ಹಿಂದು ಸಮಾಜ ಉದಾರ ಭಾವನೆಯನ್ನು ಹೊಂದಿದೆ : ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿ
Posted On:
29-09-2024 07:54PM
ಪಡುಬಿದ್ರಿ : ಹಿಂದು ಸಮಾಜ ಉದಾರ ಭಾವನೆಯನ್ನು ಹೊಂದಿದೆ. ಎಲ್ಲರೂ ಒಟ್ಟಿಗೆ ಒಂದಾಗಿ ಬಾಳಬೇಕೆಂಬ ಕಲ್ಪನೆಯೂ ಇದೆ. ಆದರೆ ಆ ಭಾವನೆಯು ಅನ್ಯರಿಗೂ ಇದ್ದಲ್ಲಿ ಮಾತ್ರ ಅದು ಯಶಸ್ಸು ಕಾಣಲು ಸಾಧ್ಯ. ನಮ್ಮ ಉಳಿವಿಗಾಗಿ ನಾವು ಜಾಗೃತರಾಗಿರಬೇಕು. ಜಾತೀಯತೆಯಲ್ಲಿ ಹರಿದು ಹಂಚಿ ಹೋಗದೇ, ಸಮಾಜ ಮುಖಿಯಾಗಿ ಹಿಂದುತ್ವ ಜಾಗೃತಗೊಳ್ಳಬೇಕಿದೆ. ಧಾರ್ಮಿಕ ಕೇಂದ್ರಗಳ ಮುಖ್ಯಸ್ಥರು ಈ ಬಗ್ಗೆ ಚಿಂತಿಸಿ ಸಮಾಜದ ರಕ್ಷಣೆಗೆ ಮಹತ್ವದ ನಿರ್ಧಾರದೊಂದಿಗೆ ಮುಂದಡಿ ಇರಿಸುವ ಅವಶ್ಯಕತೆ ಇದೆ ಎಂದು ಶ್ರೀಮದ್ ಜಗದ್ಗುರು ಆನೆಗುಂದಿ ಮಹಾ ಸಂಸ್ಥಾನ ಸರಸ್ವತೀ ಪೀಠದ ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿ ಹೇಳಿದರು.
ಅವರು ಭಾನುವಾರ ಕಾಪು ತಾಲೂಕು ವಿಶ್ವ ಹಿಂದು ಪರಿಷದ್ ವತಿಯಿಂದ ಪಡುಬಿದ್ರಿ ಬಂಟರ ಭವನದಲ್ಲಿ ನಡೆದ ವಿಶ್ವ ಹಿಂದು ಪರಿಷದ್ನ ಷಷ್ಠಿಪೂರ್ತಿ ವರ್ಷದ ಪ್ರಯುಕ್ತ ಹಿಂದೂ ಸಮಾವೇಶದಲ್ಲಿ ಆಶೀರ್ವಚನ ನೀಡುತ್ತಾ ಮಾತನಾಡಿದರು.
ವಿಶ್ವ ಹಿಂದು ಪರಿಷದ್ ಉಡುಪಿ ಜಿಲ್ಲಾ ಕಾರ್ಯದರ್ಶಿ ದಿನೇಶ್ ಮೆಂಡನ್ ಮಾತನಾಡಿ, ನಮ್ಮ ಮನೆಯಂಗಳಕ್ಕೆ ಬಂದಂತಹ ಸಮಸ್ಯೆಗಳು ಮನೆಯೊಳಕ್ಕೆ ಬಾರದಂತೆ ಎಚ್ಚರಿಕೆ ವಹಿಸಿಕೊಳ್ಳಬೇಕಾದ ಆವಶ್ಯಕತೆ ಇದೆ. ಜಾಗೃತ ಹಿಂದು ಸಮಾಜ ನಿರ್ಮಾಣ ಆಗಬೇಕಿದೆ. ನಮ್ಮ ಮಕ್ಕಳು ಹಿಂದುಗಳಾಗಿ ಬದುಕಬೇಕಾದಲ್ಲಿ ಹಿಂದುತ್ವ ಮನೋಭಾವವು ಜಾಗೃತ ಸ್ಥಿತಿಯಲ್ಲಿ ಇರಬೇಕಿದೆ. ಹಿಂದುತ್ವ ರಕ್ಷಣೆಗಾಗಿ ವಿವಿಧ ಆಯಾಮಗಳಲ್ಲಿ ವಿಶ್ವ ಹಿಂದು ಪರಿಷದ್ ಕೆಲಸ ಮಾಡಲು ಕಟಿಬದ್ಧವಾಗಿದೆ. ಅದಕ್ಕೆ ಹಿಂದು ಸಮಾಜವು ಬೆಂಬಲ ನೀಡಬೇಕಿದೆ ಎಂದರು.
ವಿಶ್ವ ಹಿಂದು ಪರಿಷದ್ ರಾಜ್ಯ ಕಾರ್ಯಕಾರಿಣಿ ಸದಸ್ಯ ರಘು ಸಕಲೇಶಪುರ ದಿಕ್ಸೂಚಿ ಭಾಷಣ ಮಾಡಿದರು.
ಧಾರ್ಮಿಕ ಚಿಂತಕ ಶಶಿಧರ ಶೆಟ್ಟಿ ಎರ್ಮಾಳು ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ದೈವನರ್ತಕ ಸುಧಾಕರ ಪಾಣಾರ ಮೂಡುಬೆಳ್ಳೆ, ಆಯುರ್ವೇದ ವೈದ್ಯೆ ಡಾ. ಪಯಸ್ವಿನಿ ಶೆಟ್ಟಿಗಾರ್, ಉಡುಪಿ ಜಿಲ್ಲಾ ಶಬರಿಮಲೆ ಅಯ್ಯಪ್ಪ ಸೇವಾ ಸಮಾಜದ ಉಪಾಧ್ಯಕ್ಷ ಗೋಪಾಲ ಪೂಜಾರಿ ಶಿರ್ವ, ಉಡುಪಿ ಜಿಲ್ಲಾ ವಿಶ್ವ ಹಿಂದು ಪರಿಷದ್ ಅಧ್ಯಕ್ಷ ವಿಷ್ಣುಮೂರ್ತಿ ಆಚಾರ್ಯ ವೇದಿಕೆಯಲ್ಲಿದ್ದರು.
ಪ್ರಾಜ್ನ ವಂದೇ ಮಾತರಂ ಹಾಡಿದರು. ವಿಶ್ವ ಹಿಂದು ಪರಿಷದ್ ಕಾಪು ತಾಲೂಕು ಅಧ್ಯಕ್ಷ ಜಯಪ್ರಕಾಶ್ ಪ್ರಭು ಸ್ವಾಗತಿಸಿದರು. ಕಾರ್ಯದರ್ಶಿ ರಾಜೇಂದ್ರ ಶೆಣೈ ವಂದಿಸಿದರು. ಸಂತೋಷ್ ನಂಬಿಯಾರ್ ಪಡುಬಿದ್ರಿ ಕಾರ್ಯಕ್ರಮ ನಿರೂಪಿಸಿದರು.