ಪಡುಬಿದ್ರಿ : ಕಾರ್ಕಳ -ಪಡುಬಿದ್ರಿ ರಸ್ತೆ ಟೋಲ್ ಬೂತ್ ನಿರ್ಮಾಣದ ವಿರುದ್ಧ ಜನಾಗ್ರಹ ಸಭೆ
Posted On:
12-08-2024 08:41PM
ಪಡುಬಿದ್ರಿ : ಹೋರಾಟದ ಸಂಕಲ್ಪದೊಂದಿಗೆ ಶಾಸಕನಾಗಿ ನಿಮ್ಮ ಜೊತೆ ಇರುತ್ತೇನೆ. ನಾವು ಕೈಗೆ ಬಳೆ ತೊಟ್ಟಿಲ್ಲ. ನಾವೆಲ್ಲರೂ ಪಕ್ಷಾತೀತ, ಜಾತ್ಯಾತೀತ, ಧರ್ಮಾತೀತವಾಗಿ ಒಟ್ಟಾಗಬೇಕು. ನಮ್ಮಲ್ಲಿ ವಿಶ್ವಾಸವಿರಬೇಕು. ಕಂಚಿನಡ್ಕ ಟೋಲ್ ಹಿಂಪಡೆಯದ ಹೊರತು ಹೋರಾಟ ನಿಲ್ಲದು.
ಕಾಪು ಕ್ಷೇತ್ರದಲ್ಲಿ ರಾಜ್ಯ ಸರಕಾರ ಮಾಡಲು ಉದ್ದೇಶಿಸಿರುವ ಟೋಲ್ ಎಂದಿಗೂ ಆಗಲು ಬಿಡುವುದಿಲ್ಲ ಎಂದು ಕಾಪು ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು.
ಅವರು ಕಾರ್ಕಳ -ಪಡುಬಿದ್ರಿ ರಸ್ತೆಯ ಟೋಲ್ ಬೂತ್ ನಿರ್ಮಾಣದ ವಿರುದ್ಧ ಪಡುಬಿದ್ರಿ ಉದಯಾದ್ರಿ ದೇವಸ್ಥಾನದಲ್ಲಿ ಜರಗಿದ ಜನಾಗ್ರಹ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಬೆಳ್ಮಣ್ ಟೋಲ್ ಹೋರಾಟ ಸಮಿತಿಯ ಪ್ರಮುಖ, ನ್ಯಾಯವಾದಿ ಸರ್ವಜ್ಞ ತಂತ್ರಿ ಮಾತನಾಡಿ ಜನ ಸೇರಿದಾಗ ಮಾತ್ರ ಹೋರಾಟ ಯಶಸ್ಸು ಸಾಧ್ಯ. ಎಲ್ಲಾ ನಾಯಕರು ಬೆಂಬಲ ನೀಡಬೇಕು. ಜನಾಂದೋಲನ ಉಗ್ರ ಹೋರಾಟವಾಗಬೇಕು. ಸರಕಾರ ಈ ರೀತಿ ಜನರಿಂದ ಟೋಲ್ ಸಂಗ್ರಹಿಸುವ ಬದಲು ನಮ್ಮಲ್ಲಿಯ ಕಾರ್ಯಕ್ರಮಗಳ ಸಂದರ್ಭ ಭಿಕ್ಷಾ ಪಾತ್ರೆ ಇಡಲಿ. ಕಂಚಿನಡ್ಕ ಟೋಲ್ ಹಿಂಪಡೆಯದ ಹೊರತು ಹೋರಾಟ ನಿಲ್ಲದು.
ಆರ್ ಟಿ ಐ ಕಾರ್ಯಕರ್ತರಾದ ರಮಾನಾಥ ಮಾತನಾಡಿ ಪ್ರಸ್ತುತ ಇಲ್ಲಿ 5 -6 ಬ್ಲಾಕ್ ಸ್ಪಾಟ್, ಎರಡು ಅಪಾಯಕಾರಿ ಸೇತುವೆ, ಎರಡು ಪೊಲೀಸ್ ಸ್ಟೇಷನ್ಗಳಲ್ಲಿ ನೂರಾರು ಅಪಘಾತಗಳ ದೂರುಗಳಿವೆ. ನಮ್ಮ ರಾಜ್ಯದಲ್ಲಿ ಇಂತಹ ಮೂರು ಹೈವೇಗಳಿದ್ದು ಅಲ್ಲಿ ರಾಷ್ಟ್ರೀಯ ಹೆದ್ದಾರಿ ಇಲ್ಲದಾಗಿದೆ. ಈ ಭಾಗದ ವ್ಯಾಪಾರ, ಉದ್ದಿಮೆಗಳು ಅತಿ ಹೆಚ್ಚಿನ ಸುಂಕವನ್ನು ಸರಕಾರಕ್ಕೆ ಸಲ್ಲಿಸುತ್ತಿದ್ದಾರೆ. ಈ ಅಂಶಗಳನ್ನು ಕಾನೂನು ತಜ್ಞರೊಂದಿಗೆ ಚರ್ಚಿಸಿ ನ್ಯಾಯಾಲಕ್ಕೆ ತಿಳಿಸಬೇಕಾಗಿದೆ ಎಂದರು.
ಕರ್ನಾಟಕ ರಕ್ಷಣಾ ವೇದಿಕೆ ಪ್ರಮುಖ ಅನ್ಸಾರ್ ಅಹಮದ್, ಗುತ್ತಿಗೆದಾರ ಮುನಿಯಾಲು ಉದಯ ಕುಮಾರ್ ಶೆಟ್ಟಿ, ಕೆಪಿಸಿಸಿ ಕೋ ಆರ್ಡಿನೇಟರ್ ನವೀನ್ ಚಂದ್ರ ಶೆಟ್ಟಿ, ಕಾಪು ಕ್ಷೇತ್ರದ ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್, ಸಾಮಾಜಿಕ ಕಾರ್ಯಕರ್ತೆ ಅನಿತಾ ಡಿಸೋಜ, ಕೆನರಾ ಬಸ್ ಮಾಲಕರ ಸಂಘದ ಪ್ರತಿನಿಧಿ ಜ್ಯೋತಿ ಪ್ರಸಾದ್, ಬಿಜೆಪಿ ಉಡುಪಿ ಜಿಲ್ಲಾ ಉಪಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಟ್ಯಾಕ್ಸಿ ಮತ್ತು ಮ್ಯಾಕ್ಸಿ ಅಸೋಸಿಯೇಷನ್ ಸದಸ್ಯ ರಮೇಶ್ ಕೋಟ್ಯಾನ್
ಅಭಿಪ್ರಾಯ ಮಂಡಿಸಿದರು
ಜನಾಂದೋಲನದಲ್ಲಿ ಜನಾಗ್ರಹ : ಕಾರ್ಕಳ ಪಡುಬಿದ್ರಿ ರಾಜ್ಯ ಹೆದ್ದಾರಿಯಲ್ಲಿ ಕಂಚಿನಡ್ಕ ಪ್ರದೇಶದಲ್ಲಿ ಉದ್ದೇಶಿಸಿರುವ ಸುಂಕ ವಸೂಲಾತಿ ಕೇಂದ್ರಕ್ಕೆ ಸಮಸ್ತ ಕಾರ್ಕಳ ಪಡುಬಿದ್ರಿ ಹೆದ್ದಾರಿಯನ್ನು ಅವಲಂಬಿಸಿರುವ ಸುಮಾರು 40 ಹಳ್ಳಿಗಳ ಜನತೆಯ ಸಂಪೂರ್ಣ ವಿರೋಧ ವ್ಯಕ್ತಪಡಿಸುತ್ತಿದ್ದೇವೆ. ಯಾವುದೇ ಕಾರಣಕ್ಕೂ ಈ ರಾಜ್ಯ ಹೆದ್ದಾರಿಯಲ್ಲಿ ಸುಂಕ ವಸೂಲಾತಿ ಕೇಂದ್ರ ಸ್ಥಾಪಿಸಲು ಅವಕಾಶ ಕೊಡುವುದಿಲ್ಲ. ಈ ಜನಾಗ್ರಹ ಸಭೆಯ ಮೂಲಕ ರಾಜ್ಯ ಸರಕಾರವನ್ನು ಒತ್ತಾಯಿಸುವುದೇನೆಂದರೆ ಜನ ವಿರೋಧಿಯಾಗಿರುವ ಈ ಸುಂಕ ವಸೂಲಾತಿ ಕೇಂದ್ರದ ಪ್ರಸ್ತಾವನೆಯನ್ನು ಈ ಕೂಡಲೇ ಪಡೆಯಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ 40 ಹಳ್ಳಿಯ ಜನರು ಸೇರಿ ಜನಾಂದೋಲನದ ಮೂಲಕ ಉಗ್ರ ಹೋರಾಟ ಮಾಡಲು ಸಿದ್ಧರಿದ್ದೇವೆ ಹಾಗೂ ಜನರ ವಿರೋಧದ ನಡುವೆಯೂ ಸುಂಕ ವಸೂಲಾತಿ ಕೇಂದ್ರ ಸರಕಾರ ರಚಿಸಲು ಮುಂದಾದರೆ ಮುಂದೆ ಆಗುವ ಎಲ್ಲಾ ಅನಾಹುತಗಳಿಗೆ ಸರಕಾರ ಸಂಪೂರ್ಣ ಹೊಣೆಯಾಗಲಿದೆ ಎಂದು ಎಚ್ಚರಿಕೆಯ ಸಂದೇಶ ನೀಡುತ್ತಿದ್ದೇವೆ ಎಂದು ಅಭಿಪ್ರಾಯ ಮಂಡಿಸಲಾಯಿತು.
ಜನಾಗ್ರಹ ಸಭೆಯಲ್ಲಿ ಉದ್ಯಮಿ ಸುಹಾಸ್ ಹೆಗ್ಡೆ ನಂದಳಿಕೆಯವರನ್ನು ಸರ್ವಾನುಮತದಿಂದ ಕಾರ್ಕಳ -ಪಡುಬಿದ್ರಿ ಟೋಲ್ ವಿರೋಧಿ ಹೋರಾಟದ ಅಧ್ಯಕ್ಷರನ್ನಾಗಿ ಮತ್ತು ಸಮಿತಿಯ ಪದಾಧಿಕಾರಿಗಳನ್ನು ಆರಿಸಲಾಯಿತು.
ವಿವಿಧ ರಾಜಕೀಯ ಪಕ್ಷದ ಮುಖಂಡರುಗಳು, ಸಂಘಟನೆಯ ಪ್ರಮುಖರು ಉಪಸ್ಥಿತರಿದ್ದರು.
ದೀಪಕ್ ಕಾಮತ್ ಕಾಂಜರಕಟ್ಟೆ ನಿರೂಪಿಸಿದರು.