ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನೊಂದಿಗೆ ಎನ್.ಐ.ಟಿ.ಕೆ ಸೀಮನ್ಸ್ ಕೇಂದ್ರದ ಒಡಂಬಡಿಕೆ
Posted On:
27-10-2024 12:35PM
ಶಿರ್ವ : ಬಂಟಕಲ್ಲಿನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್ ವಿಭಾಗವು ಸುರತ್ಕಲ್ ಎನ್.ಐ.ಟಿ.ಕೆ ಸೀಮನ್ಸ್ ಕೇಂದ್ರದೊಂದಿಗೆ ವಿದ್ಯಾರ್ಥಿಗಳ ಕೌಶಲ್ಯಾಭಿವೃದ್ಧಿಗೆ ಪೂರಕವಾಗಿ ಒಂದು ಒಡಂಬಡಿಕೆಗೆ ಸಹಿ ಹಾಕಲಾಯಿತು.
ಸುರತ್ಕಲ್‌ನ ರಾಷ್ಟ್ರೀಯ ತಾಂತ್ರಿಕ ಮಹಾವಿದ್ಯಾಲಯ ಕರ್ನಾಟಕ ಸೀಮನ್ಸ್ ಕೇಂದ್ರವನ್ನು ಸ್ಥಾಪಿಸಿದೆ. ವಿದ್ಯಾರ್ಥಿಗಳಿಗೆ ಪ್ರಸ್ತುತ ಕೈಗಾರಿಕೆಗಳಲ್ಲಿ ಉದ್ಯೋಗ ಮಾಡಲು ಬೇಕಾದ ಸೂಕ್ತ ಕೌಶಲ್ಯಗಳ ತರಬೇತಿ ನೀಡುವುದು ಈ ಕೇಂದ್ರದ ಉದ್ದೇಶವಾಗಿದೆ.
ಪ್ರಸ್ತುತ ಈ ಕೇಂದ್ರದಲ್ಲಿ ಅತ್ಯಾಧುನಿಕ ಪ್ರಯೋಗಾಲಯಗಳಾದ ಪ್ರಾಡಕ್ಟ್ ಡಿಜಿಟಲೈಜೇಷನ್ ಲ್ಯಾಬ್, ಪ್ರೋಸಸ್ ಡಿಜಿಟಲೈಜೇಷನ್ ಲ್ಯಾಬ್, ಫ್ಯಾಕ್ಟರಿ ಆಟೋಮೇಶನ್ ಲ್ಯಾಬ್, ಮೆಕಟ್ರಾನಿಕ್ಸ್ ಲ್ಯಾಬ್, ಪ್ರೋಟೋಟೈಪ್ ಲ್ಯಾಬ್ ಮತ್ತು ಅಡ್ವಾನ್ಸ್ ಅನಾಲಿಸಿಸ್ ಲ್ಯಾಬ್‌ಗಳು ಕಾರ್ಯನಿರ್ವಹಿಸುತ್ತಿವೆ. ಈ ಬಡಂಬಡಿಕೆಯಿ೦ದ ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ವಿದ್ಯಾರ್ಥಿಗಳಿಗೆ ವಿವಿಧ ಅತ್ಯಾಧುನಿಕ ಮೆಕ್ಯಾನಿಕಲ್ ಸಾಫ್ಟ್‌ವೇರ್ ಕೋರ್ಸ್ ಗಳನ್ನು ಕಲಿಯಲು ಮತ್ತು ಇಂಟರ್ನ್‌ಪ್ ತರಬೇತಿ ಪಡೆಯಲು ಅನುಕೂಲವಾಗಿದೆ.
ಒಡಂಬಡಿಕೆಗೆ ಸಹಿ ಹಾಕುವ ಸಂದರ್ಭದಲ್ಲಿ ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥರಾದ ಡಾ. ರಾಜ ಯತೀಶ್ ಯಾದವ್, ವಿಭಾಗದ ಪ್ರಾಧ್ಯಾಪಕರಾದ ಡಾ. ಭರತ್ ಕೆ ಭಟ್, ಸೀಮನ್ಸ್ ಕೇಂದ್ರದ ಸಂಚಾಲಕರಾದ ಅರುಣಾಚಲಂ ಮತ್ತು ಕೇಂದ್ರದ ವಿದ್ಯಾರ್ಥಿ ಸಂಚಾಲಕರಾದ ಆರೀ ರಾಯ್ಸನ್ಟ್ ಫೆರ್ನಾಂಡಿಸ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕೇಂದ್ರಕ್ಕೆ ತಂತ್ರಜ್ಞಾನ ನೆರವು ಒದಗಿಸುವ ಪುಣೆಯ 3ಡಿ ಇಂಜಿನಿಯರಿಂಗ್ ಆಟೋಮೇಶನ್ ಸಂಸ್ಥೆಯ ವ್ಯವಸ್ಥಾಪಕರಾದ ಹೃಷಿಕೇಶ್ ಕೋಲಪ್ಕರ್ ಆನ್ಲೈನ್ ಮೂಲಕ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗವು ಮಾಡಿಕೊಂಡ ಒಡಂಬಡಿಕೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರಾದ ಡಾ. ತಿರುಮಲೇಶ್ವರ ಭಟ್ ಮತ್ತು ಉಪಪ್ರಾಂಶುಪಾಲರಾದ ಡಾ. ಗಣೇಶ್ ಐತಾಳ್ ಅಭಿನಂದಿಸಿದ್ದಾರೆ.