ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕಾಪು : ಪರಿಸರ ಮಾಲಿನ್ಯ ಉಂಟು ಮಾಡುತ್ತಿದ್ದ ಫ್ಯಾಕ್ಟರಿಗೆ ಬೀಗ

Posted On: 04-12-2024 05:16PM

ಕಾಪು : ಪರಿಸರ ಮಾಲಿನ್ಯ ತಡೆಗಟ್ಟಲು ಕೈಗೊಳ್ಳಬೇಕಾದ ಯಾವುದೇ ಕ್ರಮಗಳನ್ನು ಕೈಗೊಳ್ಳದೆ ಪರಿಸರದಲ್ಲಿ ದುರ್ವಾಸನೆ ಬೀರುತ್ತಿದ್ದ ಕಾಪು ತಾಲ್ಲೂಕಿನ ಪಡು ಗ್ರಾಮದ ತವಕ್ಕಲ್ ಫಿಷ್ ಫ್ಯಾಕ್ಟರಿಯನ್ನು ಕಾಪು ತಹಶಿಲ್ದಾರ್ ನೇತೃತ್ವದ ಅಧಿಕಾರಿಗಳ ತಂಡ ಬುಧವಾರ ಮುಟ್ಟುಗೋಲು ಹಾಕಿದೆ.

ಈ ಕಾರ್ಖಾನೆಯನ್ನು ಪರಿಶೀಲಿಸಿ ಅಲ್ಲಿಯ ಅವ್ಯವಸ್ಥೆಯನ್ನು ಮನಗಂಡ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಇದು ಪರಿಸರಕ್ಕೆ ಮಾರಕವಾದ ತ್ಯಾಜ್ಯಗಳನ್ನು ಹೊರಕ್ಕೆ ಬಿಡುತ್ತಿದೆ ಆದ್ದರಿಂದ ತಕ್ಷಣವೇ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಬಹಳ ವರ್ಷಗಳ ಹಿಂದೆಯೇ ಪರಿಸರಮಾಲಿನ್ಯ ಇಲಾಖೆ ಶಿಫಾರಸು ಮಾಡಿತ್ತು. ಉಡುಪಿ ಜಿಲ್ಲಾಧಿಕಾರಿಯವರು ಈ ವರದಿಯ ಆಧಾರದ ಮೇಲೆ ಈ ತವಕ್ಕಲ್ ಫಿಷ್ ಫ್ಯಾಕ್ಟರಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ತಹಶಿಲ್ದಾರ್ ಗೆ ಆದೇಶ ಮಾಡಿದ್ದರು.ಅದರಂತೆ ಕಾಪು ತಹಶಿಲ್ದಾರ್ ಕ್ರಮ ಕೈಗೊಂಡಿದ್ದಾರೆ.

ತಹಶಿಲ್ದಾರ್ ಡಾ.ಪ್ರತಿಭಾ ಆರ್ ಮಾತನಾಡಿ, ನಮ್ಮ ತಾಲ್ಲೂಕಿನಲ್ಲಿ ಯಾವುದೇ ಫ್ಯಾಕ್ಟರಿ ಪರಿಸರ ಮಾಲಿನ್ಯ ಉಂಟು ಮಾಡಿಕೊಂಡು ಕಾರ್ಯ ನಿರ್ವಹಿಸುತ್ತಿದ್ದರೆ ಅದನ್ನು ತಕ್ಷಣವೇ ಮುಚ್ಚಲು ಶಿಫಾರಸು ಮಾಡಲಾಗುವುದು. ಉದ್ಯಮ-ಅಭಿವೃದ್ದಿ ಎಷ್ಟು ಮುಖ್ಯವೋ ಪರಿಸರ ರಕ್ಷಣೆಯೂ ಅಷ್ಟೇ ಮುಖ್ಯ. ಕಾರ್ಖಾನೆಗಳವರು ಸೂಕ್ತ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯೊಂದಿಗೆ ಉದ್ಯಮ ನಡೆಸಿದರೆ ನಮ್ಮ ಅಭ್ಯಂತರವೇನಿಲ್ಲ. ತಾಲ್ಲೂಕಿನ ನೆಲ-ಜಲದ ರಕ್ಷಣೆ ನನ್ನ ಆದ್ಯತೆ. ಇವತ್ತಿನ ಈ ಸೀಝ್ ಉಳಿದ ಫ್ಯಾಕ್ಟರಿ ಮಾಲೀಕರುಗಳಿಗೆ ಎಚ್ಚರಿಕೆಯ ಗಂಟೆಯಾಗಬೇಕು ಎಂದು ಹೇಳಿದರು.

ಕಾಪು ತಹಶಿಲ್ದಾರ್ ರವರ ಈ ದಿಟ್ಟ ನಡೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿರುವ ಜೊತೆಗೆ ಕಾಪು ತಾಲ್ಲೂಕಿನಲ್ಲಿ ಸರಕಾರದ ಯಾವುದೇ ಮಾನದಂಡಗಳನ್ನು ಪಾಲಿಸದ ಹಲವಾರು ಕಾರ್ಖಾನೆಗಳು ಕಾರ್ಯ ನಿರ್ವಹಿಸುತ್ತಿದ್ದು ಅವುಗಳ ವಿರುದ್ಧ ಇಂತಹುದೇ ಕ್ರಮ ಜರಗಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿ ಕೀರ್ತಿಕುಮಾರ್ ರವರಿಗೆ ಸೀಝ್ ಮಾಡಿದ ಫ್ಯಾಕ್ಟರಿಯ ಬೀಗದ ಕೀ ಹಸ್ತಾಂತರಿಸಲಾಯಿತು. ರೆವಿನ್ಯೂ ಇನ್ಸ್‌ಪೆಕ್ಟರ್ ಇಜ್ಜಾರ್ ಸಾಬಿರ್, ಗ್ರಾಮಾಡಳಿತಾಧಿಕಾರಿ ವೆಂಕಟೇಶ್, ಪೋಲೀಸ್ ಇನ್ಸ್ಪೆಕ್ಟರ್, ಮೆಸ್ಕಾಂ ಎಸ್ ಒ ಅಜಯ್, ಪುರಸಭಾ ಅಧಿಕಾರಿ ಉಪಸ್ಥಿತರಿದ್ದರು.