ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ನವೆಂಬರ್ 16 ರಂದು ಪಲಿಮಾರಿನಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಪಾಂಗಾಳ ಬಾಬು ಕೊರಗ ಆಯ್ಕೆ

Posted On: 04-10-2024 03:47PM

ಪಡುಬಿದ್ರಿ : ಕೊರಗ ಸಮುದಾಯದ ಹಿರಿಯ ಸಂಘಟಕ ಹಾಗೂ ಕೊರಗ ಭಾಷಾ ತಜ್ಞ, ಸಾಹಿತಿ, ಸಂಶೋಧಕ ಪಾಂಗಾಳ ಬಾಬು ಕೊರಗ ಅವರನ್ನು ನವೆಂಬರ್ 16, ಶನಿವಾರದಂದು ಪಲಿಮಾರು ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಜರಗಲಿರುವ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲಾ ಕಾಪು ತಾಲ್ಲೂಕು ಘಟಕದ 6ನೇ ಕಾಪು ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಕ.ಸಾ.ಪ. ಜಿಲ್ಲಾಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ, ಕಾಪು ಘಟಕದ ಅಧ್ಯಕ್ಷ ಬಿ. ಪುಂಡಲೀಕ ಮರಾಠೆ ಜಂಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಪಾಂಗಾಳ ಬಾಬು ಕೊರಗರ ಪರಿಚಯ : ಕಾಪು ತಾಲ್ಲೂಕಿನ ಪಾಂಗಾಳದಲ್ಲಿ ಕುಂದು ಕೊರಗ ಮತ್ತು ಬಡ್ಡೆ ಕೊರಪಳು ದಂಪತಿಯ ಪುತ್ರನಾಗಿ ಜನಿಸಿದ ಪಾಂಗಾಳ ಬಾಬು ಕೊರಗ ಅವರು, ಕೊರಗ ಸಮುದಾಯದ ಆದಿಬುಡ ಮೂಲ ಅಸ್ಮಿತೆಯನ್ನು ರಾಷ್ಟ್ರಮಟ್ಟದಲ್ಲಿ ಪ್ರತಿಪಾದಿಸಿದ ಗಟ್ಟಿಧ್ವನಿಯಾಗಿದ್ದಾರೆ. ಅವರು 1988ರಿಂದ ನಿರಂತರವಾಗಿ ಕೊರಗ ಸಮುದಾಯದ ಸಂಘಟನೆಯೊಂದಿಗೆ ಸಮಾಜಸೇವೆಯಲ್ಲಿ ತೊಡಗಿಸಿಕೊಂಡು ಬಂದಿದ್ದಾರೆ.

ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ದೆಹಲಿ ದರ್ಶನ ಕಾರ್ಯಕ್ರಮದಲ್ಲಿ ತಂಡದೊಂದಿಗೆ ಭಾಗವಹಿಸಿದ್ದಾರೆ. ದೆಹಲಿಯಲ್ಲಿ ನಡೆದ ವಿಚಾರಸಂಕಿರಣದಲ್ಲಿ ಕೊರಗ ಸಮುದಾಯದ ಬಗ್ಗೆ ವಿಚಾರಮಂಡನೆ ಮಾಡಿದ್ದಾರೆ. ಚೆನ್ನೈ ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಕ್ಲಾಸಿಕಲ್ ತಮಿಳ್ ಇಲ್ಲಿ ಜರಗಿದ ವಿಚಾರ ಸಂಕಿರಣದಲ್ಲಿ ಅವರು ಪಾಲ್ಗೊಂಡು, ತಿರುಕ್ಕುರಳ್ ಗ್ರಂಥವನ್ನು ಅವರು ಕೊರಗ ಭಾಷೆಗೆ ಅನುವಾದಿಸಿದ್ದನ್ನು ಪ್ರಸ್ತುತಪಡಿಸಿದ್ದಲ್ಲದೆ, ದಕ್ಷಿಣ ಭಾರತದ ಭಾಷೆಗಳ ನಡುವೆ ಕೊರಗ ಭಾಷೆಯ ಅಳಿವು-ಉಳಿವು ಬಗ್ಗೆ ವಿಚಾರಗಳನ್ನು ದಾಖಲಿಸಿದ್ದಾರೆ. 90 ಭಾಷೆಗಳಲ್ಲಿ ತಿರುಕ್ಕುರಳ್ ಗ್ರಂಥ ಅನುವಾದಗೊಂಡಿದ್ದು, ಇದರಲ್ಲಿ ಕೊರಗ ಭಾಷೆಯೂ ಒಳಗೊಳ್ಳುವಂತೆ ಮಾಡಿದ್ದು ಕೊರಗ ಭಾಷಾ ಚರಿತ್ರೆಯಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ತುಳು ಅಕಾಡೆಮಿಯ ನಾಮನಿರ್ದೇಶಿತ ಸದಸ್ಯರಾಗಿದ್ದಾರೆ. ಕಾಪು ತಾಲ್ಲೂಕು ಬೆಳ್ಳೆ ಗ್ರಾಮದ ಪಾಂಬೂರಿನ ಮುಂಚಿಕಾಡು ಕೊರಗರ ಬಲೆಪಿನಲ್ಲಿ ನವೋದಯ ಕಲಾತಂಡವನ್ನು ಸ್ಥಾಪಿಸಿ, ಕಾರ್ಯಕ್ರಮಗಳನ್ನು ನೀಡುತ್ತಾ ಬರುತ್ತಿದ್ದಾರೆ. ಅವರ ಬರೆಹಗಳು ಪತ್ರಿಕೆ, ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಕಟಗೊಳ್ಳುತ್ತಿದ್ದು, ಕೊರಗರ ಅಜಲು, ಕೊರಗರ ಭಾಷೆ, ಆದಿಬುಡಮೂಲ ಕೊರಗರು, ಚೋಮನ ಕರಂಡೆ (ಅನುವಾದ), ಅರಕಜಬ್ಬೆ ಮತ್ತು ಕುದ್ಕನ ಕಥೆಗಳು ಅವರ ಪ್ರಮುಖ ಕೃತಿಗಳು. ಬಾನ ದೇಬೆರೆ ತುಡರ್- ಕೊರಗ ತನಿಯ, ಸಾಮಾಜಿಕ ಹೋರಾಟದ ಗುರಿಕಾರರು ಕೃತಿಗಳು ಪ್ರಕಟನೆಗೆ ಸಿದ್ಧವಾಗಿವೆ. ಕೊರಗರ ಅಜಲು ಕೃತಿ ಮರುಮುದ್ರಣದ ಹಂತದಲ್ಲಿದೆ.

ಅವರಿಗೆ ಕರಾವಳಿ ರತ್ನ-ಸಂಶೋಧಕ ರತ್ನ ಪುರಸ್ಕಾರ-2022, ಜಿಲ್ಲಾ ರಾಜ್ಯೋತ್ಸವ ಪುರಸ್ಕಾರ -2022 ಸಂದಿವೆ. ಅವರು ಕೊರಗರ ಭಾಷೆ ಕೃತಿಯಲ್ಲಿ ಬರೆದ ಕೂಜಿನ ಪಾಟು ಎಂಬ ಕವಿತೆ ಸಂಗೀತ ಹಾಗೂ ನೃತ್ಯದೊಂದಿಗೆ ಡಿಜಿಟಲೀಕರಣಗೊಂಡು ನಿಟ್ಟೆ ವಿವಿಯಲ್ಲಿ ತೆರೆಕಂಡಿದೆ. ಇದು ಯೂಟ್ಯೂಬ್ ಪ್ರವೇಶಿಸಿದ ಮೊದಲ ಪೂರ್ಣಪ್ರಮಾಣದ ಕೊರಗ ಭಾಷೆಯ ಹಾಡು ಎಂಬ ದಾಖಲೆ ಸೃಷ್ಟಿಸಿದೆ. ಈ ಹಾಡಿಗೆ ಖ್ಯಾತ ಸಂಗೀತ ನಿರ್ದೇಶಕ ವಿ. ಮನೋಹರ್ ರಾಗಸಂಯೋಜನೆ ಮಾಡಿದ್ದಾರೆ.