ಉಡುಪಿ ಜಿಲ್ಲಾ ನಾಯಕ ಸಮುದಾಯ ಸಂಘದ ಮಹಾಸಭೆ ಸಂಪನ್ನ
Posted On:
07-01-2025 06:00PM
ಉಡುಪಿ : ವಿದ್ಯಾರ್ಥಿಗಳು ಮೊಬೈಲನ್ನು ದೂರವಿಟ್ಟು ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದಬೇಕು ಆ ಮೂಲಕ ಜ್ಞಾನ ಸಂಪಾದನೆ ಮಾಡಿ , ಉನ್ನತ ವ್ಯಾಸಂಗವನ್ನು ಮಾಡಿ ಉತ್ತಮ ನೌಕರಿಯನ್ನು ಆಯ್ಕೆ ಮಾಡಿ ಸಮಾಜದಲ್ಲಿ ಉತ್ತಮ ರೀತಿಯಲ್ಲಿ ಬಾಳಿ-ಬದುಕಿ, ಬದುಕನ್ನು ಸಾರ್ಥಕಗೊಳಿಸಿಕೊಳ್ಳಬೇಕೆಂದು ಉಡುಪಿ ಸರಕಾರಿ ಜಿಲ್ಲಾ ಆಸ್ಫತ್ರೆಯ ಹಿರಿಯ ವೈದ್ಯಕೀಯ ತಜ್ಞರಾದ ಡಾ . ದಯಾಮಣಿ ಬಿ. ಇವರು ತಿಳಿಸಿದರು.
ಅವರು ಕಲ್ಯಾಣಪುರದ ಶ್ರೀ ವೀರಭದ್ರ ದೇವಸ್ಥಾನದಲ್ಲಿ ಜರುಗಿದ ಉಡುಪಿ ಜಿಲ್ಲಾ ನಾಯಕ ಸಮುದಾಯ ಸಂಘದ ಮಹಾಸಭೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಜಿಲ್ಲಾ ಸಮುದಾಯ ಸಂಘದ ಅಧ್ಯಕ್ಷರಾದ ಬಾಲಕ್ರಷ್ಣ ನಾಯಕ ಮಾತನಾಡಿ, ನಮ್ಮ ಸಮುದಾಯವು ಒಗ್ಗಟ್ಟಿನಿಂದ ಇದ್ದು ಮುಂದೆ ಏನೇ ಸಮಸ್ಯೆ ಬಂದರೂ ನಾವೆಲ್ಲ ಒಂದಾಗಿ ಹೋರಾಟ ಮಾಡಿ ಸಮಸ್ಯೆಗಳನ್ನು ಪರಿಹರಿಸಿಕೊಂಡು ಸರಕಾರದಿಂದ ನಮ್ಮ ಸಮುದಾಯಕ್ಕೆ ಸಿಗಬೇಕಾದ ಸೌಲಭ್ಯಗಳನ್ನು ಪಡೆಯಬೇಕು ಎಂದು ಹೇಳಿದರು.
ಸಭೆಯನ್ನು ಉದ್ದೇಶಿಸಿ ಮುಖ್ಯ ಅತಿಥಿಗಳಾದ ಕಾರ್ಕಳ ನಗರ ಠಾಣೆಯ ಸಹಾಯಕ ಉಪನಿರೀಕ್ಷಕರಾದ ಯಶವಂತ, ಜಿಲ್ಲಾ ನಾಯಕ ಸಮುದಾಯ ಸಂಘದ ಗೌರವ ಅಧ್ಯಕ್ಷರಾದ ಶೇಖರ್ ನಾಯಕ, ಕಾಪು ತಾಲೂಕು ನಾಯಕ ಸಮುದಾಯದ ಅಧ್ಯಕ್ಷರಾದ ನೀಲಾನಂದ ನಾಯಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಸನ್ಮಾನ : ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಗಳನ್ನು ,ನಿವೃತ್ತರನ್ನು ,ಸಾಧಕರನ್ನು ಹಾಗೂ ಕಳೆದ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇ.85ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಮಂಗಳೂರು ತಾಲೂಕು ಸಂಘದ ಅಧ್ಯಕ್ಷರಾದ ಹರೀಶ್ ನಾಯಕ, ಜಿಲ್ಲಾ ಸಂಘದ ಗೌರವ ಸಲಹೆಗಾರರಾದ ವಸಂತ ನಾಯಕ, ಕೋಶಾಧಿಕಾರಿ ಮಂಜುನಾಥ ನಾಯಕ ಉಪಸ್ಥಿತರಿದ್ದರು.
ಜಿಲ್ಲಾ ಕಾರ್ಯದರ್ಶಿ ಸತೀಶ್ ನಾಯಕ ವರದಿ ವಾಚಿಸಿದರು. ಉಪನ್ಯಾಸಕಿ ಪ್ರತಿಮ ಸನ್ಮಾನ ಪತ್ರ ವಾಚಿಸಿದರು. ಸಂಶೋಧನಾ ವಿದ್ಯಾರ್ಥಿನಿ ಕುಮಾರಿ ನಿಶಾ ಕಾರ್ಯಕ್ರಮ ನಿರೂಪಿಸಿದರು. ಸಂಘಟನಾ ಕಾರ್ಯದರ್ಶಿ ಸುಬ್ರಹ್ಮಣ್ಯ ನಾಯಕ ವಂದಿಸಿದರು.