ನಾಗರಪಂಚಮಿ - ಪ್ರಕೃತಿಗೆ ಮಾನವ ಕೃತಜ್ಞತೆ ಹೇಳುವ ದಿನ
Posted On:
09-08-2024 09:01AM
ಇಂದು ನಾಗರ ಪಂಚಮಿ. ಪ್ರಕೃತಿಯನ್ನು ಪೂಜಿಸುವ ವಿಶಿಷ್ಟ ಹಬ್ಬವಾದ
ನಾಗಾರಾಧನೆ ಈ ಭೂಮಂಡಲದಲ್ಲಿ ಇಂದು- ನಿನ್ನೆಯದಲ್ಲ. ವಿಶ್ವದ ಎಲ್ಲಾ ಭಾಗಗಳ ಧರ್ಮ- ಪುರಾಣ ಮತ್ತು ಜನಪದಗಳಲ್ಲಿ ನಾಗನ ಪ್ರಾಮುಖ್ಯ ಇತ್ತೆಂಬುದಕ್ಕೆ ಸಾಕಷ್ಟು ಪುರಾವೆಗಳು ದೊರೆತಿವೆ.
ನಮ್ಮ ಪೂರ್ವಜರು ನಾಗನನ್ನು ದೇವತೆಗಳ ಸಾಲಿಗೆ ಸೇರಿಸಿ 'ನಾಗದೇವತೆ' ಎಂದರು. ಪರಿಸರ ಸಮತೋಲನದ ವಿಷಯದಲ್ಲಿ ಅನ್ಯ ಜೀವಜಂತುಗಳ ಜೊತೆಗೆ ನಾಗನಿಗೂ ಆದ್ಯತೆ ನೀಡಲು ಮರೆಯಲಿಲ್ಲ. ಕೃಷಿಪ್ರಧಾನ ಭಾರತದಲ್ಲಿ ನಾಗನು ಕೃಷಿಯನ್ನು ನಾಶ ಮಾಡುವ ಇತರ ಜಂತುಗಳನ್ನು ನಿಯಂತ್ರಿಸಿ ಧಾನ್ಯವನ್ನು ರಕ್ಷಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.
ಹಾವು ನಿಜವಾಗಿಯೂ ನಿರುಪದ್ರವಿ ಜೀವಿ. ಅದಕ್ಕೆ ಕಿವಿ ಕೇಳಿಸುವುದಿಲ್ಲ, ಕೇವಲ ಸಪ್ಪಳವನ್ನು ಗ್ರಹಸಿ ತನ್ನ ಬೇಟೆಯನ್ನು ಅದು ಕಂಡುಕೊಳ್ಳುತ್ತದೆ. ಅದು ತಾನಾಗಿಯೇ ಯಾರಿಗೂ ಕಚ್ಚುವುದಿಲ್ಲ, ಮೆಟ್ಟಿದಲ್ಲದೇ ಹಾವು ಕಚ್ಚದು ಎಂಬ ಮಾತು ಕೇಳಿದ್ದಿರಲ್ಲವೇ?
ಶ್ರಾವಣ ಮಾಸದಲ್ಲಿ ನಾಗಪೂಜೆ
ಪುನರ್ಜನ್ಮದ ಸಂಕೇತ
ಹಾವು ಎಂಬುದು ಹುಟ್ಟು , ಸಾವು - ಪುನರ್ಜನ್ಮದ ಸಂಕೇತ. ಆಗಾಗ ತನ್ನ ಪೊರೆಯನ್ನು ಕಳಚಿ ಹೊಸ ಜನ್ಮವನ್ನು ಪಡೆಯುತ್ತದೆ. ನಮ್ಮ ಹಿಂದೂ ಧರ್ಮವೂ ಇದನ್ನೇ ಪ್ರತಿಪಾದಿಸುತ್ತದೆ.
ಶ್ರಾವಣಮಾಸ ಎಂದರೆ ಮಳೆ ಬೀಳುವ ಸಮಯ , ಈ ಸಮಯ ನಾಗನ ಬಿಲಗಳಲ್ಲಿ ನೀರುತುಂಬುತ್ತವೆ , ಆದ್ದರಿಂದ ನಾಗಗಳು ಬಿಲದಿಂದ ಹೊರಬರುತ್ತವೆ ,ಹೊಲಗದ್ದೆಗಳಲ್ಲಿ ಸುತ್ತಾಡುತ್ತವೆ. ಫಸಲು ಹಾಳುಮಾಡುವ ಜಂತುಗಳನ್ನು ತಿಂದು ಫಸಲು ಹಾಳಾಗದಂತೆ ನೋಡಿಕೊಳ್ಳುತ್ತವೆ. ಹೀಗಾಗಿ ಶ್ರಾವಣ ಮಾಸದಲ್ಲಿ ನಾಗಪೂಜೆಗೆ ಆದ್ಯತೆ ನೀಡುತ್ತಾ ಬಂದಿದ್ದೇವೆ.
ದೋಷಗಳನ್ನು ಅತಿಶಯೋಕ್ತಿ
ನಾಗಕುಲದವರು
ಇಂದ್ರಾದಿ ದೇವತೆಗಳಂತೆ ನಾಗಕುಲದವರು ಕಶ್ಯಪ ಮುನಿಗಳಿಂದ ಕದ್ರೂ ಎಂಬ ನಾಗಮಾತೆಯಿಂದ ಜನಿಸಿದೆ. ಹೀಗಾಗಿ ಜ್ಞಾನಿಗಳು ದೇವತೆಗಳನ್ನು ಗೌರವಿಸಿದಂತೆ ನಾಗಗಳನ್ನು ಗೌರವಿಸುತ್ತಾರೆ. ಗೀತೆಯಲ್ಲಿ ಹೇಳಿದಂತೆ ನಮಗೆ ತಿಳಿಯದಿದ್ದರೂ ಈ ಪೂಜೆ ಭಗವಂತನ ಪೂಜೆಯೇ ಆಗುತ್ತದೆ. ತಿಳಿದು ಪೂಜಿಸಿದರಂತೂ ಅದು ಅತ್ಯಂತ ವಿಶೇಷ.
ಈ ಹಬ್ಬ ಪ್ರಕೃತಿಗೆ ಮಾನವ ಕೃತಜ್ಞತೆ ಹೇಳುವ ದಿನ :ಹಬ್ಬಗಳು ಆರಂಭವಾದಂತೆ
ಸಂಬಂಧವನ್ನು ಬೆಳಸಲಿಕ್ಕೆ
ಹಬ್ಬಗಳು ಬರುವುದು ಮನುಷ್ಯ ಮನುಷ್ಯರ ಸಂಬಂಧವನ್ನು ಬೆಳಸಲಿಕ್ಕೆ ಮತ್ತು ಗಟ್ಟಿಗೊಳಿಸಲಿಕ್ಕೆ. ನಾಗಪಂಚಮಿ ಬಂತೂ ಎಂದರೆ ಹಬ್ಬಗಳು ಆರಂಭವಾದಂತೆ , ನಾಗನಕಟ್ಟೆಗೆ ಹೋಗಿ ನಾಗನಿಗೆ ಹಾಲು ಎಳನೀರು ಆಭಿಷೇಕ ಮಾಡಿ ಬರುವುದೆಂದರೆ ಎಲ್ಲಿಲ್ಲದ ಸಂಭ್ರಮ . ದೊಡ್ಡ ದೊಡ್ಡ ಮರಗಳ ನಡುವೆ ಬುಡದಲ್ಲಿ ನಾಗನ ಕಲ್ಲುಗಳೂ ,ಪಕ್ಕದಲ್ಲಿ ಕೆರೆ ಅಬ್ಬಬ್ಬಾ ಆ ಪರಿಸರವೇ ನಮ್ಮಲ್ಲಿ ಭಯ ಭಕ್ತಿ ಹುಟ್ಟಿಸುತ್ತಿತ್ತು! ಆದರೆ ಇಂದು ಅದಕ್ಕೆ ಗುಡಿಯನ್ನು ಕಟ್ಟಿಸಿ ಮೂಲ ಸ್ವರೂಪವೇ ಮಾಯವಾಗಿ ಸಿಮೆಂಟ್ ಗೋಡೆಗಳ ನಡುವೆ ಬಂಧಿಸಲ್ಪಟ್ಟಿವೆ.
ಮಾನವನ ಅಧಿಕ ಪ್ರಸಂಗದಿಂದ ನಾಗಬನದಲ್ಲಿರುವ ಮರಗಳನ್ನು ಕಡಿದು ಅಲ್ಲಿ ನಾಗ ಬನ ಕಾಂಕ್ರಿಟ್ ನಿಂದ ತಯಾರಿಸಿ ತೋರಿಕೆಯ ಪ್ರಸಂಗವಾಗುತ್ತಿದೆ. ನಾಗಗಳು ಈ ಕಾಂಕ್ರಿಟ್ ಬನಕ್ಕೆ ಬರಲಿಕ್ಕಿಲ್ಲ ಈ ರೀತಿಯಾಗಿ ಅದರ ಆವಾಸ ಸ್ಥಾನ ಇರುದಿಲ್ಲ ಹೀಗಾಗಿ ನಾವೆಲ್ಲರೂ ಮೂಲ ನಾಗಬನಗಳನ್ನು ರಕ್ಷಣಿ ಮಾಡಬೇಕಾಗಿದೆ. ಖ್ಯಾತ ಉರಗ ತಜ್ಞ ಗುರುರಾಜ ಸನಿಲ್ ಮಾತಿನಂತೆ ಹೇಳುದಾದರೆ ನಾಗಬನದಲ್ಲಿ ಈ ಹಿಂದೆ ಸುಮಾರು 30-40 ಪ್ರಭೇದದ ಗಿಡ ಮರಗಳಿದ್ದವು ಇದರಿಂದ ಪ್ರಕೃತಿಯ ರಕ್ಷಣೆ ನಡೆಯುತ್ತಿತ್ತು ಆದರೆ ಇಂದು ಅದರ ಚಿತ್ರಣ ಬದಲಾಗಿದೆ.
ಮನುಷ್ಯನಿಂದ ಈ ಪ್ರಕೃತಿಗೆ ಯಾವುದೇ ಲಾಭ ಇರಲಾರದು ಆದರೆ ಪ್ರಕೃತಿಯ ನೆರವಿಲ್ಲದೆ ಖಂಡಿತ ಬದುಕು ಅಸಾಧ್ಯ.ಇಂತಹ ಶ್ರೇಷ್ಠ ಪ್ರಕೃತಿಗೆ ನಾಗ ಆರಾಧನೆ ಮೂಲಕ ಕೃತಜ್ಞತೆ ಸಲ್ಲಿಸುವ ಈ ಹಬ್ಬ ನಾಗ ಬನ ಗಳ ರಕ್ಷಣಿ ಮತ್ತು ಸ್ವಚ್ಚ ನಾಗ ಪಂಚಮಿಯತ್ತ ನಮ್ಮ ಚಿತ್ತವಿರಲಿ.
✍