ನ.16-18 : ಪಡುಬಿದ್ರಿಯಲ್ಲಿ ರಾಷ್ಟ್ರಮಟ್ಟದ ಕ್ರಿಕೆಟ್ ಪಂದ್ಯಾಕೂಟ - ಕಡಲ್ ಫಿಶ್ ಟ್ರೋಫಿ
Posted On:
14-11-2024 09:44PM
ಕಾಪು : ಕಡಲ್ ಫಿಶ್ ಕ್ರಿಕೆಟರ್ಸ್ ಆಶ್ರಯದಲ್ಲಿ ಪಡುಬಿದ್ರಿಯ ಬೋರ್ಡ್ ಶಾಲಾ ಮೈದಾನದಲ್ಲಿ ನ.16-18ರ ವರೆಗೆ ಪ್ರಪ್ರಥಮ ಬಾರಿಗೆ ಅಂತಾರಾಷ್ಟ್ರೀಯ ತಂಡವೊಂದು ಭಾಗವಹಿಸುವ ರಾಷ್ಟ್ರಮಟ್ಟದ ಹೊನಲು ಬೆಳಕಿನ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟ ಕಡಲ್ ಫಿಶ್ ಟ್ರೋಫಿ-2024 ನಡೆಯಲಿದೆ.
ಕಾಪು ಪ್ರೆಸ್ ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಉಪಾಧ್ಯಕ್ಷ ವಿಶ್ವಾಸ್ ವಿ.ಅಮೀನ್ ಮಾಹಿತಿ ನೀಡಿದರು. ಪಂದ್ಯಾಟದಲ್ಲಿ ಪ್ರಥಮ ಬಾರಿಗೆ ಶ್ರೀಲಂಕಾದ ತಂಡ ಪಾಲ್ಗೊಳ್ಳಲಿದೆ. ಅಲ್ಲದೆ ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ರಾಜ್ಯದ ಪ್ರತಿಷ್ಠಿತ ತಂಡಗಳು, ಉಭಯ ಜಿಲ್ಲೆಯ ಬಲಿಷ್ಠತಂಡಗಳು ಭಾಗವಹಿಸಲಿದ್ದು, ಒಟ್ಟು 16 ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ.
ವಿಜೇತರಿಗೆ ಪ್ರಥಮ ಪ್ರಶಸ್ತಿ ಸಹಿತ ನಗದು 5 ಲಕ್ಷ ರೂ., ದ್ವಿತೀಯ ಪ್ರಶಸ್ತಿ ಸಹಿತ ನಗದು 3ಲಕ್ಷ ರೂ. ಬಹುಮಾನವಿದೆ. ಜತೆಗೆ ಪಂದ್ಯಶ್ರೇಷ್ಠ ಸರಣಿ ಶ್ರೇಷ್ಠ, ಉತ್ತಮ ದಾಂಡಿಗ, ಉತ್ತಮ ಬೌಲರ್ ವೈಯಕ್ತಿಕ ಪ್ರಶಸ್ತಿಗಳಿವೆ. ಲೀಗ್ ಮಾದರಿಯಲ್ಲಿ ಪಂದ್ಯಾಟ ನಡೆಯಲಿದ್ದು, ನ.18ರಂದು ಸಂಜೆ ಹೊನಲು ಬೆಳಕಿನಲ್ಲಿ ಫೈನಲ್ ಪಂದ್ಯ ನಡೆಯಲಿದೆ.
ನ.16ರಂದು ಸಂಜೆ 6 ಗಂಟೆಗೆ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಶ್ರೀಲಂಕಾ ಮತ್ತು ಭಾರತ 11 ತಂಡಗಳು ಸೆಣಸಾಟ ನಡೆಸಲಿದ್ದು, ಎಂಆರ್‌ಜಿ ಗ್ರೂಪ್ ಆಡಳಿತ ನಿರ್ದೇಶಕ ಡಾ.ಕೆ.ಪ್ರಕಾಶ್ ಶೆಟ್ಟಿ ಚಾಲನೆ ನೀಡಲಿದ್ದಾರೆ. ಸಂಸ್ಥೆಯ ಗೌರವಾಧ್ಯಕ್ಷ ನವೀನ್‌ಚಂದ್ರ ಜೆ.ಶೆಟ್ಟಿ, ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ ಮತ್ತು ಪ್ರಮೋದ್ ಮಧ್ವರಾಜ್, ಅದಾನಿ ಗ್ರೂಪ್ ಅಧ್ಯಕ್ಷ ಕಿಶೋರ್ ಆಳ್ವ ಸಹಿತ ಗಣ್ಯರು ಉಪಸ್ಥಿತರಿರುವರು.
ನ.18ರಂದು ರಾತ್ರಿ ನಡೆಯುವ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಶಾಸಕ ಯಶಪಾಲ್ ಎ.ಸುವರ್ಣ, ಮಾಜಿ ಶಾಸಕ ಲಾಲಾಜಿ ಆರ್.ಮೆಂಡನ್, ಸಂಸ್ಥೆಯ ಅಧ್ಯಕ್ಷ ಪ್ರಶಾಂತ್ ಸಾಲ್ಯಾನ್ ಭಾಗವಹಿಸುವರು. ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಚೇತನ್ ಕುಮಾರ್, ಪದಾಧಿ ಕಾರಿಗಳಾದ ಸಂತೋಷ್ ಪಡುಬಿದ್ರಿ, ರಚನ್ ಸಾಲ್ಯಾನ್, ಪಾಂಡುರಂಗ ಕೋಟ್ಯಾನ್ ಉಪಸ್ಥಿತರಿದ್ದರು.