ಸೆಪ್ಟೆಂಬರ್ 3 : ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ನವದುರ್ಗಾ ಲೇಖನ ಯಜ್ಞ - ಸಂಕಲ್ಪ ಸ್ವೀಕಾರ
Posted On:
01-09-2024 07:02PM
ಕಾಪು : ಹೊಸ ಮಾರಿಗುಡಿಯ ಜೀರ್ಣೋದ್ಧಾರ, ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಪ್ರಯುಕ್ತ ಪೂರ್ವಭಾವಿಯಾಗಿ ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ಮಾರಿಯಮ್ಮ ದೇವಿಯ ಭಕ್ತರನ್ನು ಸೇರಿಸಿಕೊಂಡು ನವದುರ್ಗಾ ಲೇಖನ ಯಜ್ಞವನ್ನು ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ. ಸೆಪ್ಟೆಂಬರ್ 3 ರಂದು ಬೆಳಿಗ್ಗೆ ಮಂಗಳ ಗೌರಿ ಪೂಜೆಯೊಂದಿಗೆ ಸಮಿತಿ ಉದ್ಘಾಟನೆ ಮತ್ತು ಲೇಖನ ಸಂಕಲ್ಪ ಸ್ವೀಕಾರ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ಕಾಪು ಶ್ರೀ ಹೊಸಮಾರಿಗುಡಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಕೆ. ವಾಸುದೇವ ಶೆಟ್ಟಿ ಹೇಳಿದರು.
ಅವರು ಕಾಪು ಶ್ರೀ ಹೊಸಮಾರಿಗುಡಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ವಿಶ್ವ ವ್ಯಾಪಿಯಾಗಿ ನೆಲೆಸಿರುವ ಭಕ್ತರ ಆರಾಧನಾ ಕ್ಷೇತ್ರವಾಗಿದೆ ಪ್ರಪಂಚದಾದ್ಯಂತ ನೆಲೆಸಿರುವ ಭಕ್ತರ ಶ್ರದ್ದಾ ಕೇಂದ್ರವಾಗಿರುವ ಅತ್ಯಂತ ಪವಾಡ ಕ್ಷೇತ್ರ ಕಾಪು ಶ್ರೀ ಹೊಸ ಮಾರಿಗುಡಿಯ ಮಾರಿಯಮ್ಮನ ಸನ್ನಿಧಿಯಲ್ಲಿ ಸುಮಾರು 30 ಕೋಟಿ ರೂಪಾಯಿ ವೆಚ್ಚದ ಪ್ರಥಮ ಹಂತದ ಜೀರ್ಣೋದ್ದಾರ ಕಾರ್ಯಗಳು ಭರದಿಂದ ಸಾಗುತ್ತಿವೆ.
ಮುಂದಿನ ಮಾರ್ಚ್ ತಿಂಗಳಲ್ಲಿ ನಡೆಯುವ ಜೀರ್ಣೋದ್ದಾರ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಅಂಗವಾಗಿ ನವದುರ್ಗಾ ಲೇಖನ ಯಜ್ಞ ನಡೆಯಲಿದೆ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿಯ ನೇತೃತ್ವದಲ್ಲಿ ನವದುರ್ಗಾ ಲೇಖನ ಯಜ್ಞ ಮತ್ತು ನವಚಂಡಿಯಾಗವನ್ನು ಕೈಗೊಳ್ಳಲಾಗಿದ್ದು ಇದಕ್ಕಾಗಿ ಪ್ರತ್ಯೇಕ ಸಮಿತಿಯನ್ನು ರಚನೆ ಮಾಡಲಾಗಿದೆ ಈ ಸಮಿತಿಯ ಮುಖಾಂತರ ನವದುರ್ಗಾ ಲೇಖನ ಯಜ್ಞದಲ್ಲಿ ಸಂಕಲ್ಪ ಪೂರ್ವಕವಾಗಿ ಭಾಗಿಯಾಗಿ ಅಮ್ಮನ ಅನುಗ್ರಹವನ್ನು ಪಡೆಯಲು ಭಕ್ತಾದಿಗಳಿಗೆ ಅವಕಾಶವನ್ನು ಒದಗಿಸಿಕೊಡಲಾಗುತ್ತಿದೆ.
ದೇವಸ್ಥಾನದ ಪ್ರಧಾನ ತಂತ್ರಿಗಳಾದ ವಿದ್ವಾನ್ ಕೆ ಪಿ ಕುಮಾರಗುರು ತಂತ್ರಿ ಅವರ ನೇತೃತ್ವದಲ್ಲಿ ಪ್ರಧಾನ ಅರ್ಚಕರಾದ ವೇದಮೂರ್ತಿ ಶ್ರೀನಿವಾಸ ತಂತ್ರಿ ಇವರ ಉಪಸ್ಥಿತಿಯಲ್ಲಿ ಮಂಗಳ ಗೌರಿ ಪೂಜೆ ಮತ್ತು ಲೇಖನ ಸಂಕಲ್ಪಕ್ಕೆ ಚಾಲನೆ ನೀಡಲಾಗುವುದು. ಬೆಳಿಗ್ಗೆ 8.30 ಕ್ಕೆ ಅಮ್ಮನ ಸನ್ನಿಧಾನದಲ್ಲಿ ಪ್ರಾರ್ಥನೆ, 8:40 ಕ್ಕೆ ಲೇಖನ ಸಂಕಲ್ಪಕ್ಕೆ ಭಕ್ತಾದಿಗಳನ್ನು ಮಂಗಳ ಗೌರಿ ಮಂಟಪಕ್ಕೆ ಕರೆದೊಯ್ಯುವುದು, 8:50 ಕ್ಕೆ ಲೇಖನ ಸಂಕಲ್ಪದ ಭಕ್ತರು ಆಸೀನರಾಗುವುದು, 9ಕ್ಕೆ ಮಂಗಳ ಗೌರಿ ಪೂಜೆ ಮತ್ತು ಲೇಖನ ಸಂಕಲ್ಪ ಆರಂಭ, 10.15 ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ, 12 ಗಂಟೆಗೆ ಮಹಾ ಮಂಗಳಾರತಿ, ಮಧ್ಯಾಹ್ನ 1:00 ಗೆ ಪ್ರಸಾದ ಭೋಜನ ವಿತರಣೆ ನಡೆಯಲಿದೆ.
ನವದುರ್ಗಾ ಲೇಖನ ಯಜ್ಞದ ಪುಸ್ತಕ ಪಡೆಯಲು ನೋಂದಾವಣೆ ಮಾಡಿ, ಸಂಕಲ್ಪ ಸ್ವೀಕರಿಸುವ ಭಕ್ತರು ರೂ. 199 ನೀಡಿ, ಹೆಸರು ನೋಂದಾಯಿಸಿದ ಬಳಿಕ ಮಂಗಳಗೌರಿ ಪೂಜೆಯಲ್ಲಿ ಪಾಲ್ಗೊಂಡು, ನವದುರ್ಗಾ ಲೇಖನ ಯಜ್ಞದ ಸಂಕಲ್ಪ ಸ್ವೀಕರಿಸಲು ಅವಕಾಶ ಮಾಡಿಕೊಡಲಾಗುವುದು. ಮುಂದಿನ ಅಕ್ಟೋಬರ್ 28 ರ ವರೆಗೆ ನೊಂದಾವಣೆಗೆ ಅವಕಾಶವಿದ್ದು ಅಕ್ಟೋಬರ್ 29 ರಂದು ಶ್ರೀ ವಾಗೀಶ್ವರಿ ಪೂಜೆಯೊಂದಿಗೆ ನವದುರ್ಗಾ ಲೇಖನ ಯಜ್ಞದ ಪುಸ್ತಕ ಬಿಡುಗಡೆಗೊಳಿಸಲಾಗುವುದು.
ಅಕ್ಟೋಬರ್ 29 ರ ನಂತರ 45 ದಿನಗಳವರೆಗೆ ರಶೀದಿ ಮಾಡಿ ಲೇಖನ ಯಜ್ಞದ ಪುಸ್ತಕವನ್ನು ಪಡೆಯಲು ಅವಕಾಶವಿದೆ ಎಂದರು.
ಈ ಸಂದರ್ಭ ನವದುರ್ಗಾ ಲೇಖನ ಯಜ್ಞ ಸಮಿತಿಯ ಅಧ್ಯಕ್ಷರಾದ ರಘುಪತಿ ಭಟ್, ಪ್ರಚಾರ ಸಮಿತಿ ಪ್ರಧಾನ ಸಂಚಾಲಕ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಧ್ಯಕ್ಷ ಯೋಗೀಶ್ ವಿ ಶೆಟ್ಟಿ ಬಾಲಾಜಿ, ನವದುರ್ಗಾ ಲೇಖನ ಯಜ್ಞ ಸಮಿತಿ ಮುಂಬೈಯ ಹರೀಶ್ ಶೆಟ್ಟಿ ಎರ್ಮಾಳು, ಚಂದ್ರಹಾಸ ಶೆಟ್ಟಿ ಮುಂಬೈ ಉಪಸ್ಥಿತರಿದ್ದರು