ಪಲಿಮಾರು : ಮುರಿದು ಬೀಳುವಂತಿದ್ದ ಸಂಕ - ವೃದ್ಧರ ಕಷ್ಟಕ್ಕೆ ಸ್ಪಂದಿಸಿದ ಕಾಪು ತಹಶಿಲ್ದಾರ್
Posted On:
28-12-2024 12:39PM
ಪಲಿಮಾರು : ಗಲ್ಲಿ ಗಲ್ಲಿಗೂ ರಸ್ತೆಗಳಿರುವ ಈ ಕಾಲದಲ್ಲಿ ಒಂದೆಡೆ ರಸ್ತೆ ಸಂಪರ್ಕವೂ ಇಲ್ಲ. ಮತ್ತೊಂದೆಡೆ ಹೊಳೆಯ ಮೇಲಿನ ಶಿಥಿಲಗೊಂಡ ಕಾಲು ಸಂಕ ದಾಟಿ ಮನೆ ಸೇರಬೇಕಾದ ವೃದ್ಧ ದಂಪತಿಗಳು ಇಂತಹ ಸ್ಥಿತಿ ಕಂಡು ಬಂದದ್ದು ಪಲಿಮಾರು ಗ್ರಾಮ ಪಂಚಾಯತಿ ವ್ಯಾಪ್ತಿಯ ಅವರಾಲು ಮಟ್ಟುವಿನಲ್ಲಿ. ಇದೀಗ ಸುರಕ್ಷಿತ ಸೇತುವೆ ನಿರ್ಮಿಸಿಕೊಡುವ ಭರವಸೆ ಕಾಪು ತಾಲೂಕು ತಹಶಿಲ್ದಾರ್ ಮೂಲಕ ದೊರಕಿದೆ.
ವೃದ್ಧ ದಂಪತಿಗಳು ಪ್ರತಿದಿನ ಅವರು ತಮ್ಮ ದಿನನಿತ್ಯದ ಕೆಲಸಗಳಿಗೆ ಹೊರಗೆ ಬರಬೇಕೆಂದರೆ ಈ ಶಿಥಿಲ ಕಾಲು ಸಂಕದ ಮೇಲೆಯೇ ಬರಬೇಕು.
ಅಲ್ಲಾಡುತ್ತಾ ಇನ್ನೇನು ಮುರಿದು ಬೀಳುತ್ತದೆಯೇನೋ ಎನ್ನುವಂತಿರುವ ಈ ಮರದ ಸಣ್ಣ ಹಲಗೆಯ ಮೇಲೆಯೇ ವಸಂತಿ (70 )
ಭೋಜ ಸಾಲ್ಯಾನ್ (74) ಅವರು ನಡೆದಾಡಬೇಕಾದ ಪರಿಸ್ಥಿತಿ ಇದೆ.
ದಿನಸಿ ತರಲು, ಹೊರಗಿನ ಜನರನ್ನು ಭೇಟಿ ಮಾಡಲು, ಪೇಟೆ ಬೀದಿಗೆ ಬರಲು, ಇನ್ಯಾವುದೇ ಕೆಲಸಕ್ಕೂ ಈ ಬೀಳುವಂತಿರುವ ಹಲಗೆಯ ಮೇಲೆಯೇ ಜೀವ ಕೈಲಿ ಹಿಡಿದುಕೊಂಡು ಹೋಗಬೇಕಾದ ಪರಿಸ್ಥಿತಿ ಇದೆ.
ತಮ್ಮ ಸಮಸ್ಯೆಗಳ ಬಗ್ಗೆ ಮನೆಯೊಡತಿ ವಸಂತಿರವರು ಮಾತನಾಡಿ, ನಾವು ಪೇಟೆ ಬದಿಗೆ ಹೋಗಬೇಕೆಂದರೆ ಈ ಹೊಳೆ ದಾಟಿಯೇ ಹೋಗಬೇಕು. ಇಲ್ಲಿ ಅತಿ ಹಳೆಯದಾದ ಸಣ್ಣ ಹಲಗೆಯ ರೀತಿಯ ಸಂಕ ಇದೆ. ಇದು ಮುರಿದು ಹೋಗಿದೆ. ನಮಗೆ ವಯಸ್ಸಾಗಿದೆ. ಆರೋಗ್ಯ ಸರಿ ಇಲ್ಲ. ಗಂಡನಿಗೆ ಇದರ ಮೂಲಕ ಆಚೆ ಬದಿಗೆ ಹೋಗೋಕೆ ಆಗೋದೇ ಇಲ್ಲ. ಇದ್ದ ಒಬ್ಬ ಮಗಳನ್ನು ಮದುವೆ ಮಾಡಿ ಆಗಿದೆ. ಗಂಡು ಮಕ್ಕಳಿಲ್ಲ. ಜೀವನವೇ ದುಸ್ತರವಾಗಿದೆ. ದಿನಸಿ ತರೋಕೆ, ಔಷಧಿ ತರೋಕೆ ನಾನೇ ಈ ಮುರುಕಲು ಸಂಕದ ಮೂಲಕ ತಟ್ಟಾಡಿಕೊಂಡು ಹೋಗಬೇಕಾದ ಪರಿಸ್ಥಿತಿ ಇದೆ. ಒಂದು ಸುರಕ್ಷಿತ ಕಾಲು ಸೇತುವೆ ನಿರ್ಮಿಸಿಕೊಟ್ಟರೆ ಬಹಳ ಉಪಕಾರವಾಗುತ್ತದೆ ಎಂದು ಕಣ್ಣೀರಾಗುತ್ತಾರೆ.
ಈ ಸಂದರ್ಭ ತಹಶಿಲ್ದಾರ್ ಪ್ರತಿಭಾ ಆರ್ ಮಾತನಾಡಿ, ವಸಂತಿ, ಭೋಜ ಸಾಲ್ಯಾನ್ ವೃದ್ಧ ದಂಪತಿಗಳ ಪರಿಸ್ಥಿತಿ ನಿಜಕ್ಕೂ ಶೋಚನೀಯವಾಗಿದೆ. ನಾನೂ ಸ್ವತಃ ಈ ಹಲಗೆಯ ಮೇಲೆ ನಡೆದುಬಂದೆ, ನಿಜಕ್ಕೂ ಭಯವಾಯಿತು. ಕಾಲಿಟ್ಟರೆ ಅಲ್ಲಾಡುವ, ಒಂದು ಹೆಜ್ಜೆ ಊರುವಷ್ಟು ಮಾತ್ರವೇ ಅಗಲವಿರುವ ಶಿಥಿಲಗೊಂಡ ಮರದ ಹಲಗೆಯ ಮೇಲೆ ನಡೆದುಕೊಂಡು ಬಂದು ಹೊಳೆ ದಾಟಿ ತಮ್ಮ ದಿನ ನಿತ್ಯದ ಅಗತ್ಯ ಪೂರೈಸಿಕೊಳ್ಳಬೇಕಾದ ಪರಿಸ್ಥಿತಿ ಈ ವೃದ್ಧ ದಂಪತಿಗಳದು. ಮಳೆಗಾಲದಲ್ಲಿ ನೆರೆ ಆವರಿಸುತ್ತದೆ. ಪಕ್ಕದಲ್ಲೇ ಇರುವ ಇನ್ನೊಂದು ಮನೆಯವರು ಈ ಕಷ್ಟ ಸಹಿಸಲಾಗದೆ ಈಗಾಗಲೇ ಸ್ವಂತ ಮನೆ ತೊರೆದು ಬೇರೆ ಕಡೆ ಶಿಫ್ಟ್ ಆಗಿದಾರೆ. ಆದರೆ ಈ ವೃದ್ಧ ದಂಪತಿಗಳಿಗೆ ಇರುವುದೊಂದೇ ಸೂರು ಹೊಳೆಗೆ ಸುಭದ್ರ ಸೇತುವೆ ನಿರ್ಮಿಸಿಕೊಡಲು ಮನವಿ ಮಾಡಿಕೊಂಡಿದ್ದಾರೆ ಓಡಾಡಲು ಸುರಕ್ಷಿತ, ಸುಭದ್ರ ಸೇತುವೆ ನಿರ್ಮಿಸಲು ಅಗತ್ಯ ಕ್ರಮ ಕೈಗೊಳ್ಳುತ್ತೇವೆ. ಸಂಬಂಧಪಟ್ಟ ಇಲಾಖೆ ಮತ್ತು ಯಾರಾದರೂ ದಾನಿಗಳ ಸಹಕಾರದಿಂದ ಇದನ್ನು ಸಾಧ್ಯವಾಗಿಸಲು ಪ್ರಯತ್ನಿಸುತ್ತೇನೆ ಎಂದರು.
ಪಲಿಮಾರು ಗ್ರಾಮ ಪಂಚಾಯತಿಯ ಅಧ್ಯಕ್ಷೆ ಸೌಮ್ಯಲತಾ ಶೆಟ್ಟಿ, ಸದಸ್ಯರಾದ ಜಯಂತಿ, ಸತೀಶ್ ದೇವಾಡಿಗ, ಯೋಗಾನಂದರವರು ಈ ವೃದ್ಧ ದಂಪತಿಗಳಿಗೆ ರಸ್ತೆ ನಿರ್ಮಿಸಿಕೊಡಲು ಸಹಕರಿಸುವುದಾಗಿ ತಿಳಿಸಿರುತ್ತಾರೆ. ಇಸ್ಮಾಯಿಲ್ ಫಲಿಮಾರು ಇಂತಹ ಪರಿಸ್ಥಿತಿಯ ಬಗ್ಗೆ ತಹಶಿಲ್ದಾರ್ ರವರ ಗಮನಕ್ಕೆ ತಂದಿದ್ದರು.