ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಎರ್ಮಾಳು ಶ್ರೀನಿಧಿ ಮಹಿಳಾ ಮಂಡಳಿಯ 40ನೇ ವಾರ್ಷಿಕೋತ್ಸವ ; ಸನ್ಮಾನ ; ಧನಸಹಾಯ ; ಸಾಂಸ್ಕೃತಿಕ ಕಾರ್ಯಕ್ರಮಗಳು

Posted On: 20-12-2024 06:12PM

ಪಡುಬಿದ್ರಿ : ಎರ್ಮಾಳು ಶ್ರೀನಿಧಿ ಮಹಿಳಾ ಮಂಡಳಿ (ರಿ.) ಇದರ 40ನೇ ವಾರ್ಷಿಕೋತ್ಸವವು ಎರ್ಮಾಳು ಶ್ರೀ ಜನಾರ್ದನ ದೇವಸ್ಥಾನದ ಆವರಣದಲ್ಲಿ ಗೌರವಾಧ್ಯಕ್ಷೆ ಶೀಲಾ ಕೆ. ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿದ್ದ ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್ ಮಾತನಾಡಿ, ಸಾಮಾಜಿಕ ಚಟುವಟಿಕೆಯ ಮೂಲಕ ಮಹಿಳೆಯರಿಗೆ ಸಾಕಷ್ಟು ಉತ್ತೇಜನವನ್ನು ನೀಡಿದ ಸಂಸ್ಥೆಯು ಹಲವಾರು ಕಲಾವಿದರನ್ನು ಹುಟ್ಟು ಹಾಕಿದೆ. ಇದೀಗ 40ರ ಸಂಭ್ರಮದಲ್ಲಿ ಸಮಾಜದ ಅಶಕ್ತರಿಗೆ, ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಜನಮಾನಸಕ್ಕೆ ಮಾದರಿಯಾಗಿದೆ ಎಂದರು.

ದೇವಳದ ಆಡಳಿತ ಮೊಕ್ತೇಸರ ಎರ್ಮಾಳು ಬೀಡು ಅಶೋಕರಾಜ್ ಮಾತನಾಡಿ, ಕಳೆದ ವರ್ಷಗಳಿಂದ ನಿರಂತರ ಚಟುವಟಿಕೆಯುಕ್ತವಾಗಿರುವ ಎರ್ಮಾಳು ಶ್ರೀನಿಧಿ ಮಹಿಳಾ ಮಂಡಲವು ಈ ಭಾಗದಲ್ಲಿ ಸಮಾಜ ಸೇವೆ, ಕಲಾ ಸೇವೆ ಸಹಿತ ಜನಜನಿತರಾಗಿದ್ದಾರೆ. ಇಂತಹ ಹತ್ತು ಹಲವು ಸಮಾಜಮುಖಿ ಸೇವೆಯ ಮೂಲಕ ಮನೆ ಮಾತಾಗಿರುವ ಮಹಿಳಾ ಮಂಡಲವು ಸಂಭ್ರಮದ ಶತಮಾನೋತ್ಸವ ಕಾಣುವಂತಾಗಲಿ ಎಂದು ಶುಭವನ್ನು ಹಾರೈಸಿದರು. ಬೆಳಪು ಗ್ರಾ.ಪಂ. ಅಧ್ಯಕ್ಷ ಡಾ.ದೇವಿಪ್ರಸಾದ್ ಶೆಟ್ಟಿ ಮಾತನಾಡಿ, ಮಹಿಳೆಯರು ಸ್ವಾವಲಂಬಿಯಾಗುವಲ್ಲಿ ಹೆಚ್ಚು ಒತ್ತು ನೀಡಿ ಸ್ವಸಹಾಯ ಸಂಘ ರಚಿಸಿ ಮಹಿಳೆಯರ ಸಬಲೀಕರಣಕ್ಕೆ ಮುಂದಾಗಿದ್ದು ಹರ್ಷದಾಯಕ ಎಂದರು.

ಶಿರ್ವ ಮಹಿಳಾ ಮಂಡಲ ಅಧ್ಯಕ್ಷೆ, ಅಸೋಸಿಯೇಟ್ ಪ್ರೊಫೆಸರ್ ಡಾ|ಸ್ಪೂರ್ತಿ ಶೆಟ್ಟಿ ಮತ್ತು ಅಥ್ಲೆಟ್ ಕಟಪಾಡಿ ಸುಲತಾ ಕಾಮತ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಎರ್ಮಾಳು ಶ್ರೀನಿಧಿ ಮಹಿಳಾ ಮಂಡಲದ ಮಾಜಿ ಅಧ್ಯಕ್ಷೆಯರಿಗೆ ಗೌರವಾರ್ಪಣೆ ಹಾಗೂ ಸುಮಾರು ರೂ. 1ಲಕ್ಷ ಮೊತ್ತದಲ್ಲಿ ಬಡ ಅಶಕ್ತರನ್ನು ಗುರುತಿಸಿ ಧನ ಸಹಾಯ, ಪರಿಸರದ ಕನ್ನಡ ಮಾಧ್ಯಮದ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸಂಘದ ಸದಸ್ಯೆಯರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು.

ಅದಮಾರು ಪೂರ್ಣಪ್ರಜ್ಞ ಶಾಲೆಯ ಮುಖ್ಯ ಶಿಕ್ಷಕ ಶ್ರೀಕಾಂತ್ ರಾವ್ ವೇದಿಕೆಯಲ್ಲಿದ್ದರು. ಎರ್ಮಾಳು ಶ್ರೀನಿಧಿ ಮಹಿಳಾ ಮಂಡಳಿಯ ಅಧ್ಯಕ್ಷೆ ರೇಖಾ ಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ಅಮಣಿ ಕುಂದರ್ ವಾರ್ಷಿಕ ವರದಿ ನೀಡಿದರು. ಮಾಜಿ ಅಧ್ಯಕ್ಷೆ ಜ್ಯೋತಿ ಎಸ್. ಶೆಟ್ಟಿ ನಿರೂಪಿಸಿದರು. ಜತೆ ಕಾರ್ಯದರ್ಶಿ ಅಮೃತಕಲಾ ಶೆಟ್ಟ ವಂದಿಸಿದರು. ಬಳಿಕ ಸದಸ್ಯೆಯರಿಂದ ನೃತ್ಯ ವೈವಿಧ್ಯ, ರಂಗತರಂಗ ಕಾಪು ತಂಡದಿಂದ ತುಳುನಾಟಕ ಪ್ರದರ್ಶನಗೊಂಡಿತು.