ದಿವ್ಯಾಂಗ ಬಾಲಕನ ಮನೆ ಬಾಗಿಲಿಗೆ ಬಂದು ಅಂಗವಿಕಲ ವೇತನ ಮಂಜೂರು ಮಾಡಿದ ತಹಶಿಲ್ದಾರ್ ಡಾ.ಪ್ರತಿಭಾ ಆರ್.
Posted On:
03-01-2025 07:02PM
ಕಾಪು : ಕೆಲ ದಿನಗಳ ಹಿಂದೆ ಫಲಿಮಾರು ಗ್ರಾಮದ ಅಡ್ವೆಯ ದಿವ್ಯಾಂಗ ಬಾಲಕನಿಗೆ ಮನೆ ಬಾಗಿಲಿಗೆ ಬಂದು ಆಧಾರ್ ಮಾಡಿಸಿಕೊಟ್ಟಿದ್ದ ತಹಶಿಲ್ದಾರ್ ಡಾ. ಪ್ರತಿಭಾರವರು ಗುರುವಾರ ಅದೇ ಬಾಲಕನ ಮನೆ ಬಾಗಿಲಿಗೆ ಬಂದು ಅಂಗವಿಕಲ ವೇತನವನ್ನೂ ಮಂಜೂರು ಮಾಡಿ ಮಾನವೀಯತೆ ಮೆರೆದಿದ್ದಾರೆ.
ಹದಿನಾಲ್ಕು ವರ್ಷದ ಕೀರ್ತನ್ ರವರಿಗೆ ಅಂಗವೈಕಲ್ಯದಿಂದ ಸದಾ ಕಾಲ ಹಾಸಿಗೆಯಲ್ಲಿಯೇ ಇರಬೇಕಾದ ಪರಿಸ್ಥಿತಿ. ತಾಯಿ ಮಮತಾರವರೇ ಎಲ್ಲಾ ಸೇವೆ ಮಾಡುತ್ತಿದ್ದು, ಆಧಾರ್ ಕಾರ್ಡ್ ಇಲ್ಲದೇ ಅಂಗವಿಕಲ ವೇತನವನ್ನು ಪಡೆಯಲು ಸಾಧ್ಯವಾಗಿರಲಿಲ್ಲ. ಆಗ ಸ್ವತಃ ತಹಶಿಲ್ದಾರ್ ಇಡೀ ಆಧಾರ್ ಕೇಂದ್ರವನ್ನೇ ಬಾಲಕನ ಮನೆ ಬಾಗಿಲಿಗೆ ಕೊಂಡೊಯ್ದು ಆಧಾರ್ ಕಾರ್ಡ್ ಮಾಡಿಸಿದ್ದರು. ಶೀಘ್ರವಾಗಿ ಅಂಗವಿಕಲ ಕಾರ್ಡ್ ಬರುವಂತೆ ಮಾಡಿ ಅಂಗವಿಕಲ ವೇತನವನ್ನು ಸಹ ಮಂಜೂರು ಮಾಡಿರುತ್ತಾರೆ.
ಈ ಬಗ್ಗೆ ಬಾಲಕನ ತಾಯಿ ಮಮತಾ ಮತ್ತು ತಂದೆ ಗುರುಸ್ವಾಮಿ ಪ್ರತಿಕ್ರಿಯಿಸಿ, ತಹಶಿಲ್ದಾರ್ ಪ್ರತಿಭಾ ಮೇಡಂರವರ ದೆಸೆಯಿಂದಾಗಿ ನಮಗಿಂದು ಈ ಪಿಂಚಣಿ ದೊರಕಲು ಸಾಧ್ಯವಾಗಿದೆ. ಅಂದು ಮನೆಗೆ ಆಧಾರ್ ಕೇಂದ್ರ ತಂದು ಆಧಾರ್ ಕಾರ್ಡ್ ಮಾಡಿಸಿಕೊಟ್ಟು ಹೋಗಿದ್ದರು. ಇಂದು ಮನೆ ಬಾಗಿಲಿಗೆ ಬಂದು ಪಿಂಚಣಿ ಮಂಜೂರಾತಿ ಪತ್ರ ನೀಡಿದ್ದಾರೆ. ಅವರಿಲ್ಲದೇ ಇದ್ದಿದ್ದರೆ ನಾವು ಜೀವನವಿಡೀ ಆಧಾರ್ ಕಾರ್ಡ್ ಮಾಡಿಸಲು ಸಾಧ್ಯವಾಗುತ್ತಿರಲಿಲ್ಲ. ಅವರಿಂದಾಗಿ ನಮ್ಮ ಬಾಳಿನಲ್ಲಿ ಬೆಳಕು ಕಂಡಿದೆ. ಇಂತಹ ಮಾನವೀಯತೆಯ ಅಧಿಕಾರಿಗಳು ವಿರಳ ಎಂದರು.
ಈ ಬಗ್ಗೆ ತಹಶಿಲ್ದಾರ್ ಪ್ರತಿಭಾ ಆರ್ ಮಾತನಾಡಿ,
ಸರಕಾರದ ಸೌಲಭ್ಯಗಳನ್ನು ನಿಜವಾದ ಅರ್ಹರಿಗೆ ತಲುಪಿಸುವುದು ಅಧಿಕಾರಿಗಳ ಕರ್ತವ್ಯ. ಅಂಗವಿಕಲ ವೇತನ ಮಂಜೂರು ಮಾಡಲು ಆಧಾರ್ ಕಾರ್ಡ್ ಅವಶ್ಯಕತೆ ಇತ್ತು. ವೈದ್ಯರಿಂದ ಅಂಗವಿಕಲ ಕಾರ್ಡ್ ನ ಅವಶ್ಯಕತೆ ಇತ್ತು. ಇವುಗಳನ್ನು ನಾನೇ ಸ್ವತಃ ಮುತುವರ್ಜಿ ವಹಿಸಿ ಮಾಡಿಸಿಕೊಟ್ಟಿರುತ್ತೇನೆ. ಇಂದು ಅಂಗವಿಕಲ ವೇತನವನ್ನು ಸಹ ಮಂಜೂರು ಮಾಡಿರುತ್ತೇನೆ. ಸರ್ಕಾರದ ಸೌಲಭ್ಯಗಳನ್ನು ದೊರಕಿಸುವಲ್ಲಿ ಅಧಿಕಾರಿಗಳು ಮಾನವೀಯ ಸ್ಪರ್ಶದೊಂದಿಗೆ ಕರ್ತವ್ಯ ನಿರ್ವಹಿಸಬೇಕು ಎಂದರು.
ಗ್ರಾಮ ಒನ್ ಸೆಂಟರ್ ನಡೆಸುತ್ತಿರುವ ಇಸ್ಮಾಯಿಲ್ ಫಲಿಮಾರು ಇವರು ತಹಶಿಲ್ದಾರ್ ಪ್ರತಿಭಾರವರ ಗಮನಕ್ಕೆ ತಂದು ಅಗತ್ಯ ನೆರವು ಸಿಗಲು ನೆರವಾಗಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮ ಆಡಳಿತಾಧಿಕಾರಿ ಸುನಿಲ್ ಉಪಸ್ಥಿತರಿದ್ದರು.