ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಪಡುಬಿದ್ರಿಯಲ್ಲಿ ಕೃಷಿ ಮೇಳಕ್ಕೆ ಚಾಲನೆ

Posted On: 28-12-2024 06:47PM

ಪಡುಬಿದ್ರಿ : ಆಧುನಿಕ ತಂತ್ರಜ್ಞಾನವನ್ನು ಕೃಷಿಯಲ್ಲೂ ಬಳಸುವುದು ಅನಿವಾರ್ಯ. ಅದರ ಬಳಕೆಗೆ ರೈತರನ್ನು ಉತ್ತೇಜಿಸಬೇಕಾಗಿದೆ. ಕೃಷಿ ಮೇಳಗಳು ಇದಕ್ಕೆ ಪೂರಕವಾಗಿದೆ ಎಂದು ನಿವೃತ್ತ ಕೃಷಿ ಅಧಿಕಾರಿ ಅಬ್ದುಲ್ ಬಶೀರ್ ಅಭಿಪ್ರಾಯಪಟ್ಟರು. ಅವರು ಶನಿವಾರ ಬಾಲಗಣಪತಿ ಪ್ರಸನ್ನ ಪಾರ್ವತಿ ದೇವಸ್ಥಾನದ ವಠಾರದಲ್ಲಿ ಉದಯಾದ್ರಿ ಪ್ರಸನ್ನ ಪಾರ್ವತಿ ದೇವಸ್ಥಾನದ ಸಹಯೋಗದೊಂದಿಗೆ ಕೊಲ್ನಾಡು ಮುಲ್ಕಿಯ ನಿತ್ಯಾನಂದ ಆಗ್ರೋ ಲಿ. ಇದರ ವತಿಯಿಂದ ದ್ವಿತೀಯ ಬಾರಿಗೆ ಕೃಷಿ ಮೇಳ 2024ದಲ್ಲಿ ಮಾಹಿತಿ ನೀಡಿದರು.

ಈ ಸಂದರ್ಭ ಪಡುಬಿದ್ರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ, ಬಂಟರ ಸಂಘದ ಮಾಜಿ ಅಧ್ಯಕ್ಷ ನವೀನ್‌ಚಂದ್ರ ಜೆ. ಶೆಟ್ಟಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶಶಿಕಾಂತ್ ಪಡುಬಿದ್ರಿ, ಉದ್ಯಮಿ ಸಂತೋಷ್ ಶೆಟ್ಟಿ ಪಲ್ಲವಿ, ಉದಯಾದ್ರಿ ಬಾಲಗಣಪತಿ ಪ್ರನ್ನಪಾರ್ವತಿ ದೇವಸ್ಥಾನದ ಅಧ್ಯಕ್ಷ ಪಿ.ಡಿ. ಶೇಖರ್ ರಾವ್, ಟ್ರಸ್ಟಿಗಳ ಜಗದಾಭಿರಾಮ, ನಯನಾಭಿ ರಾಮ, ರೇಶ್ಮಾ ಶೆಟ್ಟಿ ಉಪಸ್ಥಿತರಿದ್ದರು. ನಿತ್ಯಾನಂದ ಆಗ್ರೋ ಲಿಮಿಟೆಡ್‌ನ ದಿನಕರ್ ರಾವ್, ನವೀನ್‌ಚಂದ್ರ ಪ್ರಭು, ಶರಣ್‌ರಾಜ್, ದೇವದಾಸ್ ಕೋಟ್ಯಾನ್, ರಕ್ಷಾ ಉಪಸ್ಥಿತರಿದ್ದರು.

ಎರಡು ದಿನಗಳ ಕಾಲ ನಡೆಯುವ ಕೃಷಿ ಮೇಳದಲ್ಲಿ ಜಿಲ್ಲೆಯ ಪ್ರಸಿದ್ಧ ನರ್ಸರಿಗಳಾದ ಹಣ್ಣುಹಂಪಲು, ತೆಂಗು ಹಾಗೂ ಇನ್ನಿತರ ತಳಿಗಳ ಮಾರಾಟ ಅಲ್ಲದೆ ಮಲ್ಲಿಗೆ, ದಾಸವಾಳ, ಸಂಪಿಗೆ ಹಾಗೂ ಇನ್ನಿತರ ಹೂವಿನ ಗಿಡ, ವಿವಿಧ ರೀತಿಯ ಕಾಂಪೋಸ್ಟ್ ಗೊಬ್ಬರ, ತರಕಾರಿ ಬೀಜಗಳ ಮಾರಾಟ, ಮತ್ಸ್ಯ ಮೇಳ, ನರ್ಸರಿ, ಸ್ವದೇಶಿ ಖಾದಿ, ಆಹಾರ ಮೇಳ ಮತ್ತು ವಿವಿಧ ರೀತಿಯ ಕೃಷಿ ಯಂತ್ರೋಪಕರಣಗಳ ಪ್ರದರ್ಶನ, ಮಾರಾಟ ನಡೆಯಿತು.