ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ನನಗೆ ನೀಡಿದ ನಿತ್ಯಾನಂದಾನುಗ್ರಹ ಪ್ರಶಸ್ತಿ ಸಮ್ಮಾನ ಅವಿಸ್ಮರಣೀಯ : ಡಾ.ಕೆ. ಪ್ರಕಾಶ್ ಶೆಟ್ಟಿ

Posted On: 29-09-2024 07:42PM

ಪಡುಬಿದ್ರಿ : ಪಡುಬಿದ್ರಿಯ ಅಳಿಯನಾಗಿ ನನಗೆ ಪ್ರೀತಿ, ಸ್ನೇಹ ನೀಡಿದ್ದೀರಿ. ನಿಮ್ಮ ಅಭಿಮಾನಕ್ಕೆ ಚಿರ ಋಣಿ. ನೀವೆಲ್ಲ ದೇವರಿಗೆ ಸಮಾನ. ನನಗೆ ನೀಡಿದ ನಿತ್ಯಾನಂದಾನುಗ್ರಹ ಪ್ರಶಸ್ತಿ ಸಮ್ಮಾನ ಅವಿಸ್ಮರಣೀಯ. ಈ ಊರಿನ ದೇವಳದ ಜೀರ್ಣೋದ್ಧಾರದ ಸಂಕಲ್ಪಕ್ಕಾಗಿ ನಾವೆಲ್ಲಾ ಒಗ್ಗಟ್ಟಾಗ ಬೇಕಿದೆ. ಬಂಟ ಸಮಾಜದ ಅಭ್ಯದಯಕ್ಕಾಗಿ ದುಡಿಯಲು ಸದಾ ಸಿದ್ಧ ಎಂದು ಬೆಂಗಳೂರಿನ ಉದ್ಯಮಿ, ಎಂಆರ್ ಜಿ ಗ್ರೂಪ್ ನ ಚೇರ್ಮನ್, ಆಡಳಿತ ನಿರ್ದೇಶಕ ಡಾ.ಕೆ.ಪ್ರಕಾಶ್ ಶೆಟ್ಟಿ ಹೇಳಿದರು. ಅವರು ಪಡುಬಿದ್ರಿ ಬಂಟರ ಸಂಘ, ಬಂಟ್ಸ್ ವೆಲ್ ಫೇರ್ ಟ್ರಸ್ಟ್ ಪಡುಬಿದ್ರಿ, ಸಿರಿಮುಡಿ ದತ್ತಿನಿಧಿ ಟ್ರಸ್ಟ್‌ ಇವರ ಸಹಭಾಗಿತ್ವದಲ್ಲಿ ಸಾಮಾಜಿಕ ಕಲ್ಯಾಣ ಕಾರ್ಯಕ್ರಮ ಮತ್ತು ವಿದ್ಯಾರ್ಥಿವೇತನ ವಿತರಣೆ ಹಾಗೂ ‘ಸಿರಿಮುಡಿ ದತ್ತಿನಿಧಿ ಟ್ರಸ್ಟ್’ ಬಂಟರ ಸಂಘ ಪಡುಬಿದ್ರಿ ಪ್ರಾಯೋಜಕತ್ವದಲ್ಲಿ ಸಮಸ್ತ ಬಂಟ ಸಮಾಜದ ಪರವಾಗಿ ಇತ್ತೀಚೆಗೆ ಪ್ರತಿಷ್ಠಿತ ಮಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪ್ರಶಸ್ತಿಗೆ ಭಾಜನರಾಗಿ “ಶ್ರೀ ಗುರು ನಿತ್ಯಾನಂದಾನುಗ್ರಹ” ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

ಬೆಂಗಳೂರು ಬಂಟ್ಸ್ ಸಂಘದ ಅಧ್ಯಕ್ಷ ಸಿಎ ಅಶೋಕ್ ಶೆಟ್ಟಿ ಅವರು ಇಂದಿನ ಸೋಶಿಯಲ್ ವೆಲ್ಫೇರ್ ಕಾರ್ಯಕ್ರಮ ಹಾಗೂ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸಮಾಜ ಹಿರಿ, ಕಿರಿಯರನ್ನು ಮೇಲೆತ್ತುವ ಪ್ರಯತ್ನಗಳು ನಿರಂತರವಾಗಿ ನಡೆಯಬೇಕಿದೆ. ದೇಶ ವಿದೇಶಗಳ ನಮ್ಮ ಬಂಟ ಬಾಂಧವರಿಂದಲೂ ಸಹಾಯಪಡೆದು ವಿದ್ಯಾರ್ಥಿಗಳಿಗೆ ಹಂಚೋಣ. ವಿದ್ಯಾಭ್ಯಾಸದಿಂದಲೂ ಸಮಾಜವೂ ಬಲಯುತವಾಗಬಲ್ಲದು ಎಂದರು. ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ನಮ್ಮ ಬದುಕು ಸಮಾಜದ ಋಣ ತೀರಿಸುವ ಬದುಕಾಗಬೇಕು. ಪ್ರಕಾಶ ಶೆಟ್ಟಿ ಅವರಂತಹಾ ಅದರ್ಶ ವ್ಯಕ್ತಿತ್ವಗಳು ಮತ್ತಷ್ಟು ಮೂಡಿಬರಲೆಂದರು. ವಿಧಾನಪರಿಷತ್ ಸದಸ್ಯ ಡಾ. ಮಂಜುನಾಥ ಭಂಡಾರಿ ಮಾತನಾಡಿ, ಬಂಟ ಸಮಾಜದ ಉದ್ಧಾರಕ್ಕಾಗಿ ಅಹರ್ನಿಶಿ ದುಡಿಯುತ್ತಿರುವವರು ಪ್ರಕಾಶ್ ಶೆಟ್ಟಿ ಅವರಾಗಿದ್ದಾರೆ. ಮಾನವ ಸಂಪನ್ಮೂಲ ಸದ್ಬಳಕೆಯಲ್ಲಿ ಡಾ. ದೇವಿಪ್ರಸಾದ್ ಶೆಟ್ಟಿ ಮುಂಚೂಣಿಯಲ್ಲಿರುವುದಾಗಿಯೂ, ವಿದ್ಯಾರ್ಥಿ ವೇತನವನ್ನು ಪಡೆದುಕೊಳ್ಳುತ್ತಿರುವ ವಿದ್ಯಾರ್ಥಿಗಳು ಕೊಡುಗೆಯಿತ್ತವರನ್ನು ಮರೆಯಬಾರದೆಂದರು.

ಸಮಾರಂಭದಲ್ಲಿ 15ಲಕ್ಷ ರೂ. ಗಳನ್ನು ವಿದ್ಯಾರ್ಥಿ ವೇತನ, ವಿಧವಾ ವೇತನ, ವಿಶೇಷ ಚೇತನರಿಗೆ ಧನ ಸಹಾಯದ ರೂಪದಲ್ಲಿ ವಿತರಿಸಲಾಯಿತು. ಬಂಟಾಶ್ರಯ ಯೋಜನೆಗಾಗಿ ಸ್ಥಳವನ್ನಿತ್ತ ಮಾರ್ಕ್ಸ್ ಡಿಸೋಜರಿಗೆ ಮುಂಬೈ ಉದ್ಯಮಿ ಎಲ್ಲೂರುಗುತ್ತು ಪ್ರವೀಣ್ ಭೋಜ ಶೆಟ್ಟಿ ಅವರ ಪರವಾಗಿ ಮುಂಗಡ ಹಣವನ್ನು ಹಸ್ತಾಂತರಿಸಲಾಯಿತು. ಸಿರಿಮುಡಿ ಕ್ರೆಡಿಟ್ ಕೋ ಆಪರೇಟಿವ್ ಸಂಘದ ಹಾಗೂ ಅಂತರ್ ರಾಜ್ಯ ಬಂಟ ಕ್ರೀಡೋತ್ಸವದ ಬ್ರೋಷರ್ ಹಾಗೂ ಠೇವಣಾತಿ ಪತ್ರವನ್ನು ವಿತರಿಸಲಾಯಿತು. ಪ್ರತಿಭಾನ್ವಿತ ವಿದ್ಯಾರ್ಥಿನಿಯರನ್ನು ಸಭೆಯಲ್ಲಿ ಸಮ್ಮಾನಿಸಲಾಯಿತು. ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಬೆಳಗ್ಗೆ 9 ಗಂಟೆಗೆ ಪಡುಬಿದ್ರಿ ಪೇಟೆಯಿಂದ ಬಂಟರ ಭವನದವರೆಗೆ ಅದ್ದೂರಿಯಾದ ಮೆರವಣಿಗೆ ನಡೆದು, ಮೆರವಣಿಗೆಯಲ್ಲಿ ಡಾ. ಕೆ ಪ್ರಕಾಶ್ ಶೆಟ್ಟಿ ಹಾಗೂ ಇತರ ಅತಿಥಿ ಗಣ್ಯರನ್ನು ಸಂಭ್ರಮದಿಂದ ಬರಮಾಡಿಕೊಳ್ಳಲಾಯಿತು. ಬೆಳಿಗ್ಗೆ 10 ರಿಂದ ಪಡುಬಿದ್ರಿ ಬಂಟರ ಸಂಘದ ಸದಸ್ಯರಿಂದ ವೈವಿಧ್ಯಮಯ ನೃತ್ಯ ಕಾರ್ಯಕ್ರಮ ನೆರವೇರಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕರುಣಾಕರ ಆರ್. ಶೆಟ್ಟಿ, ಸಿ.ಎಂ.ಡಿ. ಪೆನಿನ್ಸುಲಾ ಗ್ರೂಪ್ ಆಫ್ ಹೊಟೇಲ್ಸ್, ಮುಂಬಯಿ ಮತ್ತು ಎರ್ಮಾಳು, ಸೀತಾರಾಮ ಶೆಟ್ಟಿ, ಮಾಜಿ ಅಧ್ಯಕ್ಷರು ಬಂಟ್ಸ್ ಸಂಘ ಪಿಂಪ್ರಿ ಚಿಂಚಿವಾಡ ಪುಣೆ, ಪುಣೆ ಉದ್ಯಮಿ ಎರ್ಮಾಳು ಪುಚ್ಚೊಟ್ಟು ಸೀತಾರಾಮ ಶೆಟ್ಟಿ, ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ ಪಡುಹಿತ್ಲು, ಕೋಶಾಧಿಕಾರಿ ರವಿ ಶೆಟ್ಟಿ ಗುಂಡ್ಲಾಡಿ, ಮಹಿಳಾ ವಿಭಾಗದ ಅಧ್ಯಕ್ಷೆ ಜ್ಯೋತಿ ಆರ್. ಶೆಟ್ಟಿ ಹಾಗೂ ಯುವ ವಿಭಾಗದ ಅಧ್ಯಕ್ಷ ನವೀನ್ ಎನ್. ಶೆಟ್ಟಿ ಉಪಸ್ಥಿತರಿದ್ದರು. ಸಿರಿಮುಡಿ ದತ್ತಿನಿಧಿಯ ಸ್ಥಾಪಕಾಧ್ಯಕ್ಷ ಸಾಂತೂರು ಭಾಸ್ಕರ ಶೆಟ್ಟಿ ಸ್ವಾಗತಿಸಿದರು. ಪಡುಬಿದ್ರಿ ಬಂಟರ ಸಂಘದ ಅಧ್ಯಕ್ಷ ಡಾ. ದೇವಿಪ್ರಸಾದ್‌ ಶೆಟ್ಟಿ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಯ ಶೆಟ್ಟಿ ಪದ್ರ ಹಾಗೂ ಡಾ. ಮನೋಜ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ ಪಡುಹಿತ್ಲು ವಂದಿಸಿದರು.