ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಸೆ. 29 : ಪಡುಬಿದ್ರಿ ಬಂಟರ ಸಂಘದಲ್ಲಿ ಡಾ| ಕೆ. ಪ್ರಕಾಶ್ ಶೆಟ್ಟಿಯವರಿಗೆ ಶ್ರೀ ಗುರು ನಿತ್ಯಾನಂದಾನುಗ್ರಹ ಪ್ರಶಸ್ತಿ ಪ್ರದಾನ

Posted On: 25-09-2024 12:10PM

ಪಡುಬಿದ್ರಿ : ಬಂಟರ ಸಂಘ ಪಡುಬಿದ್ರಿ, ಬಂಟ್ಸ್ ವೆಲ್ಫೇರ್ ಟ್ರಸ್ಟ್ ಪಡುಬಿದ್ರಿ ಇವರ ಸಹಭಾಗಿತ್ವದಲ್ಲಿ ಸಾಮಾಜಿಕ ಕಲ್ಯಾಣ ಕಾರ್ಯಕ್ರಮ ಮತ್ತು ವಿದ್ಯಾರ್ಥಿವೇತನ ವಿತರಣೆ ಹಾಗೂ 'ಸಿರಿಮುಡಿ ದತ್ತಿನಿಧಿ ಟ್ರಸ್ಟ್' ಬಂಟರ ಸಂಘ ಪಡುಬಿದ್ರಿ ಪ್ರಾಯೋಜಕತ್ವದಲ್ಲಿ ಸೆಪ್ಟೆಂಬರ್ 29, ಆದಿತ್ಯವಾರ ಪಡುಬಿದ್ರಿ ಬಂಟರ ಸಂಘದಲ್ಲಿ ಸಮಸ್ತ ಬಂಟ ಸಮಾಜದ ಪರವಾಗಿ ಇತ್ತೀಚೆಗೆ ಪ್ರತಿಷ್ಠಿತ ಮಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪ್ರಶಸ್ತಿಗೆ ಭಾಜನರಾದ ಬಂಟ ಸಮಾಜದ ದಾನಿ ಉದ್ಯಮಿ ಡಾ| ಕೆ. ಪ್ರಕಾಶ್ ಶೆಟ್ಟಿಯವರಿಗೆ 'ಶ್ರೀ ಗುರು ನಿತ್ಯಾನಂದಾನುಗ್ರಹ' ಪ್ರಶಸ್ತಿಯನ್ನು ನೀಡಿ ಗೌರವಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪಡುಬಿದ್ರಿ ಬಂಟರ ಸಂಘದ ಅಧ್ಯಕ್ಷರಾದ ಡಾ| ದೇವಿಪ್ರಸಾದ್ ಶೆಟ್ಟಿಯವರು ಪಡುಬಿದ್ರಿ ಬಂಟರ ಸಂಘದಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸದ್ರಿ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಬೆಳಗ್ಗೆ 9 ಗಂಟೆಗೆ ಪಡುಬಿದ್ರಿ ಪೇಟೆಯಿಂದ ಬಂಟರ ಭವನದವರೆಗೆ ಡಾ| ಕೆ. ಪ್ರಕಾಶ್ ಶೆಟ್ಟಿ ದಂಪತಿ ಹಾಗೂ ಇತರ ಅತಿಥಿ ಗಣ್ಯರನ್ನು ಮೆರವಣಿಗೆ ಮೂಲಕ ಬರಮಾಡಿಕೊಳ್ಳಲಾಗುವುದು. ಬೆಳಿಗ್ಗೆ ಗಂಟೆ 10 ರಿಂದ ಪಡುಬಿದ್ರಿ ಬಂಟರ ಸಂಘದ ಸದಸ್ಯರಿಂದ ವೈವಿಧ್ಯಮಯ ನೃತ್ಯ ಕಾರ್ಯಕ್ರಮ ಜರಗಲಿದೆ. ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಬಂಟ್ಸ್ ಸಂಘ ಬೆಂಗಳೂರು ಇದರ ಅಧ್ಯಕ್ಷರಾದ ಸಿ.ಎ. ಅಶೋಕ ಶೆಟ್ಟಿ ಇವರು ನೆರವೇರಿಸಲಿದ್ದಾರೆ. ಸಿರಿಮುಡಿ ದತ್ತಿನಿಧಿ ಬಂಟರ ಸಂಘ ಪಡುಬಿದ್ರಿ ಟ್ರಸ್ಟ್ ನಿಂದ ಬಂಟ ಸಮಾಜದ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಗೆ ನೆರವಾಗಲು ವಿದ್ಯಾರ್ಥಿವೇತನ, ಸಮಾಜದ ಅಶಕ್ತರಿಗೆ, ವಿಧವೆಯರಿಗೆ, ಅಂಗವಿಕಲರಿಗೆ ನೆರವು ಸೇರಿದಂತೆ ಹಲವು ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳಿಗೆ ಸುಮಾರು 15 ಲಕ್ಷ ರೂಪಾಯಿಗಳನ್ನು ವಿತರಿಸಲಾಗುವುದು. ಸಿರಿಮುಡಿ ದತ್ತಿನಿಧಿ ಪಡುಬಿದ್ರಿ ಇದರ ಸ್ಥಾಪಕರಾದ ಸಾಂತೂರು ಭಾಸ್ಕರ ಶೆಟ್ಟಿಯವರ ನೇತೃತ್ವದಲ್ಲಿ ಸಮಾಜದ ದಾನಿಗಳಿಂದ ಸಂಗ್ರಹಿಸಿದ ಸುಮಾರು 1.31 ಕೋಟಿ ರೂಪಾಯಿಗಳನ್ನು ಶಾಶ್ವತ ಠೇವಣಿಯಾಗಿರಿಸಿ ಅದರಲ್ಲಿ ಬರುವ ಬಡ್ಡಿಯಿಂದ ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ.

ಮುಖ್ಯ ಅತಿಥಿಗಳಾಗಿ ಕರುಣಾಕರ ಆ‌ರ್. ಶೆಟ್ಟಿ, ಸಿ.ಎಂ.ಡಿ. ಪೆನಿನ್ಸುಲಾ ಗ್ರೂಪ್ ಆಫ್ ಹೊಟೇಲ್ಸ್, ಮುಂಬಯಿ ಮತ್ತು ಎರ್ಮಾಳು ಸೀತಾರಾಮ ಶೆಟ್ಟಿ, ಮಾಜಿ ಅಧ್ಯಕ್ಷರು ಬಂಟ್ಸ್ ಸಂಘ ಪಿಂಪ್ರಿ ಚಿಂಚಿವಾಡ ಪುಣೆ ಇವರು ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಬರುವ ಡಿಸೆಂಬರ್ ತಿಂಗಳ ಅಂತ್ಯದಲ್ಲಿ ಪಡುಬಿದ್ರಿ ಬಂಟರ ಸಂಘದ ವತಿಯಿಂದ ಆಯೋಜಿಸಲು ಉದ್ದೇಶಿಸಿರುವ ಅಂತರ್ ರಾಜ್ಯ ಬಂಟರ ಕ್ರೀಡಾಕೂಟ ಇದರ ಮಾಹಿತಿ ಕೈಪಿಡಿಯನ್ನು ಬಿಡುಗಡೆ ಮಾಡಲಾಗುವುದು. ಇದರ ಜೊತೆಗೆ ವಿಶ್ವ ಬಂಟರ ಸಂಘಗಳ ಇತಿಹಾಸದಲ್ಲಿಯೇ ಪ್ರಥಮ ಎಣಿಸಲಿರುವ ಬಂಟಾಶ್ರಯ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬಂಟ್ಸ್ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷರಾದ ಎರ್ಮಾಳ್ ಶಶಿಧರ ಶೆಟ್ಟಿ, ಸಿರಿಮುಡಿ ದತ್ತಿನಿಧಿ ಸ್ಥಾಪಕಧ್ಯಕ್ಷರಾದ ಸಾಂತೂರು ಭಾಸ್ಕರ ಶೆಟ್ಟಿ, ಪಡುಬಿದ್ರಿ ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ ಪಡುಹಿತ್ಲು, ಕೋಶಾಧಿಕಾರಿ ರವಿ ಶೆಟ್ಟಿ ಗುಂಡ್ಲಾಡಿ, ಉಪಾಧ್ಯಕ್ಷ ಶ್ರೀನಾಥ್ ಹೆಗ್ಡೆ, ಮಹಿಳಾ ವಿಭಾಗದ ಅಧ್ಯಕ್ಷೆ ಜ್ಯೋತಿ ಆರ್. ಶೆಟ್ಟಿ ಹಾಗೂ ಯುವ ವಿಭಾಗದ ಅಧ್ಯಕ್ಷ ನವೀನ್ ಎನ್. ಶೆಟ್ಟಿ, ಸಾಂಸ್ಕೃತಿಕ ಸಂಚಾಲಕ ಜಯ ಶೆಟ್ಟಿ ಪದ್ರ ಉಪಸ್ಥಿತರಿದ್ದರು.