ಸೆಪ್ಟೆಂಬರ್ 9 : ಪಡುಬಿದ್ರಿ ಸಿಎ ಸೊಸೈಟಿ - ನೂತನ ಕಟ್ಟಡ ಸಹಕಾರ ಸಂಕೀರ್ಣ, ನವೀಕೃತ ಹವಾನಿಯಂತ್ರಿತ ಪಲಿಮಾರು ಶಾಖೆಯ ಉದ್ಘಾಟನೆ
Posted On:
05-09-2024 11:29PM
ಪಡುಬಿದ್ರಿ : 67 ವರ್ಷಗಳಿಂದ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಾ ಎ ವರ್ಗದ ಬ್ಯಾಂಕ್ ಆಗಿ ಉಡುಪಿ ಜಿಲ್ಲೆಯಲ್ಲಿಯೇ ಉತ್ತಮ ಸಹಕಾರಿ ಸಂಘ ಎಂಬ ಹೆಗ್ಗಳಿಕೆಯನ್ನು ಹೊಂದಿರುವ ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ (ನಿ.) ಇದರ ಪಲಿಮಾರು ಶಾಖೆಯ ನೂತನ ಕಟ್ಟಡ “ಸಹಕಾರ ಸಂಕೀರ್ಣ” ಮತ್ತು ನವೀಕೃತ ಹವಾನಿಯಂತ್ರಿತ ಶಾಖೆಯು ಸೆಪ್ಟೆಂಬರ್ 9, ಸೋಮವಾರ ಬೆಳಿಗ್ಗೆ 10 ಗಂಟೆಗೆ ಉದ್ಘಾಟನೆಗೊಳ್ಳಲಿದೆ ಎಂದು ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯ ಅಧ್ಯಕ್ಷರಾದ ವೈ ಸುಧೀರ್ ಕುಮಾರ್ ಸೊಸೈಟಿಯ ಪ್ರಧಾನ ಕಚೇರಿ ಸಹಕಾರ ಸಂಗಮದಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿ. ಬೆಂಗಳೂರು ಹಾಗೂ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ. ಮಂಗಳೂರು ಇದರ ಅಧ್ಯಕ್ಷರಾದ ಡಾ.ಎಮ್.ಎನ್. ರಾಜೇಂದ್ರ ಕುಮಾರ್ ಇವರು ಕಟ್ಟಡವನ್ನು ಉದ್ಘಾಟಿಸಲಿದ್ದಾರೆ.
ನೂತನ ಶಾಖಾ ಕಟ್ಟಡವು ವಿಶಾಲವಾದ ನವೀಕೃತ ಹವಾನಿಯಂತ್ರಿತ ಶಾಖೆಯೊಂದಿಗೆ ವಿಶಾಲವಾದ ಭದ್ರತಾ ಕೊಠಡಿ ಗ್ರಾಹಕರಿಗೆ ಸೇಫ್ ಲಾಕರ್ ಸೌಲಭ್ಯವನ್ನು ಹೊಂದಿದೆ. ಶಾಖೆಯೊಂದಿಗೆ ಅಂಗಡಿ ಕೋಣೆಗಳನ್ನು ಹೊಂದಿದ್ದು ಈ ಅಂಗಡಿ ಕೋಣೆಗಳಲ್ಲಿ ಕೃಷಿ ಉಪಕರಣ ಮಾರಾಟ ವಿಭಾಗ, ಇ -ಅಶ್ವ ಇಲೆಕ್ಟ್ರಿಕ್ ಸ್ಕೂಟರ್ ಮಾರಾಟ ವಿಭಾಗವನ್ನು ನೂತನವಾಗಿ ಪ್ರಾರಂಭಿಸುವ ಯೋಜನೆಯನ್ನು ಹಾಕಿಕೊಂಡಿದೆ.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಸಂಸದ ಕೋಟಾ ಶ್ರೀನಿವಾಸ ಪೂಜಾರಿ, ಕಾಪು ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಅಖಿಲ ಭಾರತ ಬಿಲ್ಲವರ ಯೂನಿಯನ್ ಅಧ್ಯಕ್ಷ ನವೀನ್ ಚಂದ್ರ ಡಿ. ಸುವರ್ಣ, ಪಲಿಮಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸೌಮ್ಯಲತಾ ಶೆಟ್ಟಿ, ಮತ್ತಿತರ ಗಣ್ಯರು
ಭಾಗವಹಿಸಲಿದ್ದಾರೆ.
ಸಮಾರಂಭದಲ್ಲಿ ಡಾ. ಎಮ್.ಎನ್ ರಾಜೇಂದ್ರ ಕುಮಾರ್, ಕೋಟಾ ಶ್ರೀನಿವಾಸ ಪೂಜಾರಿ, ಸಹಕಾರ ಸಂಘಗಳ ನಿವೃತ್ತ ಸಹಾಯಕ ನಿಬಂಧಕರಾದ ಅರುಣ್ ಕುಮಾರ್ ಎಸ್.ವಿ., ಭಾರತ ಕಬ್ಬಡಿ ತಂಡದ ಮಾಜಿ ನಾಯಕರಾದ ಶೇಖರ ಶೆಟ್ಟಿ, ಯುವ ಕೃಷಿಕ ರೋಹಿತ್ ಶೆಟ್ಟಿ, ಯುವ ಸಮಾಜ ಸೇವಕರಾದ ಶರಣ್ ಮಟ್ಟು ಇವರಿಗೆ ಅಭಿನಂದನೆಯು ನಡೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸೊಸೈಟಿಯ ನಿರ್ದೇಶಕರುಗಳಾದ ರಸೂಲ್ ವೈ.ಜಿ, ಗಿರೀಶ್ ಪಲಿಮಾರು, ಮಾಧವ ಆಚಾರ್ಯ, ರಾಜಾರಾಮ್ ರಾವ್, ಸ್ಟ್ಯಾನಿ ಕ್ವಾಡ್ರಸ್, ಕುಸುಮ ಪುತ್ರನ್, ಕಾಂಚನಾ, ಸುಚರಿತ ಎಲ್ ಅಮೀನ್, ಕಾರ್ಯನಿರ್ವಹಣಾಧಿಕಾರಿ ನಿಶ್ಮಿತಾ ಪಿ.ಎಚ್ ಉಪಸ್ಥಿತರಿದ್ದರು.