ಪಡುಬಿದ್ರಿ : ಕಂಚಿನಡ್ಕ ಟೋಲ್ ಗೇಟ್ ವಿರುದ್ಧ ಬೃಹತ್ ಪ್ರತಿಭಟನೆ ; ಸಾವಿರಾರು ಮಂದಿ ಭಾಗಿ
Posted On:
24-08-2024 06:38PM
ಪಡುಬಿದ್ರಿ : ಇಲ್ಲಿನ ಕಂಚಿನಡ್ಕದಲ್ಲಿ ರಾಜ್ಯ ಸರಕಾರ ನಿರ್ಮಿಸಲು ಉದ್ದೇಶಿಸಿರುವ ಟೋಲ್ ಸಂಗ್ರಹಣಾ ಕೇಂದ್ರವನ್ನು ಶಾಶ್ವತವಾಗಿ ರದ್ದುಗೊಳಿಸಬೇಕೆಂದು ಒತ್ತಾಯಿಸಿ ಪ್ರಸ್ತಾವಿತ ಕಂಚಿನಡ್ಕದ ಟೋಲ್ ಪ್ರದೇಶದಲ್ಲಿ ಶನಿವಾರ ಬೃಹತ್ ಪ್ರತಿಭಟನೆ ನಡೆಯಿತು.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಅಪರ ಜಿಲ್ಲಾಧಿಕಾರಿ ಮಮತಾ ದೇವಿ, ಕಾಪು ತಹಶೀಲ್ದಾರ್ ಡಾ. ಪ್ರತಿಭಾ ಆರ್ ರವರ ಮೂಲಕವಾಗಿ ಜಿಲ್ಲಾಡಳಿತ ಮತ್ತು ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
ಹೋರಾಟ ಸಮಿತಿ ಅಧ್ಯಕ್ಷ ಸುಹಾಸ್ ಹೆಗ್ಡೆ ನಂದಳಿಕೆ ಮಾತನಾಡಿ, ತಾತ್ಕಾಲಿಕ ತಡೆ ಸ್ವಾಗತಾರ್ಹ. ಕಂಚಿನಡ್ಕದ ಟೋಲ್ ಗೇಟ್ ವಿರೋಧಿ ಹೋರಾಟಕ್ಕೆ ಪಕ್ಷಾತೀತವಾಗಿ ಎಲ್ಲರೂ ಕೈ ಜೋಡಿಸಿರುವುದು ಹೋರಾಟಕ್ಕೆ ಬಲ ಬಂದಿದೆ. ಈ ಯೋಜನೆ ಸಂಪೂರ್ಣ ರದ್ದುಗೊಳ್ಳುವ ತನಕ ಹೋರಾಟ ಮುಂದುವರಿಯಲಿದೆ. ರಾಜ್ಯ ಸರಕಾರ ಕೂಡಲೇ ಸಂಪೂರ್ಣ ರದ್ಧು ಪಡಿಸಿ ಆದೇಶ ಹೊರಡಿಸಲಿ ಎಂದು ಆಗ್ರಹಿಸಿದರು.
ಉಡುಪಿ - ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಈಗಾಗಲೇ ಲೋಕೋಪಯೋಗಿ ಇಲಾಖಾ ಸಚಿವರು ತಾತ್ಕಾಲಿಕ ರದ್ದು ಎಂಬ ಆದೇಶ ಹೊರಡಿಸಿದ್ದಾರೆ. ಆದರೆ ಈ ಆದೇಶ ಶಾಶ್ವತ ರದ್ದಾಗಬೇಕು ಎಂದರು.
ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಈಶವಿಠಲದಾಸ ಸ್ವಾಮೀಜಿ, ಮುದರಂಗಡಿ ಚರ್ಚ್ ನ ಧರ್ಮಗುರು ರೆ. ಫಾ. ಫೆಡ್ರಿಕ್ ಡಿ ಸೋಜ, ಉಡುಪಿ ಶಾಸಕ ಯಶಪಾಲ್ ಸುವರ್ಣ, ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ, ಮಾಜಿ ಶಾಸಕರಾದ ಲಾಲಾಜಿ ಆರ್. ಮೆಂಡನ್, ಕೆ. ರಘುಪತಿ ಭಟ್, ಪ್ರಮುಖರಾದ ಯೋಗೀಶ್ ಶೆಟ್ಟಿ ಬಾಲಾಜಿ, ಮುನಿಯಾಲು ಉದಯ ಕುಮಾರ್ ಶೆಟ್ಟಿ, ಮಟ್ಟಾರು ರತ್ನಾಕರ ಹೆಗ್ಡೆ, ಅನ್ಸಾರ್ ಅಹಮದ್ ಮೊದಲಾದವರು ಮಾತನಾಡಿ ಹೋರಾಟಕ್ಕೆ ಬೆಂಬಲ ಸೂಚಿಸಿದರು.
ಉಡುಪಿ ಜಿಲ್ಲೆಯ ವಿವಿಧ ಸಂಘಟನೆಗಳು, ಕಾಪು, ಕಾರ್ಕಳ, ಉಡುಪಿ, ಮೂಲ್ಕಿ ತಾಲೂಕು ಮತ್ತು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜನಪ್ರತಿನಿಧಿಗಳು, ರಾಜಕೀಯ ಪಕ್ಷಗಳ ಮುಖಂಡರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಸುತ್ತಲಿನ 40 ಗ್ರಾಮಗಳ ಸಾರ್ವಜನಿಕರು ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಸುಹಾಸ್ ಹೆಗ್ಡೆ ನಂದಳಿಕೆ ಸ್ವಾಗತಿಸಿ, ಪ್ರಸ್ತಾವನೆಗೈದರು. ಸರ್ವಜ್ಞ ತಂತ್ರಿ ಕಾರ್ಯಕ್ರಮ ನಿರೂಪಿಸಿದರು.
ಸಭೆಯ ಬಳಿಕ ಕಂಚಿನಡ್ಕದಿಂದ ಪಡುಬಿದ್ರಿ ಜಂಕ್ಷನ್ ವರೆಗೆ ಜಾಥಾ ನಡೆಯಿತು. ಪೋಲಿಸ್ ಇಲಾಖೆ ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದರು.