ಕಂಚಿನಡ್ಕ ರಾಜ್ಯ ಹೆದ್ದಾರಿ ಟೋಲ್ : ಪಡುಬಿದ್ರಿ ರೋಟರಿ, ಲಯನ್ಸ್, ಜೆಸಿಐ ಸಂಸ್ಥೆಗಳಿಂದ ಪ್ರತಿಭಟನೆಗೆ ಸಹಕಾರ
Posted On:
17-08-2024 06:46PM
ಪಡುಬಿದ್ರಿ : ಇಲ್ಲಿನ ಕಂಚಿನಡ್ಕದಲ್ಲಿ ರಾಜ್ಯ ಹೆದ್ದಾರಿಯ ಟೋಲ್ ನಿರ್ಮಾಣಕ್ಕೆ ರಾಜ್ಯ ಸರಕಾರ ಯೋಜನೆ ರೂಪಿಸಿದ್ದು ಇದನ್ನು ವಿರೋಧಿಸುವ ನಿಟ್ಟಿನಲ್ಲಿ ಅಂತರಾಷ್ಟ್ರೀಯ ಸಂಸ್ಥೆಗಳಾದ ಪಡುಬಿದ್ರಿ ರೋಟರಿ ಕ್ಲಬ್, ಲಯನ್ಸ್ ಕ್ಲಬ್, ಲಯನ್ಸ್ ಸ್ಫೂರ್ತಿ, ಜೆಸಿಐ ಪಡುಬಿದ್ರಿ ಶನಿವಾರ ಪಡುಬಿದ್ರಿ ಸೊಸೈಟಿ ಸಭಾಂಗಣದಲ್ಲಿ ಕರೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಜೆಸಿಐ ಪಡುಬಿದ್ರಿ ಸಂಸ್ಥೆಯ ಪ್ರಮುಖರಾದ ವೈ ಸುಕುಮಾರ್ ಮಾತನಾಡಿ, ಅಭಿವೃದ್ಧಿಯ ಹೆಸರಲ್ಲಿ ಸರಕಾರವು ಕೇಂದ್ರ ಮತ್ತು ರಾಜ್ಯ ಹೆದ್ದಾರಿಗೆ ಟೋಲ್ ಸಂಗ್ರಹ ಮಾಡುತ್ತಿದ್ದು, ಇದು ಜನ ಸಾಮಾನ್ಯರಿಗೆ ಹೊರೆಯಾಗುತ್ತಿದೆ ಎಂದರು.
ಪಡುಬಿದ್ರಿ ರೋಟರಿ ಕ್ಲಬ್ ಅಧ್ಯಕ್ಷೆ ತಸ್ನೀನ್ ಅರಾ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಉಡುಪಿ ಜಿಲ್ಲೆಗೆ 2 ಟೋಲ್ ಈಗಾಗಲೇ ಇದೆ. ಈಗಾಗಲೇ ಕೇಂದ್ರ ಸರಕಾರದ ರಾಷ್ಟ್ರೀಯ ಹೆದ್ದಾರಿಗೆ ಹೆಜಮಾಡಿಯಲ್ಲಿ ಟೋಲ್ ಸಂಗ್ರಹ ಅಗುತ್ತಿದೆ. ಇದು ಹಗಲು ದರೋಡೆಯಾಗಿದೆ. ಹೆಜಮಾಡಿಯಿಂದ ಪಡುಬಿದ್ರಿ ಕಂಚಿನಡ್ಕಕ್ಕೆ ಕೇವಲ 5 ಕಿಲೋ ಮೀಟರ್ ಅಂತರವಿದ್ದು ಮತ್ತೆ ರಾಜ್ಯ ಟೋಲ್ ನಿಯಮಕ್ಕೆ ಮುಂದಾಗಿರುವುದು ಹಾಸ್ಯಾಸ್ಪದವಾಗಿದೆ ಎಂದರು.
ಲಯನ್ಸ್ ಕ್ಲಬ್ ಜಿಲ್ಲಾ ಕೋರ್ಡಿನೇಟರ್ ಮಿಥುನ್ ಆರ್ ಹೆಗ್ಡೆ, ಮಾತನಾಡಿ ಯಾವುದೇ ಕಾರಣಕ್ಕೂ ಇನ್ನೊಂದು ಟೋಲ್ ಗೆ ಅವಕಾಶ ನೀಡುವುದಿಲ್ಲ. ಪ್ರತಿಭಟನೆಯಲ್ಲಿ ಕಾರ್ಕಳದಿಂದ ಪಡುಬಿದ್ರಿವರೆಗಿನ ನಮ್ಮ ಸಂಸ್ಥೆಯ ಘಟಕಗಳ ಪ್ರಮುಖರು ಭಾಗವಹಿಸಲಿದ್ದಾರೆ ಎಂದರು.
ಜೆಸಿಐ ಪಡುಬಿದ್ರಿ ಅಧ್ಯಕ್ಷ ಸಂಜಿತ್ ಎರ್ಮಾಳು ಮಾತನಾಡಿ, ಈಗಾಗಲೇ ಹೆಜಮಾಡಿಯಲ್ಲಿ ಟೋಲ್ ಗೇಟ್ ಇದ್ದು, 60 ಕಿ.ಮೀ. ಒಳಗೆ ಇನ್ನೊಂದು ಸುಂಕ ವಸೂಲಿ ಕೇಂದ್ರ ಇರಲು ಸಾಧ್ಯವಿಲ್ಲ. ಅದರಲ್ಲೂ ಕಂಚಿನಡ್ಕ ಮತ್ತು ಹೆಜಮಾಡಿಗೆ ಕೇವಲ 5 ಕಿ.ಮೀ ಅಂತರ ಇದು ಜನರಿಗೆ ಹೊರೆಯಾಗಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪಡುಬಿದ್ರಿ ರೋಟರಿ ಕ್ಲಬ್ ಅಧ್ಯಕ್ಷೆ ತಸ್ನೀನ್ ಅರಾ, ಲಯನ್ಸ್ ಕ್ಲಬ್ ಜಿಲ್ಲಾ ಕೋರ್ಡಿನೇಟರ್ ಮಿಥುನ್ ಆರ್ ಹೆಗ್ಡೆ, ಲಯನ್ಸ್ ಪಡುಬಿದ್ರಿ ಅಧ್ಯಕ್ಷ ಸಂಪತ್ ಪಡುಬಿದ್ರಿ, ಕಾರ್ಯದರ್ಶಿ ಪ್ರಗತ್ ಗೋಪಾಲ್ ಶೆಟ್ಟಿ, ಕೋಶಾಧಿಕಾರಿ ಕಪಿಲ್, ಲಯನ್ಸ್ ಸ್ಫೂರ್ತಿ ಕ್ಲಬ್ ಅಧ್ಯಕ್ಷೆ ಸ್ನೇಹ ಪ್ರವೀಣ್, ಕೋಶಾಧಿಕಾರಿ ಕಸ್ತೂರಿ ಪ್ರವೀಣ್, ಜೆಸಿಐ ಪಡುಬಿದ್ರಿ ಅಧ್ಯಕ್ಷ ಸಂಜಿತ್ ಎರ್ಮಾಳು, ಜೆಸಿಐ ಪ್ರಮುಖ ವೈ ಸುಕುಮಾರ್ ಉಪಸ್ಥಿತರಿದ್ದರು.