ಕಾಪು : ಕಾಪು ಉಳಿಯಾರಗೋಳಿ ದಂಡತೀರ್ಥ ವಿದ್ಯಾ ಸಂಸ್ಥೆ ಸಂಚಾಲಿತ ದಂಡತೀರ್ಥ ಪಿಯು ಕಾಲೇಜಿನ ರಜತ ಮಹೋತ್ಸವ ನವಂಬರ್ 8 ರಂದು ಸಂಸ್ಥೆಯ ಆವರಣದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಸಂಚಾಲಕರಾದ ಡಾ. ಕೆ ಪ್ರಶಾಂತ್ ಶೆಟ್ಟಿ ಹೇಳಿದರು.
ಅವರು ಮಂಗಳವಾರ ಉಳಿಯಾರಗೋಳಿ ದಂಡ ತೀರ್ಥ ವಿದ್ಯಾ ಸಂಸ್ಥೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
1999ರಲ್ಲಿ ದಂಡತೀರ್ಥ ಪಿಯು ಕಾಲೇಜು ಪ್ರಾರಂಭಗೊಂಡಿದ್ದು, ನ.8 ರಂದು ರಜತ ಮಹೋತ್ಸವ ಆಚರಿಸುತ್ತಿದೆ.
ಬೆಳ್ಳಿ ಹಬ್ಬದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ವಹಿಸಲಿದ್ದು, ಎಮ್ ಆರ್ ಜಿ ಗ್ರೂಪ್ ನ ಅಧ್ಯಕ್ಷರಾಗಿರುವ ಡಾ. ಕೆ ಪ್ರಕಾಶ್ ಶೆಟ್ಟಿ ಅವರು ದೀಪ ಪ್ರಜ್ವಲನೆ ಮಾಡಲಿದ್ದು, ಡಾ. ಎಮ್ ಶಾಂತಾರಾಮ್ ಶೆಟ್ಟಿ- ಪ್ರೊ ಚಾನ್ಸಲರ್ ನಿಟ್ಟೆ ಯುನಿವರ್ಸಿಟಿ, ಮಣಿಪಾಲ ವಿಶ್ವವಿದ್ಯಾಲಯದ ಪ್ರೊ ಚಾನ್ಸಲರ್ ಡಾ. ಎಚ್ ಎಸ್ ಬಲ್ಲಾಳ್ ಪುತ್ಥಳಿ ಅನಾವರಣ ಮಾಡಲಿದ್ದು, ಎಂಡಿ ಮಲ್ಟಿಟೆಕ್ ಗ್ರೂಪ್ ಮಸ್ಕತ್ ನ ಸಂಸ್ಥಾಪಕ ದಿವಾಕರ ಶೆಟ್ಟಿ ಅವರು ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಮಹಮ್ಮದ್ ಅಸ್ಲಾಂ ಖಾಝಿ, ಚಂದ್ರಶೇಖರ ಶೆಟ್ಟಿ,ಅಶೋಕ್ ಹೆಗ್ಡೆ, ಮಾರುತಿ, ಕಾಪು ದಿವಾಕರ ಶೆಟ್ಟಿ, ಕೆ ವಾಸುದೇವ ಶೆಟ್ಟಿ, ಮನೋಹರ ಎಸ್ ಶೆಟ್ಟಿ ಉಪಸ್ಥಿತರಿರಲಿದ್ದಾರೆ.
ವಿವಿಧ ಗಣ್ಯರ ಉಪಸ್ಥಿತಿಯಲ್ಲಿ ದಿವಂಗತ ಡಾ .ಪ್ರಭಾಕರ್ ಶೆಟ್ಟಿ ಅವರ ಪುತ್ಥಲಿ ಅನಾವರಣ, ಸಭಾ ಕಾರ್ಯಕ್ರಮ ಮತ್ತು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಒಂದು ಕೋಟಿ ರೂಪಾಯಿ ವಿದ್ಯಾರ್ಥಿವೇತನ ಸಂಗ್ರಹದ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಿದ್ಯಾ ಸಂಸ್ಥೆಯ ಗೌರವ ಸಲಹೆಗಾರ ಅಲ್ಬನ್ ರಾಡ್ರಿಗಸ್, ಪ್ರಾಂಶುಪಾಲ ನೀಲಾನಂದ ನಾಯ್ಕ್, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಗ್ಯಾಬ್ರಿಯಲ್ ಮಸ್ಕರೇನಸ್, ಶಿವಣ್ಣ ಬಾಯರಿ ಉಪಸ್ಥಿತರಿದ್ದರು.