ಪಡುಬಿದ್ರಿ : ಕಂಚಿನಡ್ಕ ಟೋಲಿಗೆ ತಾತ್ಕಾಲಿಕ ತಡೆ ಆದೇಶ
Posted On:
23-08-2024 05:07PM
ಪಡುಬಿದ್ರಿ : ಕಂಚನಡ್ಕದಲ್ಲಿ ಟೋಲ್ ಗೇಟ್ ರದ್ದು ಮಾಡಬೇಕೆಂದು ಆಗ್ರಹಿಸಿ ಬುಧವಾರ ಕಾಂಗ್ರೆಸ್ ಪಕ್ಷದಿಂದ ಮಾಜಿ ಸಚಿವ ವಿನಯಕುಮಾರ್ ಸೊರಕೆ ನೇತೃತ್ವದಲ್ಲಿ ಪ್ರತಿಭಟನಾ ಸಭೆ ನಡೆಸಿದ್ದು, ಶುಕ್ರವಾರ ಕಾಂಗ್ರೆಸ್ ನಿಯೋಗ ಬೆಂಗಳೂರಿಗೆ ತೆರಳಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿಯವರನ್ನು ಭೇಟಿಯಾಗಿ ಸ್ಥಳೀಯ ಸಮಸ್ಯೆಗಳು, ಟೋಲ್ ರದ್ಧತಿ ಬಗ್ಗೆ ಸಚಿವರ ಗಮನಸೆಳೆದಿದ್ದು ಆ ಪ್ರಯುಕ್ತ ಕಂಚಿನಡ್ಕ ಟೋಲ್‌ಗೇಟ್ ತಾತ್ಕಾಲಿಕ ರದ್ಧತಿಯ ಆದೇಶ ಹೊರಡಿಸಿದ್ದಾರೆ.
ಆದೇಶದಲ್ಲಿ, ಪಡುಬಿದ್ರಿ- ಬೆಳ್ಳಣ್ಣು-ಕಾರ್ಕಳ ರಾಜ್ಯ ಹೆದ್ದಾರಿಯ ಕಂಚಿನಡ್ಕ ಪ್ರದೇಶದಲ್ಲಿ ಉದ್ದೇಶಿಸಿರುವಂತಹ ಸುಂಕ ವಸೂಲಾತಿ ಕೇಂದ್ರದಿಂದ ಉದ್ಭವಿಸಿರುವಂತಹ ಸಮಸ್ಯೆಗಳು, ಕಂಚಿನಡ್ಕ ಪ್ರದೇಶವು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಹಾಗೂ ವಾಹನ ದಟ್ಟಣೆ ಇರುವ ರಸ್ತೆಯನ್ನು ಹೊಂದಿದ್ದು, ಈವರೆಗೂ ಡಿವೈಡರ್‌ಗಳ ನಿರ್ಮಾಣವಾಗಲಿ, ಸರ್ವಿಸ್ ರಸ್ತೆ, ಶೌಚಾಲಯ ನಿರ್ಮಾಣ, ವಿಶ್ರಾಂತಿ ಗೃಹವಾಗಲಿ ನಿರ್ಮಾಣವಾಗಿಲ್ಲ ಎಂದು ಉಲ್ಲೇಖಿಸಲಾಗಿದೆ.
ಮುಂದುವರೆದಂತೆ, ಈಗಾಗಲೇ ಪಡುಬಿದ್ರಿ ಜಂಕ್ಷನ್‌ನಿಂದ ರಾಜ್ಯ ಹೆದ್ದಾರಿ-66 ರಲ್ಲಿನ ಪಡುಬಿದ್ರಿ ಜಂಕ್ಷನ್‌ನಿಂದ ಮಂಗಳೂರು ಕಡೆಗೆ 5 ಕಿ.ಮೀ. ನಲ್ಲಿರುವ ಹೆಜಮಾಡಿ ಬಳಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ಟೋಲ್ ನಿರ್ಮಿಸಿ ಶುಲ್ಕ ಸಂಗ್ರಹಣೆ ಮಾಡಲಾಗುತ್ತಿದ್ದು, ಉದ್ದೇಶಿತ ಕಂಚಿನಡ್ಕ ಪ್ರದೇಶವು ಕೇವಲ 7.50 ಕಿ.ಮೀ. ದೂರದಲ್ಲಿರುವುದರಿಂದ, ಈ ಟೋಲ್ ಪ್ಲಾಜಾ ನಿರ್ಮಾಣ ಕಾರ್ಯವು ಆತುರದ ನಿರ್ಧಾರವಾಗಿರುವುದಲ್ಲದೇ, ಪ್ರತಿನಿತ್ಯ ಈ ರಸ್ತೆಯನ್ನೆ ಅವಲಿಂಬಿಸಿರುವ, ಸದರಿ ರಸ್ತೆಯಲ್ಲಿ ಓಡಾಡುವಂತಹ ಸುತ್ತಮುತ್ತಲಿನ ಗ್ರಾಮಸ್ಥರು, ವಿದ್ಯಾರ್ಥಿಗಳು, ಸಣ್ಣ ವ್ಯಾಪಾರಸ್ಥರು, ಕಾರ್ಮಿಕರು, ಕ್ಯಾಬ್ ಮತ್ತು ಆಟೋ ಚಾಲಕರುಗಳು ಎರಡು ಬಾರಿ ಶುಲ್ಕವನ್ನು ಭರಿಸಬೇಕಾಗುತ್ತದೆ. ಇದರಿಂದ ಆರ್ಥಿಕವಾಗಿ ತೊಂದರೆಗೊಳಗಾಗುತ್ತಾರೆಂದು ಸಭೆಯಲ್ಲಿದ್ದ ಪ್ರತಿನಿಧಿಗಳು ಕಳವಳ ವ್ಯಕ್ತಪಡಿಸಿ, ಸುಂಕ ವಸೂಲಾತಿ ಕೇಂದ್ರವನ್ನು ರದ್ದುಪಡಿಸುವಂತೆ ಅಭಿಪ್ರಾಯ ವ್ಯಕ್ತಪಡಿಸಿರುತ್ತಾರೆ.
ಅಲ್ಲದೇ ಇಲಾಖೆಯ ಈ ಕ್ರಮದ ಬಗ್ಗೆ ಆಗಸ್ಟ್ 24, ಶನಿವಾರದಂದು ಸ್ಥಳೀಯ ಹೋರಾಟ ಸಮಿತಿಗಳೊಂದಿಗೆ ಕಾರ್ಕಳ ಪಡುಬಿದ್ರೆ ರಾಜ್ಯ ಹೆದ್ದಾರಿ ಸಂಪೂರ್ಣ ಬಂದ್‌ಗೆ ಕರೆ ನೀಡಿದ್ದು, ಪ್ರತಿಭಟನಾ ಸಭೆಯನ್ನೂ ನಡೆಸುತ್ತಿರುವುದಾಗಿ ತಿಳಿಸಿರುತ್ತಾರೆ.
ಈ ವಿಷಯವು ಸಾರ್ವಜನಿಕ ಹಿತದೃಷ್ಟಿಯಿಂದಾಗಿ ಸೂಕ್ಷ್ಮತೆಯಿಂದ ಕೂಡಿರುವುದರಿಂದ, ಮೇಲ್ಕಂಡಂತೆ ಕಂಚಿನಡ್ಕ ಪ್ರದೇಶದಲ್ಲಿ ಕಾರ್ಯಾರಂಭ ಮಾಡಲು ಉದ್ದೇಶಿಸಿರುವ ಸುಂಕ ವಸೂಲಾತಿ ಕೇಂದ್ರದ ಬಗ್ಗೆ ಮತ್ತೊಮ್ಮೆ ಕೂಲಂಕಷವಾಗಿ ಪರಿಶೀಲಿಸಿ, ಮತ್ತೊಮ್ಮೆ ಸಭೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳುವರೆಗೆ ಸದರಿ ಸಂಸ್ಥೆಗೆ ನೀಡಲಾಗಿರುವ ಕಾರ್ಯಾದೇಶ ಆದೇಶವನ್ನು ತಾತ್ಕಾಲಿಕವಾಗಿ ತಡೆಹಿಡಿದು, ಕಂಚಿನಡ್ಕ ಪ್ರದೇಶದಲ್ಲಿ ಸಂಚಾರ ವ್ಯವಸ್ಥೆಯನ್ನು ಯಥಾಸ್ಥಿತಿಯಲ್ಲಿ ಮುಂದುವರೆಸುವ ಬಗ್ಗೆ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದೆ.