ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕಂಬಳದಲ್ಲಿ ಗಳಿಸಿದ ಚಿನ್ನದ ಪದಕ ಕಾಪು ಮಾರಿಯಮ್ಮನಿಗೆ ಸಮರ್ಪಿಸಿದ ಎರ್ಮಾಳು ಪುಚ್ಚೊಟ್ಟು ಬೀಡು ಬಾಲಚಂದ್ರ ಶೆಟ್ಟಿ

Posted On: 28-12-2024 05:21PM

ಕಾಪು : ತುಳುನಾಡಿನ ಜಾನಪದ ಕ್ರೀಡೆ ಕಂಬಳ, ಇತ್ತೀಚಿನ ದಿನಗಳಲ್ಲಿ ಕಂಬಳ ಬಹಳಷ್ಟು ಜನಮನ್ನಣೆಯನ್ನು ಗಳಿಸುತ್ತಿದ್ದು, ರಾಜ್ಯ ರಾಜಧಾನಿಯಲ್ಲೂ ಕಂಬಳದ ಸುದ್ಧಿ ಬಹಳವಾಗಿ ಕೇಳಿ ಬರುತ್ತಿದೆ, ದೂರದ ಮಹಾರಾಷ್ಟ್ರದ ಪುಣೆಯ ಖ್ಯಾತ ಉದ್ಯಮಿ, ಕಂಬಳ ಪ್ರೇಮಿ ಎರ್ಮಾಳು ಪುಚ್ಚೊಟ್ಟು ಬೀಡು ಬಾಲಚಂದ್ರ ಶೆಟ್ಟಿ ದಂಪತಿ ಸಮೇತರಾಗಿ ಮಕ್ಕಳೊಂದಿಗೆ ಜಿರ್ಣೋದ್ಧಾರಗೊಳ್ಳುತ್ತಿರುವ ಕಾಪುವಿನ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಆಗಮಿಸಿ ಮಾರಿಯಮ್ಮನ ದರುಶನ ಪಡೆದು ಅಮ್ಮನ ಅನುಗ್ರಹ ಪ್ರಸಾದವನ್ನು ಸ್ವೀಕರಿಸಿದರು.

ತಾನು ಕಂಬಳದಲ್ಲಿ ಗಳಿಸಿದ ಎರಡು ಚಿನ್ನದ ಪದಕಗಳನ್ನು ಕಾಪು ಮಾರಿಯಮ್ಮನ ಸ್ವರ್ಣ ಗದ್ದುಗೆಗೆ ಸಮರ್ಪಿಸಿದರು. ಈ ಹಿಂದೆಯೂ ಇದೆ ರೀತಿಯಾಗಿ ಗೆದ್ದಿದ್ದ ಚಿನ್ನದ ಪದಕಗಳನ್ನು ಅಮ್ಮನಿಗೆ ಸಮರ್ಪಿಸಿದ್ದು ಮಾತ್ರವಲ್ಲದೆ ಈಗಾಗಲೇ 5 ಲಕ್ಷ ರೂಪಾಯಿಯನ್ನು ಶಿಲೆಯ ದೇಣಿಗೆಯಾಗಿ ದೇವಳದ ಜಿರ್ಣೋದ್ಧಾರಕ್ಕೆ ನೀಡಿರುವ ಅವರು ಸುಮಾರು 15ಲಕ್ಷ ರೂಪಾಯಿ ಬೆಲೆ ಬಾಳುವ ಮುಖಮಂಟಪದಲ್ಲಿನ ಮತ್ತು ಇತರೆ 27 ಶಿಲಾಮೂರ್ತಿಗಳನ್ನು ಸೇವಾರೂಪದಲ್ಲಿ ನೀಡಿರುತ್ತಾರೆ.

ಕಾಪುವಿನ ಅಮ್ಮನ ಅನುಗ್ರಹದಿಂದ ಕಂಬಳ ಕ್ಷೇತ್ರದಲ್ಲಿ ಪಡೆಯುತ್ತಿರುವ ಚಿನ್ನದ ಪದಕಗಳನ್ನು ಅಮ್ಮನಿಗಾಗಿ ನಿರ್ಮಾಣಗೊಳ್ಳುತ್ತಿರುವ ಸ್ವರ್ಣ ಗದ್ದುಗೆಗೆ ಸಮರ್ಪಿಸಿರುವ ಅವರು ಈ ವರ್ಷದಲ್ಲಿ ಇನ್ನು ಮುಂದೆ ನಾವು ಕಂಬಳ ಕ್ಷೇತ್ರದಲ್ಲಿ ಗೆದ್ದ ಎಲ್ಲಾ ಚಿನ್ನದ ಪದಕಗಳನ್ನು ಅಮ್ಮನಿಗೆ ಸಮರ್ಪಿಸುತ್ತೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ದೇವಳದ ಪ್ರಬಂಧಕ ಗೋವರ್ಧನ್ ಸೇರಿಗಾರ್, ಆರ್ಥಿಕ ಸಮಿತಿಯ ಶೈಲಪುತ್ರಿ ತಂಡದ ಸಂಚಾಲಕ ರಾಧಾರಮಣ ಶಾಸ್ತ್ರಿ ಮತ್ತು ಸಿಬ್ಬಂದಿ ಲಕ್ಷ್ಮಣ್ ಶೆಟ್ಟಿ ಮಂಡೇಡಿ ಉಪಸ್ಥಿತರಿದ್ದರು.