ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಉತ್ಥಾನ ದ್ವಾದಶಿ ಬದುಕಿನ ಜಾಗೃತಿ ಸಾರುವ ತುಳಸಿ ಪೂಜೆ

Posted On: 13-11-2024 06:53AM

ಹಲವು ಔಷಧ ಗುಣವುಳ್ಳ ಪವಿತ್ರ ತುಳಸಿಯನ್ನು ಪೂಜಿಸುವ ತುಳಸಿ ಹಬ್ಬವನ್ನು ಭಾರತೀಯ ಹಿಂದೂ ಸಂಪ್ರದಾಯದಲ್ಲಿ ಆಚರಿಸುವ ಪದ್ಧತಿ ನೂರಾರು ವಷ೯ಗಳಿಂದ ರೂಢಿಯಲ್ಲಿದೆ. ಹಬ್ಬಗಳ ಮಾಸವಾದ ಕಾರ್ತಿಕ ಮಾಸದಲ್ಲಿ ಬರುವ ಹಬ್ಬಗಳಲ್ಲಿ ಇದೊಂದು ಪ್ರಸಿದ್ಧವಾದ ಹಬ್ಬ. ಉತ್ಥಾನ ದ್ವಾದಶಿ, ಕಾರ್ತಿಕ ಶುಕ್ಲ ದ್ವಾದಶಿಯಂದು ಆಚರಿಸಲಾಗುವ ಈ ಹಬ್ಬ ಪ್ರಮುಖವಾಗಿದೆ.

‘ಉತ್ಥಾನ’ ಎಂದರೆ ‘ಏಳುವುದು-ಜಾಗೃತಿ. ಶ್ರೀಮನ್ನಾರಾಯಣನು ತನ್ನ ನಿದ್ರಾಮುದ್ರೆಯನ್ನು ಬಿಟ್ಟು ಎಚ್ಚರಿಕೆ ಹೊಂದುವ ಮುದ್ರೆಯನ್ನು ಭಕ್ತರಿಗೆ ತೋರಿಸುವ ದ್ವಾದಶಿ ತಿಥಿಯ ದಿನವಾದ್ದರಿಂದ ಇದನ್ನು ಉತ್ಥಾನ ದ್ವಾದಶಿ ಎಂದು ವಿದ್ವಾಂಸರು ತಿಳಿಸಿದ್ದಾರೆ. ಉತ್ಥಾನ ದ್ವಾದಶಿಯ ದಿನ ವಿಷ್ಣುವಿನ ಪೂಜೆ ಹಾಗೂ ವಿಷ್ಣುವಿನೊಡನೆ ಧಾತ್ರೀ (ನೆಲ್ಲಿ ಗಿಡ) ಸಹಿತವಾದ ತುಳಸಿ ಗಿಡ ನೆಟ್ಟು ಪೂಜಿಸುತ್ತಾರೆ. ದೀಪಗಳಿಂದ ತುಳಸಿ ಬೃಂದಾವನ (ಕಟ್ಟೆ)ವನ್ನು ಅಲಂಕರಿಸುತ್ತಾರೆ. .ಈ ಹಬ್ಬದಂದು ನೆಲ್ಲಿಕಾಯಿಯ ಗೆಲ್ಲನ್ನು ತುಳಸಿ ಬೃಂದಾವನದಲ್ಲಿ ನೆಟ್ಟು, ನೆಲ್ಲಿಕಾಯಿಯಿಂದಲೇ ಸಂಜೆ ಆರತಿ ಬೆಳಗುವುದು ವಿಶೇಷ. ನೆಲ್ಲಿಕಾಯಿಗೆ ಧಾತ್ರಿ ಎನ್ನುತ್ತಾರೆ. ತುಳಸಿ ಎಲ್ಲಿದೆಯೋ ಅಲ್ಲಿ ಹರಿ ಸನ್ನಿದಾನವಿದೆ. ಹೀಗಾಗಿ ಶ್ರೀಹರಿಯ ಜತೆ ಲಕ್ಮ್ಷೀಯನ್ನು ಪೂಜಿಸುವ ಉದ್ದೇಶದಿಂದ ನೆಲ್ಲಿಯ ಗೆಲ್ಲನ್ನು ತುಳಸಿಯ ಜತೆ ನೆಡುವ ಕ್ರಮವಿದೆ.

ದಿನದ ಪೂಜೆಗಳಲ್ಲೂ ಶ್ರೇಷ್ಠವಾದದ್ದು ತುಳಸಿ ಪೂಜೆ : ಸಂಸ್ಕೃತದಲ್ಲಿ ‘ತುಳಸಿ ಸುಲಭಾ, ಸುರನಾ, ಬಹುಮಂಜರಿ, ಶೂಲಕ್ಮ್ಷೀ, ದೇವ ದುಂದುಬಿ, ಪಾವನೀ ವಿಷ್ಣು ಪ್ರಿಯಾ, ದಿವ್ಯ, ಭಾರತೀ’-ಹೀಗೆ ಮುಂತಾದ ಹೆಸರುಗಳಿಂದ ಕರೆಸಿಕೊಳ್ಳುವ ತುಳಸಿ ಸರ್ವರೋಗ ನಿವಾರಕ. ಎಲೆ, ಬೇರು, ಬೀಜ ಹಾಗೂ ಸಂಪೂರ್ಣ ಗಿಡವೇ ಉಪಯುಕ್ತ. ತುಳಸಿಯ ಸುತ್ತಮುತ್ತಲಿನ ಗಾಳಿಯನ್ನು ಪರಿಶುದ್ಧಗೊಳಿಸುವ ಶಕ್ತಿ ಹೊಂದಿದೆ. ತುಳಸಿಯ ವಿಶಿಷ್ಟ ಸುವಾಸನೆಯು ಕ್ರಿಮಿ, ಕೀಟ, ರೋಗಾಣುಗಳನ್ನು ದೂರವಿಡುತ್ತದೆ. ಆದ್ದರಿಂದ ತುಳಸಿ ಗಿಡಗಳು ಮನೆಯ ಸುತ್ತಮುತ್ತಲೂ ಇದ್ದರೆ ಸೊಳ್ಳೆಕಾಟ ಕಡಿಮೆಯಾಗುತ್ತದೆ. ತುಳಸಿ ಎಲೆಗಳನ್ನು ನೀರಿನಲ್ಲಿ ಹಾಕಿಟ್ಟರೆ ಸೂಕ್ಷ್ಮ ರೋಗಾಣುಗಳು ನಾಶವಾಗುತ್ತದೆ. ಸುರ್ಯೋದಯಕ್ಕೆ ಮುನ್ನ ಅಂದರೆ ಬ್ರಾಹ್ಮಿ ಮೂಹರ್ತದಲ್ಲಿ ಇದರ ಸೇವನೆ ಹೆಚ್ಚು ಫಲಕಾರಿಯಾಗಿರುತ್ತದೆ. ಎಂದು ವೈದ್ಯರು ಹೇಳುತ್ತಾರೆ. ಏಳು ವಿಧಗಳ ತುಳಸಿ : ಸುಗಂಧ ದ್ರವ್ಯ ಸಸ್ಯ ತುಳಸಿಯಲ್ಲಿ ಏಳು ವಿಧಗಳಿವೆ. ಅದರಲ್ಲಿ ಮುಖ್ಯವಾದುದು ಶ್ರೀ ತುಳಸಿ, ಕೃಷ್ಣ ತುಳಸಿ, ರಾಮ ತುಳಸಿ.

ತುಳಸಿಯು ಭಾರತೀಯರ ಪಾಲಿಗೆ ಸಂಜೀವಿನಿ : ಯಾವುದೇ ಪೂಜಾ ಸಮಯದಲ್ಲಿ ನೈವೇದ್ಯಕ್ಕೆ ತುಳಸಿ ದಳಗಳನ್ನು ಸೇರಿಸುವುದು ಇದರ ಪಾವಿತ್ರ್ಯಕ್ಕೆ ಸಾಕ್ಷಿಯಾಗಿದೆ. ಕಾರ್ತಿಕ ಮಾಸದಲ್ಲಿ ಪ್ರತಿದಿನ ತುಳಸಿಯನ್ನು ಪೂಜಿಸಿ ನಮಸ್ಕರಿಸಿದರೆ ಒಂದು ಯುಗದಲ್ಲಿ ಮಾಡಿದ ಪಾಪದಿಂದ ಮುಕ್ತಿ ದೊರೆಯುತ್ತದೆ ಎಂಬ ನಂಬಿಕೆಯಿದೆ. ಈ ಪವಿತ್ರ ಹಾಗೂ ಔಷಧೀಯ ಗುಣಗಳನ್ನು ಹೊಂದಿದ ತುಳಸಿಯನ್ನು ಉತ್ಥಾನ ದ್ವಾದಶಿಯಂದು ವಿಶೇಷವಾಗಿ ಪೂಜೆ ಸಲ್ಲಿಸಲು ಇದೊಂದು ಅಪೂವ೯ ಅವಕಾಶವಾಗಿವೆ. ಈ ಮೂಲಕ ಪ್ರಕೃತಿಯ ಆರಾಧನೆಯೊಂದಿಗೆ ಮನೆ ಮಂದಿಯಲ್ಲ ಒಟ್ಟಾಗಿ ಸೇರಿ ಆಚರಿಸುವ ವಿಶಿಷ್ಟವಾದ ಹಬ್ಬ ಈ ಹಬ್ಬದಲ್ಲಿ ನಾಡಿನ ಪ್ರಸಿದ್ಧ ಪುಣ್ಯಕ್ಷೇತ್ರಗಳಿಗೆ ಕಾಣಿಕೆಯನ್ನು ತೆಗೆದಿಡುವ ಕ್ರಮ ಹಳ್ಳಿಗಳಲ್ಲಿ ಇದೆ ಈ ಮೂಲಕ ಕುಟುಂಬದೊಂದಿಗೆ ಈ ಹಬ್ಬದ ಆಚರಣೆ ಮಾಡಿ ನಂತರ ಪ್ರಸಾದ ಸೇವಿಸಿ ಖುಷಿಯಾಗಿ ಬದುಕುವುದನ್ನು ನಮಗೆ ಈ ಹಬ್ಬ ತಿಳಿಸುತ್ತದೆ. ಪ್ರಕೃತಿಯಲ್ಲಿ ಭಗವಂತನ ದಶ೯ನ ಅದೇ ರೀತಿ ಪ್ರಕೃತಿಯೇ ದೇವರೆಂಬ ಕಲ್ಪನೆಯನ್ನು ಸಾರುವ ಹಬ್ಬ ಮತ್ತೊಮ್ಮೆ ಬಂದಿದೆ. ಲೇಖನ : ರಾಘವೇಂದ್ರ ಪ್ರಭು, ಕವಾ೯ಲು ಲೇಖಕ/ತರಬೇತುದಾರರು