ಪಡುಬಿದ್ರಿ : ಇಲ್ಲಿನ ಮಾರ್ಕೆಟ್ ರಸ್ತೆಯಲ್ಲಿಯರುವ ಸಾಯಿ ಆರ್ಕೆಡ್ ಆವರಣದಲ್ಲಿ ತುಳು ಜಾನಪದ ಚಿಂತಕ, ಪ್ರಗತಿಪರ ಕೃಷಿಕರಾದ ಪಿ.ಕೆ ಸದಾನಂದ ಪಡುಬಿದ್ರಿಯವರ ನೇತೃತ್ವದಲ್ಲಿ ಆಟಿ ಅಮಾವಾಸ್ಯೆಯಂದು ಬೆಳಗ್ಗೆ ಆಟಿಯ ಕಷಾಯ ಮತ್ತು ಮೆಂತೆ ಗಂಜಿ ವಿತರಣೆ ನಡೆಯಿತು.
ಈ ಸಂದರ್ಭ ಮಾತನಾಡಿದ ಪಿ.ಕೆ ಸದಾನಂದರವರು, ತುಳುನಾಡಿನ ಹಿರಿಯರ ಸಂಪ್ರದಾಯದಂತೆ ಆಟಿ ಕಷಾಯದ ಜೊತೆಗೆ ದೇಹಕ್ಕೆ ತಂಪನ್ನು ನೀಡಲು ಮೆಂತೆ ಗಂಜಿ ಸೇವನೆ ಮಾಡಲಾಗುತ್ತದೆ. ಇದು ನಮ್ಮನ್ನು ಆರೋಗ್ಯವಂತರನ್ನಾಗಿ ಮಾಡಿ ಕಾಯಿಲೆಯನ್ನು ದೂರ ಮಾಡಲು ಸಹಕಾರಿಯಾಗಿದೆ. ಇಂದಿನ ಯುವ ಜನಾಂಗಕ್ಕೆ ಹಾಳೆ ಮರ ಸೇರಿದಂತೆ ಆಯುರ್ವೇದೀಯ ಅಂಶದ ಗಿಡಮೂಲಿಕೆಗಳ ಬಗ್ಗೆ ತಿಳಿಸಬೇಕಾದ ಅನಿವಾರ್ಯತೆಯಿದೆ. ಕಳೆದ 12 ವರ್ಷಗಳಿಂದ ಆಟಿ ಕಷಾಯ ಮತ್ತು ಮೆಂತೆ ಗಂಜಿಯನ್ನು ಸಾಮೂಹಿಕ ತಯಾರಿಯ ಜೊತೆಗೆ ಸಾರ್ವಜನಿಕ ವಿತರಣೆಯನ್ನು ಮಾಡಲಾಗುತ್ತಿದೆ ಎಂದರು.
ಈ ಸಂದರ್ಭ ಪಡುಬಿದ್ರಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶಶಿಕಲಾ, ಬಿಜೆಪಿ ಉಡುಪಿ ಜಿಲ್ಲಾ ಉಪಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು,ಪಡುಬಿದ್ರಿ ರೋಟರಿ ಕ್ಲಬ್ ಪೂರ್ವಾಧ್ಯಕ್ಷ ಸಂತೋಷ್, ಪ್ರಾಣೇಶ್ ಹೆಜಮಾಡಿ, ಸಂತೋಷ್ ನಂಬಿಯಾರ್, ಕುಟ್ಟಿ ಪೂಜಾರಿ, ಚಿತ್ರಾಕ್ಷಿ ಕೆ ಕೋಟ್ಯಾನ್, ಸುಧಾಕರ್, ಪಂಚಾಯತ್ ಸದಸ್ಯರು, ಪಿ ಕೆ ಸದಾನಂದರವರ ಕುಟುಂಬ ವರ್ಗದವರು ಉಪಸ್ಥಿತರಿದ್ದರು.
ಸುಮಾರು 250 ಕ್ಕೂ ಅಧಿಕ ಮಂದಿ ಆಟಿ ಕಷಾಯ ಮತ್ತು ಮೆಂತೆ ಗಂಜಿ ಸೇವಿಸಿದರು.