ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಅ. 29 : ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ - ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮ

Posted On: 27-10-2024 07:03AM

ಕಾಪು : ಇಲ್ಲಿನ ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಪೂರ್ವಭಾವಿಯಾಗಿ ಲೋಕ ಕಲ್ಯಾಣಾರ್ಥ ಮತ್ತು ಸಾನಿಧ್ಯ ವೃದ್ಧಿಗಾಗಿ ಹಮ್ಮಿಕೊಂಡಿರುವ ನವದುರ್ಗಾ ಲೇಖನ ಯಜ್ಞದ ಪ್ರಯುಕ್ತ ಇದೇ ಬರುವ ಅಕ್ಟೋಬರ್ 29ರಂದು ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ವಾಸುದೇವ ಶೆಟ್ಟಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಪೇಜಾವರ ಮತ್ತು ಮಾಣಿಲ ಸ್ವಾಮಿಗಳ ಸಹಿತ 9ಜನ ಗಣ್ಯರಿಂದ ಪುಸ್ತಕ ಬಿಡುಗಡೆ, 99,999 ನವದುರ್ಗಾ ಲೇಖನದ ಪುಸ್ತಕಗಳಿಗೆ ಏಕಕಾಲದಲ್ಲಿ ವಾಗೀಶ್ವರಿ ಪೂಜೆ ನಡೆಯಲಿದೆ. ತದನಂತರ ನವದುರ್ಗಾ ಲೇಖನ ಬರೆಯುವ ಪುಸ್ತಕವನ್ನು ಭಕ್ತರಿಗೆ ವಿತರಿಸಲಾಗುವುದು. ಈಗಾಗಲೇ ಸೆಪ್ಟೆಂಬರ್ 3ರಿಂದ ನವದುರ್ಗಾ ಲೇಖನ ಬರೆಯುವ ಭಕ್ತರ ಹೆಸರಿನ ನೋಂದಾವಣೆಯ ಪ್ರಕ್ರಿಯೆಗೆ ಚಾಲನೆ ನೀಡಲಾಗಿದ್ದು, ಈ ಪ್ರಕ್ರಿಯೆಗೆ ಪ್ರಪಂಚದಾದ್ಯಂತ ಇರುವ ಭಕ್ತರಿಂದ ಪೂರಕ ಸ್ಪಂದನೆ ವ್ಯಕ್ತವಾಗಿದೆ. ಇದರ ಮುಂದುವರಿದ ಭಾಗವಾಗಿ ಅಕ್ಟೋಬರ್ 29ರಂದು ವಾಗೀಶ್ವರಿ ಪೂಜೆ ನಡೆಸಿ ಪುಸ್ತಕ ಬರೆಯುವ ಸಂಕಲ್ಪದೊಂದಿಗೆ ಪುಸ್ತಕ ವಿತರಣೆಗೆ ಚಾಲನೆ ನೀಡಲಾಗುತ್ತದೆ. ಲೇಖನ ಪುಸ್ತಕ ವಿತರಣೆಯ ಬಳಿಕ 45 ದಿನಗಳ ಒಳಗಾಗಿ ನವದುರ್ಗಾ ಲೇಖನವನ್ನು ಬರೆದು ಕಾಪು ಹೊಸ ಮಾರಿಗುಡಿ ದೇವಸ್ಥಾನಕ್ಕೆ ಮರಳಿಸಬೇಕಿದೆ, 2025ರ ಫೆಬ್ರವರಿ 4ರಂದು ಎಲ್ಲಾ ಪುಸ್ತಕಗಳನ್ನು ಪೂಜೆಗೆ ಇರಿಸಿ, ಲೇಖನ ಬರೆದವರ ಹೆಸರು, ರಾಶಿ, ನಕ್ಷತ್ರವನ್ನು ಸಂಕಲ್ಪಿಸಿ ನವಚಂಡಿಯಾಗವನ್ನು ನಡೆಸಿ ಭಕ್ತರಿಗೆ ಪ್ರಸಾದ ವಿತರಣೆಯಾಗಲಿದೆ.

ಭಕ್ತರು ಬರೆದ ಪುಸ್ತಕವನ್ನು ಸೂರ್ಯ-ಚಂದ್ರರು ಇರುವವರೆಗೆ ಅಮ್ಮನ ಸಾನಿಧ್ಯದಲ್ಲಿ ಶೇಖರಿಸಿ ಇಡಲಾಗುತ್ತದೆ, ಭಕ್ತರು ಬರೆದ ಹಸ್ತಾಕ್ಷರದ ಪುಸ್ತಕ ಸಾನಿಧ್ಯದಲ್ಲಿ ಇರುವುದಲ್ಲದೆ ಆ ಪುಸ್ತಕಕ್ಕೆ ಪ್ರತಿವರ್ಷ ನವರಾತ್ರಿಯ ಒಂದು ದಿನ ವಾಗೀಶ್ವರಿ ಪೂಜೆ ನೆರವೇರುತ್ತದೆ, ಲೇಖನ ಬರೆದವರ ಹೆಸರು ಸಾನಿಧ್ಯದಲ್ಲಿ ಶಾಶ್ವತವಾಗಿದ್ದು ನಮ್ಮ ಮುಂದಿನ ಪೀಳಿಗೆ ನಮ್ಮನ್ನು ಸಾನಿಧ್ಯದಲ್ಲಿ ನೆನಪಿಸುವಂತೆ ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಳ್ಳಿ. ನವದುರ್ಗಾ ಲೇಖನ ಯಜ್ಞದಲ್ಲಿ ಪಾಲ್ಗೊಂಡ ಭಕ್ತರಿಗೆ ಮತ್ತು ಅವರ ಕುಟುಂಬದವರ ಒಳಿತಿಗಾಗಿ ಪ್ರಾರ್ಥಿಸುವ ಸಂಕಲ್ಪ ಹೊಂದಲಾಗಿದೆ. ಲೇಖನ ಬರೆದ ಕುಟುಂಬಕ್ಕೂ ಕಾಪು ಮಾರಿಯಮ್ಮನ ಸನ್ನಿಧಾನಕ್ಕೂ ಶಾಶ್ವತವಾದ ಭಕ್ತಿ ಭಾವದ ಸಂಬಂಧ ನೆಲೆಯೂರುತ್ತದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ನವದುರ್ಗಾ ಲೇಖನ ಯಜ್ಞ ಸಮಿತಿ ಅಧ್ಯಕ್ಷ ರಘುಪತಿ ಭಟ್, ನವದುರ್ಗಾ ಲೇಖನ ಯಜ್ಞ ಸಮಿತಿ ಕಾಯಾಧ್ಯಕ್ಷ ಕೃಷ್ಣಪ್ರಸಾದ್ ಅಡ್ಯಂತಾಯ, ಉಪಾಧ್ಯಕ್ಷ ಹರಿಯಪ್ಪ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಯೋಗೀಶ್ ವಿ.ಶೆಟ್ಟಿ ಬಾಲಾಜಿ, ಕೋಶಾಧಿಕಾರಿ ಕೆ.ವಿಶ್ವನಾಥ್ ಉಪಸ್ಥಿತರಿದ್ದರು.