ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ನ. 23 : ಸಚಿವ ಮಂಕಾಳ ವೈದ್ಯರಿಂದ ಪಡುಬಿದ್ರಿ ಬೀಚ್ ಕಾರ್ನಿವಲ್ ಉದ್ಘಾಟನೆ

Posted On: 22-11-2024 10:29AM

ಪಡುಬಿದ್ರಿ : ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪ್ರವಾಸೋದ್ಯಮ ಇಲಾಖೆಗಳ ಸಹಕಾರದೊಂದಿಗೆ 50ನೇ ವರ್ಷದ ಸಂಭ್ರಮಾಚರಣೆಯಲ್ಲಿರುವ ಜೇಸಿಐ ಪಡುಬಿದ್ರಿ ಆತಿಥ್ಯದಲ್ಲಿ ಪಡುಬಿದ್ರಿಯ ಬ್ಲೂ ಫ್ಲ್ಯಾಗ್ ಬೀಚ್ ಮತ್ತು ಮುಖ್ಯ ಬೀಚ್‌ಗಳಲ್ಲಿ ನ. 23 ಹಾಗೂ 24ರಂದು ವಿವಿಧ ಕ್ರೀಡೆಗಳು, ಪ್ರವಾಸೋದ್ಯಮ ಹಾಗೂ ಸಂಸ್ಕೃತಿಗಳ ಅನಾವರಣಗೊಳಿಸುವುದಕ್ಕಾಗಿ 'ಬ್ರಾಂಡ್ ಪಡುಬಿದ್ರಿ' ಮೂಲಕ ಜನತೆಗಾಗಿ ತೆರೆದುಕೊಳ್ಳಲಿರುವ ಪಡುಬಿದ್ರಿ ಬೀಚ್ ಕಾರ್ನಿವಲ್ - 2024ನ ಉದ್ಘಾಟನೆಯನ್ನು ರಾಜ್ಯ ಮೀನುಗಾರಿಕಾ, ಬಂದರು ಸಚಿವ ಮಂಕಾಳ ವೈದ್ಯ ಅವರು ನ.23ರಂದು ಸಂಜೆ 6 ಗಂಟೆಗೆ ನೆರವೇರಿಸಲಿರುವುದಾಗಿ ಪಡುಬಿದ್ರಿ ಜೇಸಿಐ ಅಧ್ಯಕ್ಷ ಸಂಜೀತ್ ಎರ್ಮಾಳ್ ಅವರು ತಿಳಿಸಿದರು. ಅವರು, ಕಾಪು ಪ್ರೆಸ್ ಕ್ಲಬ್‌ನಲ್ಲಿ ಗುರುವಾರ ನಡೆದ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದರು.

ನ. 23ರಂದು ಬೆಳಿಗ್ಗೆ ಸ್ವಿಮ್ಮಿಂಗ್ ಫೆಡರೇಶನ್ ಆಫ್ ಇಂಡಿಯಾ ಸಂಯೋಜನೆಯಲ್ಲಿ ಬ್ಲೂ ಫ್ಲ್ಯಾಗ್ ಬೀಚ್‌ನಲ್ಲಿ 2, 3 ಹಾಗೂ 5 ಕಿಮೀಗಳ ರಾಷ್ಟ್ರೀಯ ಜೂನಿಯರ್, ಸೀನಿಯರ್ ಓಪನ್ ವಾಟರ್ ಸೀ ಸ್ವಿಮ್ಮಿಂಗ್ ಸ್ಪರ್ಧೆಗಳು ನಡೆಯಲಿವೆ. ನ. 24ರಂದು ಬೆಳಿಗ್ಗೆ ಉಡುಪಿ ರನ್ನಸ್೯ ಕ್ಲಬ್ ಸಹಭಾಗಿತ್ವದಲ್ಲಿ ಮುಕ್ತ ಹಾಗೂ ವಿಶೇಷ ಬರಿಗಾಲಲ್ಲಿ ಸಮುದ್ರ ತೀರದ ಮ್ಯಾರಾಥಾನ್ ಓಟವನ್ನು ಸಂಘಟಿಸಲಾಗಿದೆ. ಇವುಗಳಲ್ಲದೇ ಬೀಚ್ ಕಬಡ್ಡಿ, ಗಾಳ ಹಾಕಿ ಹಾಗೂ ಸಾಂಪ್ರದಾಯಿಕ ಮೀನು ಹಿಡಿಯುವ ಸ್ಪರ್ಧೆ, ಅಮ್ಯೂಸ್‌ಮೆಂಟ್ ಗೇಮ್ಸ್, ಸೀ ವಾಟರ್ ಸರ್ಫಿಂಗ್ ಮುಂತಾದ ಸಾಹಸೀ ಕ್ರೀಡೆಗಳನ್ನೂ ಆಯೋಜಿಸಲಾಗಿದೆ. ಅಂದು ಸಂಜೆ ಸ್ಥಳೀಯ ಪ್ರತಿಭೆಗಳ ಅನಾವರಣದೊಂದಿಗೆ ಆರಂಭಗೊಳ್ಳುವ ಸಭಾವೇದಿಕೆಯಲ್ಲಿ ಸಂಜೆ 5ಗಂಟೆಗೆ ಪಡುಬಿದ್ರಿ ಜೇಸಿಐನ 50ನೇ ಸಂಭ್ರಮಾಚರಣೆಯೂ ನಡೆಯಲಿದೆ. ಜೇಸಿಐ ಇಂಡಿಯಾದ ರವಿಶಂಕರ್ ಸತ್ಯಮೂರ್ತಿ ಸಹಿತ ವಿವಿಧ ಗಣ್ಯರು ಉಪಸ್ಥಿತರಿರುವರು ಎಂದೂ ಅವರು ತಿಳಿಸಿದರು.

ನ. 23ರಂದು ಸಂಜೆ 7ಗಂಟೆಗೆ ಮಂಗಳೂರಿನ ರಿಫ್ಯೂಶನ್ ಬ್ಯಾಂಡ್ ಮೂಲಕ ಸಂಗೀತ ಪ್ರಸ್ತುತಿ ಇರಲಿದೆ. ನ.24ರಂದು ಸಂಜೆ 7ಗಂಟೆಗೆ ಮೂಡುಬಿದಿರೆಯ ಆಳ್ವಾಸ್ ಫೌಂಡೇಶನ್‌ನ ಸುಮಾರು 500 ವಿದ್ಯಾರ್ಥಿಗಳು ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಡಲಿರುವುದಾಗಿ ಸುದ್ದಿಗೋಷ್ಟಿಯಲ್ಲಿ ತಿಳಿಸಲಾಯಿತು.

ಸಂಜೀತ್ ಅವರೊಂದಿಗೆ ಜೇಸಿಐ ಪೂರ್ವ ವಲಯಾಧ್ಯಕ್ಷ ಉದಯಕುಮಾರ್ ಶೆಟ್ಟಿ ಇನ್ನ, ಪೂರ್ವಾಧ್ಯಕ್ಷರುಗಳಾದ ಶ್ರೀನಿವಾಸ ಶರ್ಮ, ಜಿತೇಂದ್ರ ಫುರ್ಟಾಡೋ, ರಮೇಶ್ ಯು., ವಿವೇಕ್ ಬಿ. ಎಸ್. ಉಪಸ್ಥಿತರಿದ್ದರು.