ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಜೈ ತುಲುನಾಡ್ ಉಡುಪಿ ಘಟಕದ ಉದ್ಘಾಟನೆ

Posted On: 07-11-2024 10:49PM

ಉಡುಪಿ : ತುಳುಲಿಪಿ ತುಳುಭಾಷೆ ಹಾಗೂ ಸಂಸ್ಕೃತಿಯ ಉಳಿವಿಗಾಗಿ ಕಳೆದ 10 ವರ್ಷಗಳಿಂದ ಯಾವುದೇ ಫಲಾಪೇಕ್ಷೆಯಿಲ್ಲದೆ ಶ್ರಮಿಸುತ್ತಿರುವ ಜೈತುಲುನಾಡ್ (ರಿ.) ಇದರ ಉಡುಪಿ ಘಟಕದ ಉದ್ಘಾಟನಾ ಸಮಾರಂಭವು ಬನ್ನಂಜೆ ಶ್ರೀನಾರಾಯಣಗುರು ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಿರಿ ತುಳು ಚಾವಡಿ ಉಡುಪಿ ಇದರ ಅಧ್ಯಕ್ಷರಾದ ಡಾ. ಗಣನಾಥ್ ಎಕ್ಕಾರ್, ಸಮಾಜದಲ್ಲಿ ಬೇರೆ ಭಾಷೆಗಳಿಗೆ ಆಡಳಿತಾತ್ಮಕ ರಕ್ಷಣೆ ಇದೆ. ಆದರೆ ತುಳುಭಾಷೆಗೆ ಆಡಳಿತಾತ್ಮಕ ರಕ್ಷಣೆ ಇಲ್ಲ. ಹಾಗಾಗಿ ತುಳುಭಾಷೆಯನ್ನು ರಕ್ಷಣೆಮಾಡಬೇಕಾದ ಅಗತ್ಯ ತುಳು ಸಂಘಟನೆಗಳಿಗಿದೆ ಆ ನಿಟ್ಟಿನಲ್ಲಿ ಜೈತುಲುನಾಡ್ (ರಿ.) ಸಂಘಟನೆ ತುಳುಭಾಷೆಗೆ ಕೊಡುತ್ತಿರುವ ಕೊಡುಗೆ ಅಪಾರವಾಗಿದೆ ಎಂದು ತಿಳಿಸಿದರು. ರಾಜಕಾರಣಿಗಳು ವೇದಿಕೆಯಲ್ಲಿ ಮಾತ್ರ ತುಳುವಿನ ಬಗ್ಗೆ ಮಾತನಾಡುತ್ತಾರೆ ಆದರೆ ತುಳು ಭಾಷೆಯ ಏಳಿಗೆಗೆ ಯಾರೂ ಬಲವಾಗಿ ನಿಲ್ಲುವುದಿಲ್ಲ ಹಾಗಾಗಿ ತುಳು ಭಾಷೆ ತುಳುವರ ಬದುಕು ಹಿಂದುಳಿಯುತ್ತಿದೆ. ಆದರೆ ತುಳುಪರ ಸಂಘಟನೆಗಳು ತುಳುಭಾಷೆಗೆ ಗಟ್ಟಿಯಾದ ರಕ್ಷಣೆ ಕೊಟ್ಟ ಸಲುವಾಗಿ ತುಳುಭಾಷೆ ಉಳಿಯುತ್ತಿದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಜೈ ತುಲುನಾಡ್ (ರಿ.)ಉಡುಪಿ ವಲಯದ ಅಧ್ಯಕ್ಷೆಯಾಗಿ ಸುಶೀಲ ಜಯಕರ್ ಅವರನ್ನು ಆಯ್ಕೆ ಮಾಡಲಾಯಿತು. ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಜೈ ತುಲುನಾಡ್ (ರಿ.) ಸಂಘಟನೆಯ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿರುವ ಪೂರ್ಣಿಮಾ ಬಂಟ್ವಾಳರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಸಮಾಜದಲ್ಲಿ ತುಳು ಭಾಷೆಗೆ ತುಳುಭಾಷಿಗರಿಂದಲೇ ಆಗುತ್ತಿರುವ ಅನ್ಯಾಯದ ಬಗ್ಗೆ ತಿಳಿಸಿದರು. ತುಳುಭಾಷೆ ಹಾಗೂ ಲಿಪಿಯ ಉಳಿವಿಗಾಗಿ ಸಂಘಟನೆಗೆ ಸಮಾಜದ ಸಹಕಾರ ಅತ್ಯಗತ್ಯ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ನೂತನವಾಗಿ ಆಯ್ಕೆಯಾದ ಉಡುಪಿ ವಲಯದ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು. ಸಂಘಟನೆಯ ಸ್ಥಾಪಕ ಸಮಿತಿಯ ಸದಸ್ಯರಾದ ಸುಮಂತ್ ಹೆಬ್ರಿ ಮಾತನಾಡಿದರು. ಕಾರ್ಯಕ್ರಮದಲ್ಲಿ ತುಳು ಲಿಪಿ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಶಸ್ತಿ ಪತ್ರ ನೀಡಲಾಯಿತು.

ವೇದಿಕೆಯಲ್ಲಿ ಉಡುಪಿಯ ಹಿರಿಯ ವಕೀಲರಾದ ರಮೇಶ್.ಎಲ್.ದೇವಾಡಿಗ, ತುಳುನಾಡ ಧ್ವನಿ ತುಳು ಅಂತರ್ಜಾಲ ಪತ್ರಿಕೆಯ ಸಂಪಾದಕರಾದ ಯಶೋದ ಕೇಶವ್, ಜೈ ತುಲುನಾಡ್ (ರಿ.) ಸಂಘಟನೆಯ ಸ್ಥಾಪಕ ಸಮಿತಿಯ ಸದಸ್ಯರಾದ ಸದಾಶಿವ ಮುದ್ರಾಡಿ, ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿಯಾದ ಸಂತೋಷ್.ಎನ್.ಎಸ್ ಕಟಪಾಡಿ ಉಪಸ್ಥಿತರಿದ್ದರು.

ಉಡುಪಿ ವಲಯದ ಕಾರ್ಯದರ್ಶಿಯಾಗಿರುವ ಸಾಗರ್ ಬನ್ನಂಜೆ ಸ್ವಾಗತಿಸಿದರು. ಸ್ಥಾಪಕ ಸಮಿತಿಯ ಸದಸ್ಯರಾದ ಶರತ್ ಕೊಡವೂರು ವಂದಿಸಿದರು. ಕೇಂದ್ರ ಸಮಿತಿಯ ಜೊತೆ ಕಾರ್ಯದರ್ಶಿಯಾಗಿರುವ ಪ್ರಜ್ಞಾಶ್ರೀ ಎಮ್ ಕೊಡವೂರು ಕಾರ್ಯಕ್ರಮ ನಿರೂಪಿಸಿದರು