ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ನಂದಿಕೂರು : ಬೀಳುವ ಹಂತದಲ್ಲಿದ್ದ ಮನೆಯ ಒಂಟಿ ಜೀವಕ್ಕೆ ಆಸರೆ ತೋರಿದ ಕಾಪು ತಹಶಿಲ್ದಾರ್

Posted On: 03-08-2024 05:39PM

ನಂದಿಕೂರು : ಕಾಪು ತಾಲ್ಲೂಕಿನ ಪಲಿಮಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ನಂದಿಕೂರು ಗ್ರಾಮದಲ್ಲಿ ಆಗಲೋ ಈಗಲೋ ಬೀಳುವ ಹಂತದಲ್ಲಿದ್ದ ಮನೆಯಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದ ಕೃಷ್ಣಯ್ಯ ಆಚಾರ್ಯ (82ವರ್ಷ)ರನ್ನು ಕಾಪು ತಹಶಿಲ್ದಾರ್ ನೇತೃತ್ವದ ತಂಡ ಅವರ ಮನವೊಲಿಸಿ ಉದ್ಯಾವರದಲ್ಲಿರುವ ಹಿರಿಯ ನಾಗರಿಕರ ಕನಸಿನ ಮನೆಗೆ ಸ್ಥಳಾಂತರ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಕೃಷ್ಣಯ್ಯ ಆಚಾರ್ಯರು ವಾಸಿಸುತ್ತಿದ್ದ ಮನೆಯ ಒಂದು ಭಾಗದ ಮಣ್ಣಿನ ಗೋಡೆ ಭಾಗಶಃ ಹಾನಿಗೊಳಗಾಗಿತ್ತು. ಟರ್ಪಾಲಿನ ಆಸರೆಯಲ್ಲಿ, ಈ ರಣಮಳೆಗೆ ಬೀಳುವ ಹಂತದಲ್ಲಿತ್ತು. ಅವಿವಾಹಿತನಾಗಿದ್ದ ಅವರ ಒಬ್ಬ ತಂಗಿಯೂ ತೀರಿ ಹೋಗಿದ್ದರು. ವೃದ್ಧಾಪ್ಯ ವೇತನ, ಊರಿನವರ ಅಲ್ಪ ಸ್ವಲ್ಪದ ಸಹಾಯ, ಗ್ರಾಮ ಪಂಚಾಯತಿಯ ಜನಪ್ರತಿನಿಧಿಗಳ ಸಹಾಯದಿಂದ ಜೀವಿಸುತ್ತಾ ಇದ್ದರು.

ಅಜ್ಜನ ಮನೆ ಸೆಂಟಿಮೆಂಟ್ : ಕೃಷ್ಣಯ್ಯರಿಗೆ ಮನೆ ಬಗ್ಗೆ ಬಹಳ ಪ್ರೀತಿ. ಬೀಳುವಂತಿದ್ದರೂ ಬೇರೆ ಕಡೆಗೆ ಹೋಗಲು ಒಪ್ಪಿರಲಿಲ್ಲ. ಪಲಿಮಾರು ಗ್ರಾಮ ಪಂಚಾಯತಿಯ ಅಧ್ಯಕ್ಷರು, ಸದಸ್ಯರು, ಊರವರು ಎಷ್ಟೇ ಪ್ರಯತ್ನಿಸಿದರೂ ಅಲ್ಲಿಂದ ಬೇರೆಡೆಗೆ ಹೋಗಲು ಅಜ್ಜ ಒಪ್ಪಿರಲಿಲ್ಲ. ಅಧಿಕಾರಿಗಳು ಹಲವು ವರ್ಷಗಳಿಂದ ಪ್ರಯತ್ನ ಪಟ್ಟರೂ ಅಲ್ಲಿಂದ ಸುರಕ್ಷಿತ ಸ್ಥಳಕ್ಕೆ ಕಳಿಸಲು ಸಾಧ್ಯವಾಗಿರಲಿಲ್ಲ. ಇಷ್ಟೆಲ್ಲ ವಿಷಯ ಮನಗಂಡ ಕಾಪು ತಹಶಿಲ್ದಾರ್ ಡಾ. ಪ್ರತಿಭಾ ಆರ್ ರವರು ತಾವೇ ಸ್ವತಃ ಖುದ್ದಾಗಿ ಅಲ್ಲಿಗೆ ಬಂದು ಕೃಷ್ಣಯ್ಯ ಆಚಾರ್ಯರ ಮನವೊಲಿಸಲು ಸಾಕಷ್ಟು ಪ್ರಯತ್ನಿಸಿ ಕೊನೆಗೆ ಉದ್ಯಾವರದ ವೃದ್ಧಾಶ್ರಮಕ್ಕೆ ಸೇರಿಸುವ ಪ್ರಯತ್ನ ಯಶಸ್ವಿಯಾಯಿತು. ಅಲ್ಲಿಯ ಸ್ವಚ್ಛವಾಗಿದ್ದ ಪರಿಸರ, ನಾಗರಿಕ ಸೌಲಭ್ಯಗಳು, ಇತರ ಸಮಾನ ವಯಸ್ಕರನ್ನು ಕಂಡು ಕೃಷ್ಣಯ್ಯರಿಗೂ ಮುಖದಲ್ಲಿ ನಗು ಮೂಡಿತು. ಇಂಥಹ ವ್ಯವಸ್ಥೆ ಮಾಡಿಕೊಟ್ಟ ತಹಶಿಲ್ದಾರ್ ಗೆ ಕೃಷ್ಣಯ್ಯರವರು ಕೃತಜ್ಞತೆ ಸಲ್ಲಿಸಲು ಮರೆಯಲಿಲ್ಲ. ತಹಶಿಲ್ದಾರ್ ರವರ ಈ ಕಾರ್ಯ ಸಾರ್ವಜನಿಕ ವಲಯದಲ್ಲಿ ಶ್ಲಾಘನೆಗೆ ಪಾತ್ರವಾಗಿದೆ.

ಈ ಸಂದರ್ಭ ಪಲಿಮಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸೌಮ್ಯಲತಾ ಶೆಟ್ಟಿ, ಪಿಡಿಒ ಶಶಿಧರ್, ಸ್ಥಳೀಯರಾದ ಸತೀಶ್, ಸುರೇಶ್ ಮತ್ತು ಸತೀಶ್, ಗ್ರಾಮ ಲೆಕ್ಕಾಧಿಕಾರಿ ಸುನಿಲ್, ರೆವಿನ್ಯೂ ಇನ್ಸ್‌ಪೆಕ್ಟರ್ ಇಜ್ಜಾರ್ ಸಾಬಿರ್ ಸಹಕರಿಸಿದ್ದರು.