ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ತುಳು ಎಂಎ ಅಧ್ಯಯನ ಪ್ರವೇಶ ಶುಲ್ಕದಲ್ಲಿ ರಿಯಾಯಿತಿ ಕೋರಿ ಸಂಸದ ಕ್ಯಾ. ಬ್ರಿಜೇಶ್ ಚೌಟರಿಂದ ಉನ್ನತ ಶಿಕ್ಷಣ ಸಚಿವರಿಗೆ ಪತ್ರ

Posted On: 23-10-2024 10:52PM

ಮಂಗಳೂರು : ಮಂಗಳೂರು ವಿಶ್ವವಿದ್ಯಾಲಯ ಆರಂಭಿಸಿರುವ ತುಳು ಸ್ನಾತಕೋತ್ತರ ಪ್ರವೇಶ ಶುಲ್ಕವನ್ನು ಏಕಾಏಕಿ ಏರಿಕೆ ಮಾಡಿರುವುದನ್ನು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ತೀವ್ರವಾಗಿ ಖಂಡಿಸಿದ್ದು, ಸರ್ಕಾರ ಕೂಡಲೇ ಶುಲ್ಕ ಕಡಿತಗೊಳಿಸುವುದಕ್ಕೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ರಾಜ್ಯದ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್‌ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಮಂಗಳೂರು ವಿವಿಯಲ್ಲಿ ತುಳು ಸ್ನಾತಕೋತ್ತರ ವಿಭಾಗದ 2024-25ನೇ ಸಾಲಿನ ಪ್ರವೇಶ ಶುಲ್ಕವನ್ನು 22,410 ರೂ. ಏರಿಸುವ ಮೂಲಕ ತುಳು ಭಾಷೆ ಅಧ್ಯಯನ ಮಾಡಬಯಸುವವರಿಗೆ ಆರ್ಥಿಕ ಹೊರೆಯುಂಟು ಮಾಡಲಾಗಿದೆ. ಆರಂಭದಲ್ಲಿ ತುಳು ಎಂಎ ಕೋರ್ಸ್‌ಗೆ 15 ಸಾವಿರ ರೂ. ಪ್ರವೇಶ ಶುಲ್ಕ ಇತ್ತು. ಆದರೆ ಇದೀಗ ಮೂರು ವರ್ಷದ ಬಳಿಕ 22,410 ರೂ.ಗೆ ಶುಲ್ಕ ಏರಿಕೆ ಮಾಡಿರುವುದರಿಂದ ತುಳು ಎಂಎ ಅಧ್ಯಯನಕ್ಕೆ ವಿದ್ಯಾರ್ಥಿಗಳು ಹಿಂದೇಟು ಹಾಕುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ತುಳು ಭಾಷೆಗೆ ಅಧಿಕೃತ ಭಾಷೆ ಮಾನ್ಯತೆ ಪಡೆಯುವುದಕ್ಕೆ ಪ್ರಯತ್ನಗಳು ನಡೆಯುತ್ತಿರಬೇಕಾದರೆ, ರಾಜ್ಯ ಸರ್ಕಾರವು ತುಳು ಭಾಷೆ ಉತ್ತೇಜನಕ್ಕೆ ಸಹಕಾರಿಯಾಗಿರುವ ಎಂಎ ಅಧ್ಯಯನ ಕೋರ್ಸ್‌ನ ಪ್ರವೇಶ ಶುಲ್ಕ ಹೆಚ್ಚಿಸಿರುವುದು ಸರಿಯಲ್ಲ. ಸ್ಥಳೀಯ ಭಾಷೆಗೆ ನೆರವು ನೀಡುವ ನಿಟ್ಟಿನಲ್ಲಿ ಪ್ರವೇಶ ಶುಲ್ಕದಲ್ಲಿ ರಿಯಾಯಿತಿ ನೀಡಬೇಕೆಂಬ ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸಿ 2020-21ನೇ ಸಾಲಿನಿಂದ 4 ಸಾವಿರ ರೂ. ಕಡಿತಗೊಳಿಸಲಾಗಿತ್ತು. ಆದರೆ, 3 ವರ್ಷದ ಬಳಿಕ ವಿವಿಯು ಪ್ರವೇಶ ಶುಲ್ಕ ಹೆಚ್ಚಿಸುವ ಮೂಲಕ ತುಳು ಭಾಷೆ ಅಧ್ಯಯನಾಸಕ್ತ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿದೆ. ಹೀಗಾಗಿ, ಕೂಡಲೇ ಶುಲ್ಕ ರಿಯಾಯಿತಿ ನೀಡಲು ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಕ್ಯಾ. ಚೌಟ ಮನವಿ ಮಾಡಿದ್ದಾರೆ.

ತುಳು ಎಂಎ ವಿಭಾಗಕ್ಕೆ ಕನಿಷ್ಠ 15 ವಿದ್ಯಾರ್ಥಿಗಳು ಪ್ರವೇಶ ಪಡೆದರೆ ಮಾತ್ರ ವಿವಿಯು ತುಳು ಸ್ನಾತಕೋತ್ತರ ವಿಭಾಗವನ್ನು ಮುಂದುವರಿಸುವುದಕ್ಕೆ ಸಾಧ್ಯ. ಇಂತಹ ಪರಿಸ್ಥಿತಿಯಲ್ಲಿ ಶುಲ್ಕವನ್ನು ಏಕಾಏಕಿ ಹೆಚ್ಚಳ ಮಾಡಿದರೆ ತುಳು ಎಂಎ ಅಧ್ಯಯನಕ್ಕೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆಯೂ ಕುಸಿಯುವ ಆತಂಕವಿದೆ. ಹೀಗಿರುವಾಗ, ಮಂಗಳೂರು ವಿವಿಯಲ್ಲಿ ತುಳು ಸ್ನಾತಕೋತ್ತರ ಪದವಿ ತರಗತಿಗಳು ಯಶಸ್ವಿಯಾಗಿ ಮುಂದುವರಿಯಬೇಕಾದರೆ, ರಾಜ್ಯ ಸರ್ಕಾರ ಮಧ್ಯಪ್ರವೇಶ ಮಾಡಿ ತುಳು ಎಂಎ ಅಧ್ಯಯನ ಪ್ರವೇಶ ಶುಲ್ಕವನ್ನು ಈ ಮೊದಲಿನಂತೆ ಕಡಿತಗೊಳಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವಂತೆ ಸಚಿವ ಡಾ.ಎಂ.ಸಿ ಸುಧಾಕರ್‌ ಅವರಿಗೆ ಬರೆದಿರುವ ಪತ್ರದಲ್ಲಿ ಕ್ಯಾ. ಬ್ರಿಜೇಶ್ ಚೌಟ ಒತ್ತಾಯಿಸಿದ್ದಾರೆ.