ಕಾಪು ಪ್ರೆಸ್ ಕ್ಲಬ್‌ನಲ್ಲಿ ದೀಪಾವಳಿ ಸಂಭ್ರಮ
Posted On:
05-11-2024 07:09PM
ಕಾಪು : ದೀಪದ ಬೆಳಕು ಎಲ್ಲೆಡೆ ಪಸರಿಸುವಂತೆ ಪತ್ರಕರ್ತರು ಸುದ್ದಿಯ ಮೂಲಕ ಜ್ಞಾನದ ಅರಿವನ್ನು ಸಮಾಜಕ್ಕೆ ಪಸರಿಸುತ್ತಾರೆ. ಸುದ್ದಿ ಸಮಾಚಾರಗಳು ಜನರನ್ನು ಜಾಗೃತರನ್ನಾಗಿಸಿದೆ ಎಂದು ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ಪ್ರಧಾನ ತಂತ್ರಿ ಜ್ಯೋತಿಷ್ಯ ವಿದ್ವಾನ್ ಕೆ. ಪಿ. ಶ್ರೀನಿವಾಸ ತಂತ್ರಿ ಮಡುಂಬು ಹೇಳಿದರು.
ಅವರು ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪ್ರೆಸ್ ಕ್ಲಬ್‌ನಲ್ಲಿ ಆಯೋಜಿಸಲಾಗಿದ್ದ ದೀಪಾವಳಿ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಜಾತಿ, ಮತ, ಧರ್ಮಗಳನ್ನು ಮೀರಿ ಕಾಪು ತಾಲೂಕಿನ ಪತ್ರಕರ್ತರು ಒಗ್ಗಟ್ಟಾಗಿ ನಡೆಸುವ ಕಾರ್ಯಕ್ರಮಗಳು ಎಲ್ಲರಿಗೂ ಮಾದರಿಯಾಗುವಂತದ್ದಾಗಿದೆ ಎಂದರು.
ಲಯನ್ಸ್ ಜಿಲ್ಲಾ ಮಾಜಿ ಗವರ್ನರ್ ಮತ್ತು ಬಿಕ್ಕೋ ಸಂಸ್ಥೆಯ ಆಡಳಿತ ನಿರ್ದೇಶಕ ಶ್ರೀಧರ ಶೇಣವ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಬಾಲಕೃಷ್ಣ ಪೂಜಾರಿ, ಉದ್ಯಮಿಗಳಾದ ದೀಪಕ್ ಕುಮಾರ್ ಎರ್ಮಾಳು, ನವೀನ್ ಎನ್. ಶೆಟ್ಟಿ, ಡಾ. ಮನೋಜ್ ಕುಮಾರ್ ಶೆಟ್ಟಿ ಶುಭಾಶಂಸನೆಗೈದರು. ಕೋಶಾಧಿಕಾರಿ ಹೇಮನಾಥ ಪಡುಬಿದ್ರಿ ಉಪಸ್ಥಿತರಿದ್ದರು.
ಅಧ್ಯಕ್ಷತೆ ವಹಿಸಿದ್ದ ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ್ ಹೆಜ್ಮಾಡಿ ಸ್ವಾಗತಿಸಿ, ಪ್ರಸ್ತಾವನೆಗೈದರು. ಕಾರ್ಯದರ್ಶಿ ಸಂತೋಷ್ ನಾಯ್ಕ್ ವಂದಿಸಿದರು. ಮಾಜಿ ಅಧ್ಯಕ್ಷ ಪ್ರಕಾಶ್ ಸುವರ್ಣ ಕಟಪಾಡಿ ಕಾರ್ಯಕ್ರಮ ನಿರೂಪಿಸಿದರು.