವರೇ ಕಾಪು ತಾಲ್ಲೂಕಿನ ‌ತಹಶಿಲ್ದಾರ್ ಡಾ. ಪ್ರತಿಭಾ ಆರ್. ಬುಧವಾರ ಸುರಿದ ಭಾರೀ ಮಳೆಯಿಂದಾಗಿ ನೆರೆ ಉಂಟಾಗಿ ಕಾಪು ತಾಲ್ಲೂಕಿನಲ್ಲಿ ಹಲವೆಡೆ ನೆರೆ ಪರಿಸ್ಥಿತಿ ಉಂಟಾಗಿತ್ತು. ಸುರಿತಯುವ ಮಳೆಯನ್ನೂ ಲೆಕ್ಕಿಸದೆ ತಾವೇ ಸ್ವತಃ ಫೀಲ್ಡಿಗಿಳಿದು ನೆರೆ ಪ್ರದೇಶಕ್ಕೆ ಧಾವಿಸಿ ಬೋಟ್ ನ ಮೂಲಕ ನೆರೆಗೆ ಸಿಲುಕಿದವರನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿದರು. ಸಂತ್ರಸ್ತರ ಮನ ಒಲಿಸಿ ಕರೆತಂದು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವಲ್ಲಿ ತಹಶಿಲ್ದಾರ್ ಪ್ರತಿಭಾ ಯಶಸ್ವಿಯಾಗಿದ್ದಾರೆ.

ಹಲವು ಕುಟುಂಬಗಳ ಸ್ಥಳಾಂತರ : ಕಾಪು ತಾಲೂಕು ಫಲಿಮಾರು ಗ್ರಾಮದ ಕೊಪ್ಪಳ ಎಂಬಲ್ಲಿ ಗೋಪಾಲರವರ ಮನೆಯ ಒಟ್ಟು ಐದು ಸದಸ್ಯರನ್ನು, ಯೇಣಗುಡ್ಡೆಯ ಫಾರೆಸ್ಟ್ ಗೇಟ್ ಬಳಿಯ ನಾಗಿ ಎಂಬುವವರ ಮನೆಯ 5 ಜನರನ್ನು, ಪಂಜಿಮಾರು ಪ್ರದೇಶದ ಹಿಲ್ಡಾ ರೋಡ್ರಿಗಸ್ ರವರ ಕುಟುಂಬದ ಇಬ್ಬರು ಸದಸ್ಯರು, ಶಿರ್ವದ ಮಾರಿಗುಡಿ ಸೇತುವೆ ಬಳಿಯ ಜಯಶ್ರೀಯವರ ಕುಟುಂಬದ ಮೂರು ಮಂದಿ, ಬೆಳ್ಳೆ ಗ್ರಾಮದ ಪಡುಬೆಳ್ಳೆಯ ಭಟ್ಟಸಾಲಿನಲ್ಲಿ ಜಲಾವೃತಗೊಂಡಿದ್ದ ತುಕ್ರ ಮುಖಾರಿ ಅವರ ಮನೆಯ 9 ಮಂದಿ ಸದಸ್ಯರನ್ನು ಸ್ಥಳಾಂತರಿಸಲಾಯಿತು.

ಈ ಸಂದರ್ಭ ಕಂದಾಯ ಪರಿವೀಕ್ಷಕ ಇಜ್ಜಾರ್ ಸಾಬಿರ್, ಹೋಮ್ ಗಾಡ್೯ ಸಿಬ್ಬಂದಿಗಳು, ಗ್ರಾಮ ಪಂಚಾಯತ್ ಸದಸ್ಯರು, ಅಧಿಕಾರಿಗಳು ಸಹಕರಿಸಿದರು.

ಚಾಲೆಂಜಿಂಗ್ ಟಾಸ್ಕ್ : ಅಪರಿಚಿತ ಪ್ರದೇಶದಲ್ಲಿ ಬೋಟ್ ನಲ್ಲಿ ತೆರಳುವುದು ಅಷ್ಟು ಸುರಕ್ಷಿತವಲ್ಲ. ಆಳ-ಅಗಲ ತಿಳಿದಿರುವುದಿಲ್ಲ. ಆದರೂ ರಿಸ್ಕ್ ತೆಗೆದುಕೊಂಡು ಈ ಕಾರ್ಯವನ್ನು ಮಾಡಿದ್ದೇವೆ. ಜೀವದ ಹಂಗು ತೊರೆದು ರಕ್ಷಣಾ ಕಾರ್ಯದಲ್ಲಿ ನಾನು ಮತ್ತು ನಮ್ಮ ರಕ್ಷಣಾ ತಂಡ ತೊಡಗಿದೆ. ಸಂತ್ರಸ್ತರ ರಕ್ಷಣೆಯೊಂದೇ ನಮ್ಮ ಗುರಿ. ನೆರೆ ಸಂಕಷ್ಟ ಎದುರಾದಲ್ಲಿ ಯಾವುದೇ ಸಂದರ್ಭದಲ್ಲಿ ತಹಶಿಲ್ದಾರ್ ಕಚೇರಿಯ ಕಂಟ್ರೋಲ್ ರೂಂ ಗೆ ಕರೆ ಮಾಡಿ ಸಹಾಯ ಪಡೆದುಕೊಳ್ಳಬಹುದು. ಕಾಪು ತಾಲ್ಲೂಕು ಆಡಳಿತ ನೆರೆ ಸಂರಕ್ಷಣೆಗೆ ಸದಾ ಸನ್ನದ್ಧವಾಗಿದೆ - ತಹಶಿಲ್ದಾರ್ ಪ್ರತಿಭಾ ಆರ್.