ಡಿ.28 ಮತ್ತು 29 : ಪಡುಬಿದ್ರಿಯಲ್ಲಿ ಕೃಷಿ ಮೇಳ
Posted On:
24-12-2024 02:21PM
ಪಡುಬಿದ್ರಿ : ಉದಯಾದ್ರಿ ಬಾಲಗಣಪತಿ ಪ್ರಸನ್ನ ಪಾರ್ವತಿ ದೇವಸ್ಥಾನ ಹಾಗೂ ನಿತ್ಯಾನಂದ ಆಗ್ರೋ ಲಿಮಿಟೆಡ್ ಕೊಲ್ನಾಡ್,ಮುಲ್ಕಿ ಇವರ ಜಂಟಿ ಆಶ್ರಯದಲ್ಲಿ ಡಿ. 28 ಹಾಗೂ 29ರಂದು ದ್ವಿತೀಯ ಬಾರಿಗೆ ಪಡುಬಿದ್ರಿ ಉದಯಾದ್ರಿ ಬಾಲಗಣಪತಿ ಪ್ರಸನ್ನ ದೇವಸ್ಥಾನದ ಆವರಣದಲ್ಲಿ ಬೆಳಿಗ್ಗೆ ಗಂಟೆ 9ರಿಂದ ರಾತ್ರಿ 9ರವರೆಗೆ ಜರಗಲಿದೆ ಎಂದು ಸಂಘಟಕರಾದ ರಕ್ಷಾ ಇವರು ಪಡುಬಿದ್ರಿ ಉದಯಾದ್ರಿ ಬಾಲಗಣಪತಿ ಪ್ರಸನ್ನ ದೇವಸ್ಥಾನದ ಆವರಣದಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಡಿಸೆಂಬರ್ 28ರಂದು ಕೃಷಿ ಮೇಳವನ್ನು ಬಂಟರ ಸಂಘದ ಮಾಜಿ ಅಧ್ಯಕ್ಷರಾದ ನವೀನ್ ಚಂದ್ರ ಜೆ. ಶೆಟ್ಟಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶಶಿಕಾಂತ ಪಡುಬಿದ್ರಿ ಉದ್ಘಾಟಿಸಲಿದ್ದಾರೆ. ಮಳಿಗೆಗಳ ಉದ್ಘಾಟನೆಯನ್ನು ಪಡುಬಿದ್ರಿ ಉದ್ಯಮಿ ಸಂತೋಷ್ ಶೆಟ್ಟಿ ನಡೆಸಲಿದ್ದಾರೆ.
ಸಾವಯವ ಕೃಷಿಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕೃಷಿ ಮೇಳವನ್ನು ಆಯೋಜಿಸಲಾಗಿದ್ದು, ಕೃಷಿ ಮಾಹಿತಿ, ಸಾವಯವ ಗೊಬ್ಬರಗಳು, ವಿವಿಧ ತರಕಾರಿ, ಹಣ್ಣಿನ ಗಿಡಗಳ ಮಾರಾಟ, ಕೃಷಿ ಯಂತ್ರೋಪಕರಣ, ನೀರಾವರಿ ಬಗ್ಗೆ ಮಾಹಿತಿ, ಮತ್ಸ್ಯ ಮೇಳ, ಆಹಾರ ಮೇಳಗಳು ಇರಲಿವೆ.
ಈಗಾಗಲೇ 70 ಮಳಿಗೆಗಳು ನೋಂದಣಿಯಾಗಿದ್ದು, ಇದರಲ್ಲಿ 15 ಕೃಷಿ ಮಳಿಗೆಗಳಾಗಿದೆ ಎಂದು ತಿಳಿಸಿದರು.
ಈ ಸಂದರ್ಭ ನಿತ್ಯಾನಂದ ಆಗ್ರೋ ಲಿಮಿಟೆಡ್ ಪ್ರಬಂಧಕ ನವೀನ್ ಚಂದ್ರ ಪ್ರಭು, ಉದಯಾದ್ರಿ ಬಾಲ ಗಣಪತಿ ಪ್ರಸನ್ನ ಪಾರ್ವತಿ ದೇವಸ್ಥಾನದ ಟ್ರಸ್ಟಿಗಳಾದ ಜಗದಾಭಿರಾಮ ಸ್ವಾಮಿ, ನಯನಾಭಿರಾಮ, ಪಿ.ಡಿ. ಶೇಖರ ರಾವ್, ದಿನಕರ ರಾವ್, ಚರಣ್ ರಾಜ್ ಉಪಸ್ಥಿತರಿದ್ದರು.