ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಭಾರತ ತಂಡಕ್ಕೆ ಕಾಪು ಮೂಲದ ತನುಷ್ ಕೋಟ್ಯಾನ್ ಆಯ್ಕೆ

Posted On: 24-12-2024 03:51PM

ಕಾಪು : ಕಾಪು ಮೂಲದ ತನುಷ್ ಕೋಟ್ಯಾನ್ ಭಾರತ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಮುಂಬಯಿಯಲ್ಲಿ ಹುಟ್ಟಿ ಬೆಳೆದ ತನುಷ್ ಕ್ರಿಕೆಟ್ ಆಟದಲ್ಲಿ ಬಾಲ್ಯದಿಂದಲೇ ಆಲ್‌ ರೌಂಡರ್ ಆಟದೊಂದಿಗೆ ಗಮನ ಸೆಳೆದಿದ್ದು, ಮುಂಬಯಿ ಕಿರಿಯರ ತಂಡದಲ್ಲಿ ಖಾಯಂ ಸ್ಥಾನ ಪಡದುಕೊಂಡಿದ್ದಾರೆ. ಪ್ರಸ್ತುತ ನಡೆಯುತ್ತಿರುವ ವಿಜಯ ಹಜಾರೆ ಟೂರ್ನಿಯಲ್ಲೂ ಮುಂಬಯಿ ತಂಡದ ಭಾಗವಾಗಿದ್ದಾರೆ. ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಕೊನೆಯ ಎರಡು ಪಂದ್ಯಗಳಿಗೆ ಆಯ್ಕೆ ಆಗಿದ್ದಾರೆ. ಈ ಹಿಂದೆ ಐಪಿಎಲ್ ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದ ಮುಂಬಯಿ ಆಟಗಾರ ಇದೀಗ ರವಿಚಂದ್ರನ್ ಅಶ್ವಿನ್ ಅವರ ನಿವೃತ್ತಿಯಿಂದ ತೆರವಾದ ಸ್ಥಾನದಲ್ಲಿ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ.

26 ವಯಸ್ಸಿನ ತನುಷ್‌ ಕೋಟ್ಯಾನ್ ಬಲಗೈ ಸ್ಪಿನ್ನರ್, ಬಲಗೈ ಬ್ಯಾಟ್ಸ್‌ಮನ್. ತನುಷ್‌ ಕೋಟ್ಯಾನ್ ಮುಂಬಯಿ ಪರ ಈವರೆಗೆ 33 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಅವರು 41.21ರ ಸರಾಸರಿಯಲ್ಲಿ 1525 ರನ್ ಗಳಿಸಿದ್ದಾರೆ. ಹಾಗೆಯೇ 25.70 ಸರಾಸರಿಯಲ್ಲಿ 101 ವಿಕೆಟ್‌ಗಳನ್ನು ಪಡೆದು ಮಿಂಚಿದ್ದಾರೆ. ಅವರ ಬ್ಯಾಟ್‌ನಿಂದ 2 ಭರ್ಜರಿ ಶತಕ ಮತ್ತು 13 ಅರ್ಧ ಶತಕಗಳು ಮೂಡಿಬಂದಿವೆ. 2023-24ರಲ್ಲಿ ಮುಂಬಯಿ ತಂಡ ರಣಜಿ ಟ್ರೋಫಿ ಗೆಲ್ಲುವಲ್ಲಿ ತನುಷ್ ಕೋಟ್ಯಾನ್‌ ಪ್ರಮುಖ ಪಾತ್ರವಹಿಸಿದ್ದರು. ಈ ಟೂರ್ನಿಯಲ್ಲಿ 41.83 ಸರಾಸರಿಯಲ್ಲಿ 502 ರನ್ ಗಳಿಸಿದ್ದಲ್ಲದೆ 29 ವಿಕೆಟ್‌ಗಳನ್ನು ಕಬಳಿಸಿ ಮಿಂಚಿದ್ದರು. ಈ ಮೂಲಕ ಪ್ಲೇಯರ್ ಆಫ್ ದಿ ಟೂರ್ನಮೆಂಟ್‌ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು.

ಇರಾನಿ ಕಪ್‌ನಲ್ಲಿ ಭರ್ಜರಿ ಶತಕ ಸಿಡಿಸುವ ಮೂಲಕ 27 ವರ್ಷಗಳ ನಂತರ ಮುಂಬಯಿ ತಂಡ ಪ್ರಶಸ್ತಿ ಗೆಲ್ಲುವಲ್ಲಿಯೂ ಪ್ರಮುಖ ಪಾತ್ರವಹಿಸಿದ್ದರು. ಹಾಗೆಯೇ ದುಲೀಪ್ ಟ್ರೋಫಿಯಲ್ಲಿ ಭಾರತ ಎ ತಂಡದ ಪರ ಕಣಕ್ಕಿಳಿದಿದ್ದ ತನುಷ್ 3 ಪಂದ್ಯಗಳಲ್ಲಿ 10 ವಿಕೆಟ್ ಕಬಳಿಸಿ ಮಿಂಚಿದ್ದರು. ಅದರಂತೆ ಮೆಲ್ಲೋರ್ನ್ ಹಾಗೂ ಸಿಡ್ನಿಯಲ್ಲಿ ನಡೆಯಲಿರುವ ಕೊನೆಯ ಎರಡು ಟೆಸ್ಟ್ ಪಂದ್ಯಗಳಲ್ಲಿ ತನುಷ್‌ ಕೋಟ್ಯಾನ್ ಆಡಲಿದ್ದಾರೆ.