ಕಾಪು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ನಮ್ಮ ಸಮುದಾಯಕ್ಕೆ ಸಂದ ಗೌರವ : ಬಾಬು ಕೊರಗ
Posted On:
27-10-2024 08:27AM
ಕಾಪು : ಕನ್ನಡ ಸಾಹಿತ್ಯ ಪರಿಷತ್ತು ಕಾಪು ತಾಲ್ಲೂಕು ಘಟಕದ ವತಿಯಿಂದ ನವೆಂಬರ್ 16ರಂದು ಫಲಿಮಾರಿನಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಬಾಬು ಕೊರಗ ಅವರನ್ನು ಅವರ ಮೂಲ ಮನೆ ಪಾಂಗಾಳದ ಮಠದ ಕಾಡು, ಮಂಡೇಡಿಯ ಕುಡ್ಡು ಕೊರಗ ಅವರ ನಿವಾಸದಲ್ಲಿ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕಾಪು ತಾಲೂಕು ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ಜಂಟಿಯಾಗಿ ಸಮ್ಮೇಳದ ಆಹ್ವಾನ ಪತ್ರಿಕೆಯನ್ನು ನೀಡಿ ಗೌರವಿಸಿದರು.
ಈ ಸಂದರ್ಭ ಮಾತನಾಡಿದ ಬಾಬು ಕೊರಗ, ಸಮುದಾಯಗಳಲ್ಲಿ ಸಾವಿರ ವರ್ಷದ ಇತಿಹಾಸವಿರುವ ಸಮುದಾಯ ಕೊರಗ ಸಮುದಾಯ. ಅಂತಹ ಸಮುದಾಯದ ತನ್ನನ್ನು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಗೆ ಗುರುತಿಸಿರುವುದು ನಮ್ಮ ಸಮುದಾಯಕ್ಕೆ ಸಂದ ಗೌರವ ಎಂದರು.
ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿದರು.
ಈ ಸಂದರ್ಭದಲ್ಲಿ ಬಾಬು ಕೊರಗ ಅವರ ಕುಟುಂಬದ ಹಿರಿಯರಾದ ಕುಡ್ಡು ಕೊರಗರವರನ್ನು ಸನ್ಮಾನಿಸಲಾಯಿತು.
ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಜಿಲ್ಲಾ ಸಭಾಭವನ ನಿರ್ಮಾಣ ಸಮಿತಿಯ ಕಾರ್ಯಾಧ್ಯಕ್ಷ ಕೆ.ದೇವದಾಸ್ ಹೆಬ್ಬಾರ್, ಸಮಾ ಜದ ಪ್ರಮುಖರಾದ ಸುಂದರ ಟಿ., ಜಿಲ್ಲಾ ಸಮಿತಿಯ ನರಸಿಂಹಮೂರ್ತಿ, ಸಮಿತಿಯ ಸದಸ್ಯ ಅನಂತ ಮೂಡಿತ್ತಾಯ, ಕೊರಗ ಸಮುದಾಯದ ಪ್ರಮುಖರಾದ ರಮೇಶ್ ಬಜ್ಪೆ ಉಪಸ್ಥಿತರಿದ್ದರು.
ಕ.ಸಾ.ಪ. ಕಾಪು ತಾಲ್ಲೂಕು ಸಮಿತಿಯ ಸದಸ್ಯರಾದ ಸುಧಾಕರ ಪೂಜಾರಿ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಕೆ.ಆರ್.ಪಾಟ್ಕರ್ ಕಾರ್ಯಕ್ರಮ ನಿರೂಪಿಸಿದರು. ಗೌರವ ಕಾರ್ಯದರ್ಶಿ ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ವಂದಿಸಿದರು.