ಡಿ.29 : ಪಡುಬಿದ್ರಿಯಲ್ಲಿ ಅಂತರ್ ರಾಜ್ಯ ಬಂಟ ಕ್ರೀಡೋತ್ಸವ - ಎಂ ಆರ್ ಜಿ ಟ್ರೋಫಿ 2024
Posted On:
24-12-2024 01:44PM
ಪಡುಬಿದ್ರಿ : ಇಲ್ಲಿನ ಬಂಟರ ಸಂಘದ ವತಿಯಿಂದ ಡಿ.29 ರಂದು ಪಡುಬಿದ್ರಿ ಬಂಟರ ಭವನದ ಸಮೀಪ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿರುವ ದಿ. ಮಹಾಬಲ ಶೆಟ್ಟಿ ಕ್ರೀಡಾಂಗಣದಲ್ಲಿ ಅಂತರ್ ರಾಜ್ಯ ಬಂಟ ಕ್ರೀಡೋತ್ಸವ ಎಂ ಆರ್ ಜಿ ಟ್ರೋಫಿ 2024 ನಡೆಯಲಿದೆ ಎಂದು ಪಡುಬಿದ್ರಿ ಬಂಟರ ಸಂಘದ ಅಧ್ಯಕ್ಷರಾದ ಡಾ. ಐಕಳ ಭಾವ ದೇವಿ ಪ್ರಸಾದ್ ಶೆಟ್ಟಿ ಬೆಳಪು ಇವರು ಮಂಗಳವಾರ ಪಡುಬಿದ್ರಿಯಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ದೇಶಾದ್ಯಂತ ನೆಲೆಸಿರುವ ಬಂಟ ಸಮುದಾಯವನ್ನು ಒಗ್ಗೂಡಿಸಿ ಯುವ ಶಕ್ತಿಯ ಕ್ರೀಡಾ ಸ್ಫೂರ್ತಿಗೆ ಪ್ರೇರಣೆ ನೀಡಿ ಪ್ರೋತ್ಸಾಹಿಸುವ ನಿಟ್ಟಿನಿಂದ ಹಲವಾರು ವಿಶೇಷತೆಗಳ ವೈಭವದಿಂದ ನಡೆಯಲಿರುವ ಈ ಕ್ರೀಡಾಕೂಟದಲ್ಲಿ ಆಕರ್ಷಕ ಪಥಸಂಚಲನ, ವಾಲಿಬಾಲ್, ತ್ರೋಬಾಲ್, ಕಬ್ಬಡಿ, ಹಗ್ಗ ಜಗ್ಗಾಟ ಪಂದ್ಯಾಟಗಳು ನಡೆಯಲಿದೆ. ವಿಜೇತರಿಗೆ ಆಕರ್ಷಕ ಟ್ರೋಫಿಯೊಂದಿಗೆ ನಗದು ಬಹುಮಾನ ನೀಡಲಾಗುವುದು.
ಉದ್ಯಮಿ ಡಾ.ಕೆ ಪ್ರಕಾಶ್ ಶೆಟ್ಟಿಯವರಿಂದ ಉದ್ಘಾಟನೆಗೊಳ್ಳಲಿರುವ ಈ ಕ್ರೀಡಾ ಕೂಟದಲ್ಲಿ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಅಧ್ಯಕ್ಷರಾದ ಸಹಕಾರ ರತ್ನ ಡಾ. ಎಂ. ಎನ್ ರಾಜೇಂದ್ರ ಕುಮಾರ್ ರಿಂದ ದೀಪ ಪ್ರಜ್ವಲನೆ,
ಜಾಗತಿಕ ಬಂಟರ ಸಂಘದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರು ಬಂಟ ಕ್ರೀಡಾಕೂಟದ ಧ್ವಜಾರೋಹಣ, ಕರ್ನಾಟಕ ಸರಕಾರದ ವಿಧಾನ ಸಭಾಧ್ಯಕ್ಷರಾದ ಯು.ಟಿ.ಖಾದರ್ ಪಥ ಸಂಚಲನದ ಗೌರವ ರಕ್ಷೆ ಸ್ವೀಕರಿಸಲಿದ್ದಾರೆ.
ಪುಣೆ ಉದ್ಯಮಿಯಾದ ಸೀತಾರಾಮ ಶೆಟ್ಟಿ ಪುಚೊಟ್ಟು ಬೀಡು ಇವರು ಕ್ರೀಡಾಜ್ಯೋತಿ ಮೆರವಣಿಗೆಗೆ ಚಾಲನೆ ನೀಡಲಿದ್ದು, ಪಡುಬಿದ್ರಿ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಿಂದ ಬೆಳಿಗ್ಗೆ 9 ಗಂಟೆಗೆ ಅತ್ಯಾಕರ್ಷಕ ವಾಹನ ಮೆರವಣಿಗೆಯೊಂದಿಗೆ ಕ್ರೀಡಾಜ್ಯೋತಿಯು ಪಡುಬಿದ್ರಿ ಪೇಟೆಯ ಮೂಲಕ ಕ್ರೀಡಾಂಗಣಕ್ಕೆ ಸಾಗಿ ಬರಲಿದೆ.
ಯು.ಪಿ.ಸಿ.ಎಲ್ ಅಧ್ಯಕ್ಷರಾದ ಕಿಶೋರ್ ಆಳ್ವರು ಕ್ರೀಡಾ ಸ್ಪರ್ಧೆಗಳಿಗೆ ಚಾಲನೆ ನೀಡಲಿರುವರು.
ವಿ.ಕೆ. ಗ್ರೂಪ್ಸ್ ಮುಂಬೈ ಯ ಸಿ.ಎಂ.ಡಿ ಕೆ. ಎಂ. ಶೆಟ್ಟಿಯವರು ವಾಲಿಬಾಲ್, ಬಂಟರ ಸಂಘ ಮುಂಬೈಯ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿಯವರು ಹಗ್ಗ ಜಗ್ಗಾಟ, ಪುಣೆ ಉದ್ಯಮಿ ಚಂದ್ರಹಾಸ ಶೆಟ್ಟಿ ಪುಚೊಟ್ಟು ಬೀಡು ಕಬ್ಬಡ್ಡಿ, ಬಂಟರ ಸಂಘ ಮುಂಬೈ ಮಹಿಳಾ ವಿಭಾಗದ ಮಾಜಿ ಅಧ್ಯಕ್ಷೆ ಉಮಾ ಕೃಷ್ಣ ಶೆಟ್ಟಿಯವರು ತ್ರೋಬಾಲ್ ಕ್ರೀಡಾಂಗಣದ ಉದ್ಘಾಟನೆ ಮಾಡಲಿರುವರು.
ಅಭಿನಂದನೆ/ಪ್ರಶಸ್ತಿ ಪ್ರದಾನ/ಕ್ರೀಡಾ ಪ್ರೋತ್ಸಾಹ ಧನ ವಿತರಣೆ : 2024 ನೇ ಸಾಲಿನ ಸುವರ್ಣ ಕರ್ನಾಟಕ ಮಹೋತ್ಸವ ಪ್ರಶಸ್ತಿ ಪುರಸ್ಕೃತರಾದ ಹೇರಂಭ ಇಂಡಸ್ಟ್ರೀಸ್ ಮುಂಬೈನ ಸಿ.ಎಂ.ಡಿ ಕನ್ಯಾನ ಸದಾಶಿವ ಶೆಟ್ಟಿಯವರಿಗೆ ಬಂಟ ಸಾಧಕ ಪ್ರಶಸ್ತಿ ಪುರಸ್ಕಾರ, ಡಾ. ಕೆ.ಪ್ರಕಾಶ್ ಶೆಟ್ಟಿ, ಸಹಕಾರ ರತ್ನ ಡಾ. ಎಮ್.ಎನ್.ರಾಜೇಂದ್ರ ಕುಮಾರ್, ಕ್ರೀಡಾಂಗಣದ ಸ್ಥಳದಾನಿ ಮುಂಬೈ ಉದ್ಯಮಿ ಕರುಣಾಕರ ಪೂಜಾರಿಯವರಿಗೆ ಗೌರವಾಭಿನಂದನೆ. ಅಂತರ್ ರಾಷ್ಟ್ರೀಯ ಕ್ರೀಡಾಪಟು, ಕಂಬಳ ಸಮಿತಿಯ ಮಾಜಿ ಅಧ್ಯಕ್ಷ ರೋಹಿತ್ ಹೆಗ್ಡೆ ಎರ್ಮಾಳು, ಕಂಬಳ ಕ್ಷೇತ್ರದ ಎರ್ಮಾಳು ಪುಚೊಟ್ಟು ಬೀಡು ಬಾಲಚಂದ್ರ ಲೋಕಯ್ಯ ಶೆಟ್ಟಿ, ರಾಷ್ಟ್ರೀಯ ಈಜುಪಟು ನೈಶಾ ಶೆಟ್ಟಿ ಇವರಿಗೆ ಬಂಟ ಕ್ರೀಡಾರತ್ನ ಪ್ರಶಸ್ತಿ ಪ್ರದಾನ, ಬಂಟ ಸಮಾಜದ ಉದಯೋನ್ಮುಖ ಕ್ರೀಡಾಳುಗಳಿಗೆ ಪ್ರೋತ್ಸಾಹ ಧನ ವಿತರಣೆ ನಡೆಯಲಿದೆ.
ಸಮಾರೋಪ ಸಮಾರಂಭದಲ್ಲಿ ಸಂಜೆ 6.30 ರಿಂದ ಕ್ರೀಡಾಕೂಟದ ಪ್ರಾಯೋಜಕರಾದ ಡಾ.ಕೆ.ಪ್ರಕಾಶ್ ಶೆಟ್ಟಿಯವರಿಂದ ಬಹುಮಾನ ವಿತರಣೆ ನಡೆಯಲಿದೆ. ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಡಾ. ಎಂ ಮೋಹನ್ ಆಳ್ವ ಅವರಿಂದ ಸಮಾರೋಪ ಭಾಷಣ ನಡೆಯಲಿದೆ.
ವಿಶೇಷ ಆಹ್ವಾನಿತರಾಗಿ ನಟ ಗೋಲ್ಡನ್ ಸ್ಟಾರ್ ಗಣೇಶ್, ಕನ್ನಡ ತುಳು ಚಲನಚಿತ್ರದ ಕಲಾವಿದರು ಮತ್ತು ಟೀಂ ಇಂಡಿಯಾ ಆಟಗಾರ ಕೆ.ಎಲ್.ರಾಹುಲ್, ಉಡುಪಿ, ದ.ಕ.ದ ಶಾಸಕರುಗಳು, ಲೋಕಸಭಾ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಮತ್ತು ರಾಜ್ಯ ಅಂತರ್ ರಾಜ್ಯ ಬಂಟರ ಸಂಘಗಳ ಅಧ್ಯಕ್ಷರುಗಳು ಹಾಗೂ ಗಣ್ಯಾತಿ ಗಣ್ಯರು ಉಪಸ್ಥಿತರಿರುವರು.
ಪಡುಬಿದ್ರಿ ಬಂಟರ ಸಂಘದ ಸದಸ್ಯರಿಂದ ನೃತ್ಯ ವೈವಿಧ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿವೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಂಟ್ಸ್ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷರಾದ ಎರ್ಮಾಳು ಶಶಿಧರ್ ಶೆಟ್ಟಿ, ಸಿರಿಮುಡಿ ದತ್ತಿ ನಿಧಿ ಸ್ಥಾಪಕ ಅಧ್ಯಕ್ಷ ಭಾಸ್ಕರ್ ಶೆಟ್ಟಿ, ಬಂಟರ ಸಂಘದ ಮಾಜಿ ಅಧ್ಯಕ್ಷ ನವೀನ್ ಚಂದ್ರ ಜೆ ಶೆಟ್ಟಿ, ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ ಪಡುಹಿತ್ಲು, ಕೋಶಾಧಿಕಾರಿ ರವಿ ಶೆಟ್ಟಿ ಗುಂಡ್ಲಾಡಿ, ಕ್ರೀಡಾ ಸಂಚಾಲಕ ವಿನಯ ಶೆಟ್ಟಿ ಎರ್ಮಾಳು, ಮಹಿಳಾ ವಿಭಾಗದ ಅಧ್ಯಕ್ಷ ಜ್ಯೋತಿ ಶೆಟ್ಟಿ, ಯುವ ವಿಭಾಗದ ಅಧ್ಯಕ್ಷ ನವೀನ್ ಎನ್ ಶೆಟ್ಟಿ, ಕಾಪು ತಾಲೂಕು ಕ್ರೀಡಾಧಿಕಾರಿ ರಿತೇಶ್ ಶೆಟ್ಟಿ, ಸಾಂಸ್ಕೃತಿಕ ಸಂಚಾಲಕ ಜಯ ಶೆಟ್ಟಿ ಪದ್ರ, ಕ್ರೀಡಾ ಸಹ ಸಂಚಾಲಕಿ ಶರ್ಮಿಳಾ ಶೆಟ್ಟಿ, ಕಾರ್ಯಕ್ರಮ ಸಂಯೋಜಕ ಸತೀಶ್ ಶೆಟ್ಟಿ ಗುಡ್ಡೆಚ್ಚಿ ಉಪಸ್ಥಿತರಿದ್ದರು.