ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕಾಪು : ತಹಶಿಲ್ದಾರ್ ಕಚೇರಿಯ ಆವರಣದಲ್ಲಿದ್ದ ಅಪಾಯಕಾರಿ ಮರ ತೆರವು

Posted On: 04-08-2024 04:27PM

ಕಾಪು : ತಾಲ್ಲೂಕು ಆಡಳಿತ ಸೌಧದ ಆವರಣದಲ್ಲಿ ಅಪಾಯಕಾರಿ ಸ್ಥಿತಿಯಲ್ಲಿದ್ದು ಯಾವುದೇ ಕ್ಷಣದಲ್ಲಿ ಬೀಳಬಹುದಾಗಿದ್ದ ಬೃಹದಾಕಾರದ ಹೆಬ್ಬಲಸಿನ ಮರವೊಂದನ್ನು ಭಾನುವಾರ ತೆರವುಗೊಳಿಸಲಾಯಿತು.

ಈ ಹಿಂದೆಯೇ ಸಿಡಿಲು ಬಡಿದು, ಒಣಗಿ ಹೋಗಿ ಬೀಳುವ ಸ್ಥಿತಿಯಲ್ಲಿ ಇತ್ತು. ಈ ಆವರಣದಲ್ಲಿ ತಹಶಿಲ್ದಾರ್ ಕಚೇರಿ, ಪುರಸಭೆ, ತಾಲ್ಲೂಕು ಪಂಚಾಯತ್, ಸರ್ವೆ ಇಲಾಖೆ ಹೀಗೆ ಹಲವು ಕಚೇರಿಗಳ ಸಮುಚ್ಚಯವಾಗಿರುವ ಆಡಳಿತ ಸೌಧದಲ್ಲಿ ಹಲವು ಕಾರ್ಯಗಳಿಗೆ ಬರುವ ಸಾರ್ವಜನಿಕರ ಸಂಖ್ಯೆ ಹೆಚ್ಚು ಇದೆ. ತಾಲ್ಲೂಕು ಆಡಳಿತ ಸೌಧಕ್ಕೆ ಬರುವ ಸಾರ್ವಜನಿಕರ ವಾಹನಗಳು ಇಲ್ಲಿ ನಿಲ್ಲುತ್ತಿದ್ದವು. ಹಲವು ವರ್ಷಗಳಿಂದ ಇದನ್ನು ತೆರವು ಮಾಡಬೇಕೆಂಬ ಕೂಗು ಕೇಳಿ ಬಂದಿತ್ತು. ಎಷ್ಟೋ ಅಧಿಕಾರಿಗಳು ಆಗಿ ಹೋದರೂ ಫಲ ಸಿಕ್ಕಿರಲಿಲ್ಲ. ಈಗ ತಹಶಿಲ್ದಾರ್ ಡಾ. ಪ್ರತಿಭಾ ಆರ್., ತಾಲ್ಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಜೇಮ್ಸ್ ಡಿಸಿಲ್ವ ಹಾಗೂ ಪುರಸಭಾ ಚೀಫ್ ಆಫೀಸರ್ ನಾಗರಾಜ್ ರವರ ಪ್ರಯತ್ನದಿಂದಾಗಿ ಇಂದು ಅಪಾಯಕಾರಿ ಮರ ತೆರವಾಗಿದೆ.

ಅರಣ್ಯ ಇಲಾಖೆಯ ಅಧಿಕಾರಿಗಳಾದ ಜೀವನ್ ಶೆಟ್ಟಿ, ಮಂಜುನಾಥ್ ರವರ ಸಹಕಾರದಿಂದ ಗೌರವ್, ಜಯ, ಭರತ್, ಪ್ರಜಾನ್ ರವರ ತಂಡ ಈ ದಿನ ಅಪಾಯಕಾರಿ ಮರವನ್ನು ತೆರವು ಮಾಡಿದ್ದಾರೆ. ಭಾನುವಾರವನ್ನೂ ಲೆಕ್ಕಿಸದೆ ಸದಾ ಸಾರ್ವಜನಿಕರ ಸುರಕ್ಷತೆಗೆ ಕರ್ತವ್ಯ ನಿರ್ವಹಿಸುವ ತಹಶಿಲ್ದಾರ್ ಪ್ರತಿಭಾ ರವರ ಬಗ್ಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಸಾರ್ವಜನಿಕರ ಸುರಕ್ಷತೆ ಮುಖ್ಯ. ಹಾಗಾಗಿ ಈ ಮರವನ್ನು ಅರಣ್ಯ ಇಲಾಖೆಯ ಅನುಮತಿ ಮತ್ತು ಸಹಕಾರದಿಂದ ತೆರವು ಮಾಡಿದ್ದೇವೆ. ಈ ರೀತಿ ಬೇರೆಡೆಯಲ್ಲಿ ಎಲ್ಲಿಯಾದರೂ ಅಪಾಯಕಾರಿ ಮರಗಳಿದ್ದರೆ ತಾಲ್ಲೂಕು ಆಡಳಿತದ ಗಮನಕ್ಕೆ ತಂದರೆ ತೆರವುಗೊಳಿಸಲು ಕ್ರಮವಹಿಸಲಾಗುವುದು - ತಹಶಿಲ್ದಾರ್ ಡಾ. ಪ್ರತಿಭಾ ಆರ್.