ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕಳತ್ತೂರು ಫ್ರೆಂಡ್ಸ್ ಗ್ರೂಪ್ : ಆಟಿಡೊಂಜಿ‌ ದಿನ ಕಾರ್ಯಕ್ರಮ

Posted On: 15-08-2024 02:11PM

ಕಾಪು : ತುಳುನಾಡಿನ‌ ಸಂಸ್ಕೃತಿಯನ್ನು ಬಿಂಬಿಸುವ ಮತ್ತು ನಾವು ಮರೆತಿರುವ ಹಿಂದಿನ‌ ತಲೆಮಾರಿನ ಜೀವನ‌ ಪದ್ಧತಿ, ಚಟುವಟಿಕೆಗಳನ್ನು ಮತ್ತೆ ನೆನಪಿಸಿ ಕೊಡುವಲ್ಲಿ ಆಟಿಡೊಂಜಿ‌ ದಿನ ಕಾರ್ಯಕ್ರಮ ಸಹಕಾರಿಯಾಗಲಿದೆ ಎಂದು ಉಡುಪಿ - ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಫ್ರೆಂಡ್ಸ್ ಗ್ರೂಪ್ ಕಳತ್ತೂರು ಇವರ ವತಿಯಿಂದ ಕುಶಲ ಶೇಖರ ಶೆಟ್ಟಿ ಸಭಾಂಗಣದಲ್ಲಿ ರವಿವಾರ ಜರಗಿದ ಆಟಿಡೊಂಜಿ‌ ದಿನ ಕಾರ್ಯಕ್ರಮದಲ್ಲಿ ಕೃಷಿ ಕ್ಷೇತ್ರದ ಹಿರಿಯ ಗ್ರಾಮೀಣ ಮಹಿಳೆಯರನ್ನು ಸಮ್ಮಾನಿಸಿ ಅವರು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಬದುಕಿನ ಹಳೇ ನೆನಪುಗಳನ್ನು ಮೆಲುಕು ಹಾಕಿಕೊಳ್ಳುವ ನಿಟ್ಟಿನಲ್ಲಿ ಆಟಿಡೊಂಜಿ‌ ದಿನ ಕಾರ್ಯಕ್ರಮ ಪೂರಕವಾಗಿದೆ. ತೆರೆಮರೆಗೆ ಸರಿಯುತ್ತಿರುವ ಸಂಸ್ಕೃತಿ, ಸಂಸ್ಕಾರ, ಆಚಾರ, ವಿಚಾರಗಳನ್ನು ಮುನ್ನಲೆಗೆ ತರುವ ಪ್ರಯತ್ನ ಇದಾಗಿದೆ ಎಂದರು. ಮಾಜಿ ಶಾಸಕ ಲಾಲಾಜಿ‌ ಆರ್. ಮೆಂಡನ್, ಉದ್ಯಮಿ ಶೇಖರ್ ಬಿ. ಶೆಟ್ಟಿ ಮತ್ತು ಕುಶಲ ಶೇಖರ್ ಶೆಟ್ಟಿ ದಂಪತಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಪ್ರತಿಭಾವಂತ ವಿದ್ಯಾರ್ಥಿಗಳಾದ ಸಮನ್ವಿ ಶೆಟ್ಟಿ, ಹರ್ಷಿತಾ ಶೆಟ್ಟಿ ಗಾರ್ ಮತ್ತು ದೀಕ್ಷಾ ಅವರನ್ನು ಪ್ರತಿಭಾ ಪುರಸ್ಕಾರದೊಂದಿಗೆ ಗೌರವಿಸಲಾಯಿತು. ಸಾಧಕರಾದ ಕಾವ್ಯ ರೋಹಿತ್ ಕುಮಾರ್, ಸಾನ್ವಿ ಶೆಟ್ಟಿ ಅವರನ್ನು ಗೌರವಿಸಲಾಯಿತು. ನ್ಯಾಯವಾದಿ ಉಮೇಶ್ ಶೆಟ್ಟಿ ಕಳತ್ತೂರು, ಕುತ್ಯಾರು ಗ್ರಾ.ಪಂ. ಅಧ್ಯಕ್ಷ ಜನಾರ್ದನ ಆಚಾರ್ಯ, ಕಾಪು ಪುರಸಭೆ ಸದಸ್ಯರಾದ ಅರುಣ್ ಶೆಟ್ಟಿ ಪಾದೂರು, ಉಮೇಶ್ ಕರ್ಕೇರ, ಅನಿಲ್ ಕುಮಾರ್, ಗುತ್ತಿಗೆದಾರ ಕಿಶೋರ್ ಕುಮಾರ್ ಗುರ್ಮೆ, ಶಿರ್ವ ಮಹಿಳಾ ಮಂಡಳಿ ಗೌರವಾಧ್ಯಕ್ಷೆ ಬಬಿತಾ ಜಗದೀಶ್ ಅರಸ, ಕಾಪು ಮಹಿಳಾ ಮಂಡಳಿ ಅಧ್ಯಕ್ಷೆ ಜಯಲಕ್ಷ್ಮೀ ಸುರೇಶ್ ಶೆಟ್ಟಿ, ಹಿರಿಯರಾದ ವಿಶ್ವನಾಥ ಪೂಜಾರಿ ಗರಡಿಮನೆ, ವಳದೂರು ನಾರಾಯಣ ಶೆಟ್ಟಿ, ಸುಂದರ್ ಶೆಟ್ಟಿ ಕಳತ್ತೂರು, ಆನಂದಿ ವಾಸು ಶೆಟ್ಟಿ, ಫ್ರೆಂಡ್ಸ್ ಗ್ರೂಫ್ ಗೌರವಾಧ್ಯಕ್ಷ ರಂಗನಾಥ ಶೆಟ್ಟಿ ಕಳತ್ತೂರು, ಅಧ್ಯಕ್ಷ ರೋಹಿತ್ ಕುಮಾರ್ ಉಪಸ್ಥಿತರಿದ್ದರು.

ಕಳತ್ತೂರು ಫ್ರೆಂಡ್ಸ್ ಗ್ರೂಫ್ ನ ಸದಸ್ಯರಾದ ಅಶ್ವಿನಿ ಸ್ವಾಗತಿಸಿ, ಸುನೀತಾ ರಂಗನಾಥ್ ಶೆಟ್ಟಿ ವಂದಿಸಿದರು. ರಚನಾ ಕುಂದರ್ ಕಾರ್ಯಕ್ರಮ ನಿರೂಪಿಸಿದರು.