ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ನವೆಂಬರ್ 16 : ಪಲಿಮಾರಿನಲ್ಲಿ ಕಾಪು ತಾಲೂಕು 6ನೇ ಕನ್ನಡ ಸಾಹಿತ್ಯ ಸಮ್ಮೇಳನ - ಪೂರ್ವಭಾವಿ ಸಭೆ

Posted On: 29-09-2024 09:06AM

ಪಲಿಮಾರು : ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಾಪು ತಾಲೂಕು ಘಟಕದ ಆರನೇ ಕನ್ನಡ ಸಾಹಿತ್ಯ ಸಮ್ಮೇಳನ ನವೆಂಬರ್ 16, ಶನಿವಾರ ಪಲಿಮಾರು ಸರಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಜರುಗಲಿದ್ದು, ಸಮ್ಮೇಳನದ ಸಿದ್ಧತಾ ಪೂರ್ವಭಾವಿ ಸಭೆಯು ಕಸಾಪ ತಾಲೂಕು ಅಧ್ಯಕ್ಷ ಬಿ.ಪುಂಡಲೀಕ ಮರಾಠೆಯವರ ಅಧ್ಯಕ್ಷತೆಯಲ್ಲಿ ಕಾಲೇಜಿನ ಸಭಾಂಗಣದಲ್ಲಿ ಜರುಗಿತು.

ಕಸಾಪ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಪ್ರಾಸ್ತಾವಿಕವಾಗಿ ಮಾತನಾಡಿ, ಕಾಪು ತಾಲೂಕು ಕಲೆ, ಸಾಹಿತ್ಯ, ಜಾನಪದ, ಧಾರ್ಮಿಕ, ಸಾಂಸ್ಕೃತಿಕ, ಐತಿಹಾಸಿಕ ವಿಶಿಷ್ಠ ಪರಂಪರೆಯನ್ನು ಹೊಂದಿದ ತಾಲೂಕು ಆಗಿದೆ. ಕಾಪು ನೂತನ ತಾಲೂಕು ಆಗಿ ರಚನೆಯಾದಂದಿನಿಂದ ನಿರಂತರ ಐದು ಸಾಹಿತ್ಯ ಸಮ್ಮೇಳನಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ರಾಜ್ಯದ ಏಕೈಕ ತಾಲೂಕು ಎಂಬ ಹೆಗ್ಗಳಿಕೆ ಈ ತಾಲೂಕು ಹೊಂದಿದ್ದು 6ನೇ ಸಮ್ಮೇಳನಕ್ಕೆ ಸಿದ್ಧತೆಯಲ್ಲಿರುವುದು ಅಭಿನಂದನೀಯ ಎಂದರು. ಕಾಪು ತಾಲೂಕು ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ಮಾತನಾಡಿ, ಸಾಹಿತ್ಯ ಸಮ್ಮೇಳನ ಎಂಬುದು ತಾಲೂಕಿನ ನುಡಿಜಾತ್ರೆಯಾಗಿದ್ದು ತಾಯಿ ಭುವನೇಶ್ವರೀಯ ಶೋಭಾಯಾತ್ರೆಯೊಂದಿಗೆ ಪ್ರಾರಂಭವಾಗಿ ಸಮಾರೋಪದವರೆಗೆ ಜರುಗುವ ವಿವಿಧ ಕಾರ್ಯಕ್ರಮಗಳು, ವ್ಯವಸ್ಥಿತವಾಗಿ ನಡೆಸಲು ಪೂರಕ ಉಪಸಮಿತಿಗಳು ಹಾಗೂ ಸಮಿತಿಯ ಜವಾಬ್ದಾರಿಗಳ ಬಗ್ಗೆ ಮಾಹಿತಿ ನೀಡಿದರು. ಸ್ವಾಗತ ಸಮಿತಿ ಹಾಗೂ ವಿವಿಧ ಸಮಿತಿಗಳಿಗೆ ಸಂಚಾಲಕರು, ಉಪ ಸಂಚಾಲಕರನ್ನು ಆಯ್ಕೆ ಮಾಡಲಾಯಿತು.

ಹಿರಿಯ ಸಮಾಜಸೇವಕರು, ಶಾಲಾ ಹಳೆವಿದ್ಯಾರ್ಥಿಗಳಾದ ಲಕ್ಷ್ಮಣ ಶೆಟ್ಟಿ ನಂದಿಕೂರು, ಪಲಿಮಾರು ಇಗರ್ಜಿಯ ಧರ್ಮಗುರುಗಳಾದ ರೆ.ಫಾ.ಜೆರಾಲ್ಡ್ ಡಿಮೆಲ್ಲೋ ಮಾತನಾಡಿ ಪಲಿಮಾರಿನಲ್ಲಿ ಸಾಹಿತ್ಯ ಸಮ್ಮೇಳನ ನಡೆಸಲು ಅವಕಾಶ ಒದಗಿಬಂದುದು ಊರಿಗೆ ಹೆಮ್ಮೆಯ ಸಂಗತಿಯಾಗಿದೆ. ಎಲ್ಲರೂ ಸೇರಿ ಯಶಸ್ವಿಗೊಳಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಕಸಾಪ ಜಿಲ್ಲಾ ಕೋಶಾಧ್ಯಕ್ಷ ಮನೋಹರ್ ಪಿ, ಜಿಲ್ಲಾ ಸಭಾಭವನ ನಿರ್ಮಾಣ ಸಮಿತಿ ಅಧ್ಯಕ್ಷ ಕೆ.ದೇವದಾಸ್ ಹೆಬ್ಬಾರ್, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪ್ರಸಾದ್ ಪಲಿಮಾರು, ಶಾಲಾಭಿವೃದ್ಧಿ ಮೇಲ್ತುವಾರಿ ಸಮಿತಿ ಅಧ್ಯಕ್ಷೆ ಶೋಭಾ ವೇದಿಕೆಯಲ್ಲಿದ್ದರು. ಸಭೆಯಲ್ಲಿ ಪಲಿಮಾರು ವ್ಯಾಪ್ತಿಯ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಕಸಾಪದ ಪದಾಧಿಕಾರಿಗಳು, ಸದಸ್ಯರು, ಆಹ್ವಾನಿತ ಪ್ರತಿನಿಧಿಗಳು ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲೆ ಗ್ರೆಟ್ಟಾ ಮೊರಾಸ್ ಸ್ವಾಗತಿಸಿದರು. ಪ್ರೌಢ ಶಾಲಾ ಶಿಕ್ಷಕ ಸುಧಾಕರ ಶೆಣೈ ನಿರೂಪಿಸಿ, ವಂದಿಸಿದರು.