ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಉಡುಪಿ ಜಿಲ್ಲಾ ಮಟ್ಟದ ಕನ್ನಡ ಜಾನಪದ ರಾಜ್ಯೋತ್ಸವ 2025 ಕಾರ್ಯಕ್ರಮ

Posted On: 08-01-2025 10:06PM

ಉಡುಪಿ : ಕನ್ನಡ ಜಾನಪದ ಪರಿಷತ್ ಬೆಂಗಳೂರು, ಉಡುಪಿ ಜಿಲ್ಲಾ ಘಟಕ ಇದರ ವತಿಯಿಂದ ಉಡುಪಿ ತಾಲೂಕು ಘಟಕದ ಸಹಯೋಗದಲ್ಲಿ ಡಾ.ಟಿ. ಎಂ. ಎ. ಪೈ ಪ್ರೌಢಶಾಲೆ ಕಲ್ಯಾಣಪುರ ಶಾಲೆಯಲ್ಲಿ ಬುಧವಾರ ಉಡುಪಿ ಜಿಲ್ಲಾ ಮಟ್ಟದ ಕನ್ನಡ ಜಾನಪದ ರಾಜ್ಯೋತ್ಸವ 2025 ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ. ಎಸ್ ಬಾಲಾಜಿ, ಜಾನಪದವು ಪಠ್ಯಕ್ರಮವಾಗಬೇಕಾಗಿದೆ. ಜನಪದವು ಮುಂದಿನ ತಲೆಮಾರಿಗೆ ಉಳಿಯಬೇಕಾದರೆ ವಿದ್ಯಾರ್ಥಿಗಳಲ್ಲಿ ಜನಪದ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮ ನಿರಂತರವಾಗಿ ನಡೆಯಬೇಕು ಇದರಲ್ಲಿರುವ ಅಘಾತವಾದ ಜ್ಞಾನ ಸಂಪತ್ತು ಇದನ್ನು ಉಳಿಸಿ ಬೆಳೆಸಬೇಕಾದ ಅಗತ್ಯತೆ ಇಂದಿನ ಸಮಾಜಕ್ಕಿದೆ. ಈ ನಿಟ್ಟಿನಲ್ಲಿ ಕನ್ನಡ ಜಾನಪದ ಪರಿಷತ್ ಹಲವಾರು ಯೋಜನೆಗಳನ್ನು ರೂಪಿಸಿದೆ ಎಂದರು.

ಈ ಸಂದರ್ಭದಲ್ಲಿ ಜಾನಪದ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಿರಿಯ ದೈವನರ್ತಕರಾದ ಬಿರು ಪಾಣರ, ಸಂಗೀತ ಕಲಾವಿದರಾದ ವೇಣುಗೋಪಾಲ್ ಭಟ್ ಕೊಟೇಶ್ವರ, ಕನ್ನಡ ಅಧ್ಯಾಪಕಿ ಸುರೇಖಾ ಅವರನ್ನು ಸನ್ಮಾನಿಸಲಾಯಿತು. ಕನ್ನಡ ಭಾಷಾ ವಿಷಯದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ಶ್ರೇಯ ಮತ್ತು ಮಾನ್ಯ ಆಚಾರ್ಯ ಅವರನ್ನು ನಗದು ಪುರಸ್ಕಾರದೊಂದಿಗೆ ಗೌರವಿಸಲಾಯಿತು.

ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷ ಡಾ. ಗಣೇಶ್ ಗಂಗೊಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ, ಜಾನಪದವು ಜನರ ಜೀವನ ಪದ್ಧತಿಯಾಗಿತ್ತು. ಜನಪದರು ಯಾವುದೇ ಶಿಕ್ಷಣ ಇಲ್ಲದೆ ಸಾವಿರಾರು ಹಾಡನ್ನು ರಚನೆ ಮಾಡಿ ಹಾಡಿದ್ದರು. ಅವರ ಕೊಡುಗೆಯನ್ನು ನಾವು ಉಳಿಸಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯ ಶಿಕ್ಷಕ ವೆಂಕಟೇಶ್ ಎಚ್.ಎನ್. ವಹಿಸಿ ಶುಭ ಹಾರೈಸಿದರು. ವೇದಿಕೆಯಲ್ಲಿ ಕನ್ನಡ ಜಾನಪದ ಪರಿಷತ್ ಉಡುಪಿ ತಾಲೂಕು ಅಧ್ಯಕ್ಷೆ ಮಾಯಾ ಕಾಮತ್, ಜಿಲ್ಲಾ ಪದಾಧಿಕಾರಿಗಳಾದ ಚಂದ್ರ ಹಂಗಾರಕಟ್ಟೆ, ಫಾರೂಕ್ ಚಂದ್ರ ನಗರ, ತಾಲ್ಲೂಕು ಪದಾಧಿಕಾರಿಗಳಾದ ಪ್ರಭಾರಾವ್, ಸುಜಾತ ನಿತ್ಯಲಕ್ಷ್ಮಿ ಮುಂತಾದವರು ಉಪಸ್ಥಿತರಿದ್ದರು. ನಿಕಿತಾ ಮತ್ತು ತಂಡದವರು ಜಾನಪದ ಗೀತೆ ಹಾಡಿದರು. ಜಿಲ್ಲಾ ಪದಾಧಿಕಾರಿ ರಾಘವೇಂದ್ರ ಪ್ರಭು ಕವಾ೯ಲು ನಿರೂಪಿಸಿದರು.