ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಬಂಟಕಲ್ಲು : ಬದುಕಿನಲ್ಲಿ ದುರಾಸೆಗೆ ಒಳಗಾಗದೆ ಇದ್ದುದರಲ್ಲೇ ತೃಪ್ತಿವಂತರಾಗುವ - ಜಸ್ಟಿಸ್ ಸಂತೋಷ್ ಹೆಗ್ಡೆ

Posted On: 01-09-2024 10:09PM

ಬಂಟಕಲ್ಲು : ಕಲಿಕೆಗೆ ಕೊನೆಯಿಲ್ಲ. ಜನನದಿಂದ ಮರಣದವರೆಗೆ ಕಲಿಕೆ ನಿರಂತರ. ಬದುಕಿನಲ್ಲಿ ದುರಾಸೆಗೆ ಒಳಗಾಗದೆ ಇದ್ದುದರಲ್ಲೇ ತೃಪ್ತಿವಂತರಾಗುವ. ಮಾನವರಾಗಿ ಮಾನವೀಯ ಗುಣ ನಮ್ಮಲ್ಲಿರಬೇಕು ಎಂದು ಸವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯ ಮೂರ್ತಿ, ಮಾಜಿ ಲೋಕಾಯುಕ್ತ ಜಸ್ಟಿಸ್ ಸಂತೋಷ್ ಹೆಗ್ಡೆ ಹೇಳಿದರು. ಅವರು ಬಂಟಕಲ್ಲು ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ 2024-25ನೇ ಸಾಲಿನ ಪ್ರಥಮ ವರ್ಷದ ಇಂಜಿನಿಯರಿಂಗ್ ಶಿಕ್ಷಣಕ್ಕೆ ಸೇರ್ಪಡೆಗೊಂಡ ವಿದ್ಯಾರ್ಥಿಗಳಿಗಾಗಿ ಭಾನುವಾರ ವಿದ್ಯಾಲಯದ ಆವರಣದಲ್ಲಿ ನಡೆದ ಮಾರ್ಗದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ನಮ್ಮ ದೇಶದಲ್ಲಿ ವಿವಿಧ ಹಗರಣಗಳು ನಡೆದಿದ್ದು, ಭೃಷ್ಟಾಚಾರ ಸಮಾಜಲ್ಲಿ ಬೇರೂರಿದೆ. ಅದನ್ನು ಬುಡ ಸಮೇತ ಕೀಳಬೇಕಾಗಿದೆ. ಭೃಷ್ಟಾಚಾರದ ನಿರ್ಮೂಲನೆಗೆ ವಿದ್ಯಾರ್ಥಿಗಳು ಸಹಿತ ನಾಗರಿಕರು ಚಿಂತಿಸಬೇಕಾಗಿದೆ. ಕರ್ನಾಟಕ ಲೋಕಾಯುಕ್ತಕ್ಕೆ ಬಂದ ನಂತರ ಬಹಳಷ್ಟು ಅನ್ಯಾಯ, ಅಕ್ರಮಗಳನ್ನು ಕಂಡಿದ್ದೇನೆ. ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಳ್ಳಿ ಎಂದರು. ಈ ಸಂದರ್ಭ ಸಭಿಕರ ಪ್ರಶ್ನೆಗಳಿಗೆ ಉತ್ತರಿಸಿದರು.

ಸಂಸ್ಥೆಯ ಕಾರ್ಯದರ್ಶಿಗಳಾದ ರತ್ನಕುಮಾರ್ ಮಾತನಾಡಿ, 14 ವರ್ಷಗಳಿಂದ ಸಂಸ್ಥೆಯು ಉತ್ತಮ ಬೆಳವಣಿಗೆಯನ್ನು ಕಾಣಲು ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರ ಅವಿರತ ಶ್ರಮವಾಗಿದೆ. ನಮ್ಮ ಸಂಸ್ಥೆಯನ್ನು ಅಟೊನೊಮಸ್ ಆಗಿ ಮಾಡುವುದು ನಮ್ಮ ಮುಂದಿನ ಯೋಜನೆಯಾಗಿದೆ ಎಂದರು. ಈ ಸಂದರ್ಭ ಸಂಸ್ಥೆಯ ವಿದ್ಯಾರ್ಥಿ ಅದ್ವೈತ್ ಆಚಾರ್ಯ ತಾನು ಬಿಡಿಸಿದ ಜಸ್ಟಿಸ್ ಸಂತೋಷ್ ಹೆಗ್ಡೆಯವರ ಚಿತ್ರವನ್ನು ಅವರಿಗೆ ಉಡುಗೊರೆಯಾಗಿ ನೀಡಿದನು. ಈ ಸಂದರ್ಭದಲ್ಲಿ ಪೋಷಕರು ಸಂಸ್ಥೆಯ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.

ಶ್ರೀ ಸೋದೆ ವಾದಿರಾಜ ಮಠ ಶಿಕ್ಷಣ ಪ್ರತಿಷ್ಠಾನದ ಉಪಾಧ್ಯಕ್ಷರಾದ ಪಿ ಶ್ರೀನಿವಾಸ ತಂತ್ರಿಯವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾದ ಹರೀಶ್ ಬೆಳ್ಮಣ್, ಸಂಸ್ಥೆಯ ಉಪ ಪ್ರಾಂಶುಪಾಲ ಡಾ. ಗಣೇಶ್ ಐತಾಳ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಿದ್ಯಾರ್ಥಿ ಅಭಿಷೇಕ್ ಕಿಣಿ ಪ್ರಾರ್ಥಿಸಿದರು. ಸಂಸ್ಥೆಯ ಪ್ರಾಂಶುಪಾಲರಾದ ಡಾ. ತಿರುಮಲೇಶ್ವರ ಭಟ್‌ರವರು ಅತಿಥಿಗಳನ್ನು ಸ್ವಾಗತಿಸಿದರು. ಮುಖ್ಯ ಅತಿಥಿಗಳನ್ನು ಗಣಿತ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಲೊಲಿಟ ಪ್ರಿಯ ಕ್ಯಾಸ್ತಲಿನೊ ಪರಿಚಯಿಸಿದರು. ಸಂಸ್ಥೆಯ ಪ್ರಾಧ್ಯಾಪಕರಾದ ಪ್ರೀತಿ ಮತ್ತು ಸಚಿನ್ ಪ್ರಭು ಕಾರ್ಯಕ್ರಮ ನಿರೂಪಿಸಿದರು. ಡಾ. ದೀಪಿಕಾ ಬಿ ವಿ ವಂದಿಸಿದರು.