ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಜ.13 : ಪಡುಬಿದ್ರಿ ಸಿ.ಎ.ಸೊಸೈಟಿ ವಿರುದ್ಧ ಜನಜಾಗೃತಿಗಾಗಿ ಸಾರ್ವಜನಿಕ ಬೃಹತ್ ಪ್ರತಿಭಟನೆ

Posted On: 09-01-2025 07:17PM

ಪಡುಬಿದ್ರಿ : ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸಂಘ (ನಿ.) ಇದರ ಆಡಳಿತ ಮಂಡಳಿ ಚುನಾವಣೆಯಲ್ಲಿ ಕನಿಷ್ಠ ಷೇರು ಹೊಂದಿರುವ ಸಾಮಾನ್ಯ ಜನರಿಗೆ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿರ್ಣಯ ಕೃೆಗೊಂಡಿರುವ ಆಡಳಿತ ಮಂಡಳಿ ವಿರುದ್ಧ ಹಾಗು ಆಡಳಿತ ಮಂಡಳಿ ಕಳೆದ ಎರಡು ದಶಕಗಳಿಂದ ನಡೆಸಿದ ದುರಾಡಳಿತ ಮತ್ತು ಸಾರ್ವಜನಿಕರನ್ನು ಹಾಗು ಉದ್ಯೋಗಾಕಾಂಕ್ಷಿಗಳನ್ನು ವಂಚಿಸಿ ಮತ್ತೆ ಚುನಾವಣೆಗೆ ಮುಂದಾದ ಅಧ್ಯಕ್ಷ ಹಾಗು ಆಡಳಿತ ಮಂಡಳಿ ವಿರುದ್ಧ ಇಲಾಖಾ ತನಿಖೆಯ ಬಗ್ಗೆ ಹಕ್ಕೊತ್ತಾಯ ಪಡಿಸಲು ಜನ ಜಾಗೃತಿಗಾಗಿ ಜನವರಿ 13 ರಂದು ಬೆಳಿಗ್ಗೆ 10 ಗಂಟೆಗೆ ಪ್ರತಿಭಟನಾ ಜಾಥವು ಪಡುಬಿದ್ರಿ ಗ್ರಾಮ ಪಂಚಾಯತಿಯಿಂದ ಹೊರಟು ಸೊಸೈಟಿಯ ಕೇಂದ್ರ ಕಚೇರಿಯ ಮುಂದುಗಡೆ ಸಾರ್ವಜನಿಕ ಬೃಹತ್ ಪ್ರತಿಭಟನೆ ನಡೆಯಲಿದೆ ಎಂದು ಸಹಕಾರಿ ಜನಪರ ಒಕ್ಕೂಟದ ಅಧ್ಯಕ್ಷರಾದ ಶೇಖರ್ ಹೆಜಮಾಡಿ ತಿಳಿಸಿದ್ದಾರೆ.

ಆಡಳಿತ ಮಂಡಳಿಯ ಚುನಾವಣೆಯಲ್ಲಿ ಕನಿಷ್ಠ ಷೇರು ಹೊಂದಿರುವ ಸಾಮಾನ್ಯ ಜನರಿಗೆ ಸ್ಪರ್ಧಿಸದಂತೆ ನಿರ್ಣಯವನ್ನು ಕೃೆಗೊಂಡಿರುವುದು ಸಂವಿಧಾನ ಮತ್ತು ಪ್ರಜಾಪ್ರಭುತ್ವ ವೃೆವಸ್ಥೆಗೆ ವಿರುದ್ಧವಾದ ಕೃತ್ಯವಾಗಿದೆ. ಈ ಬಾರಿ ನಡೆಯುವ ಚುನಾವಣೆಯಲ್ಲಿ ಆಡಳಿತ ಮಂಡಳಿಯ 13 ನಿರ್ದೇಶಕರ ಸ್ಥಾನಗಳಿಗೆ ಸುಮಾರು 15 ವರ್ಷಗಳಿಂದ ಈ ಹಿಂದೆ ಇದ್ದ ನಿರ್ದೇಶಕರೇ ಈ ಬಾರಿಯೂ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು, ಬ್ಯಾಂಕಿನ ಲಾಭಾಂಶವನ್ನು ತನ್ನ ಸ್ವಹಿತಕ್ಕಾಗಿ ಬಳಸಿಕೊಂಡು ಬಡವರ ಕಣ್ಣೀರ ದುಡ್ಡಿನಲ್ಲಿ ಮೋಜು ಮಸ್ತಿಗಾಗಿ ದೇಶ, ವಿದೇಶಗಳಿಗೆ ಪ್ರವಾಸ ಕೈಗೊಂಡು ಪ್ರತಿ ವರ್ಷ ಲಕ್ಷಾಂತರ ರೂಪಾಯಿ ನಷ್ಟ ಉಂಟು ಮಾಡುತಿದ್ದಾರೆ. ನೆಪ ಮಾತ್ರಕ್ಕೆ ಅಧ್ಯಯನ ಪ್ರವಾಸ ಎಂಬ ಶಿರ್ಷೀಕೆ. ಮತ್ತೇ ಅದೇ ತಂಡ‌ ಈ ಬಾರಿಯ ಚುನಾವಣೆಗೆ ಸಜ್ಜುಗೂಂಡು ಸಹಕಾರಿ ಇಲಾಖೆಯ ಅಧಿಕಾರಿಗಳನ್ನು ಹಿಡಿತದಲ್ಲಿ ಇಟ್ಟುಕೊಂಡು ಚುನಾವಣೆಯೇ ನಡೆಯಬಾರದೆಂದು ನಮ್ಮ ತಂಡದ ಸ್ಪರ್ಧಾಳುಗಳ ಮೇಲೆ ಒತ್ತಡ ತರುತ್ತಿದ್ದಾರೆ.

ಹೆಜಮಾಡಿ ಮತ್ತು ಪಡುಬಿದ್ರಿ ಬ್ಯಾಂಕಿನಲ್ಲಿ ನಕಲಿ ಬಂಗಾರದ ಮೇಲೆ ಕೋಟಿ ಹತ್ತಿರದ ಮೊತ್ತದ ಸಾಲ ನೀಡಿರುವುದರಲ್ಲಿ ಅಡಳಿತ ಮಂಡಳಿ ಶಾಮೀಲಾಗಿರುತ್ತದೆ ಹಾಗೂ ಹೆಜಮಾಡಿ ಮತ್ತು ಪಲಿಮಾರು ಶಾಖೆಯ ಕಟ್ಟಡದಲ್ಲೂ ಬಹಳ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆದಿದ್ದು ಅಲ್ಲದೆ ಇತ್ತೀಚೆಗೆ ನಡೆದ ಉದ್ಯೋಗ ನೇಮಕಾತಿಯಲ್ಲಿ ಭಾರಿ ಮೊತ್ತದ ಹಣ ಬೇಡಿಕೆಯನ್ನು ಪಡೆದು ನೂರಾರು ಸಂಖ್ಯೆಯ ಬಡ ಉದ್ಯೋಗಾಕಾಂಕ್ಷಿ ಅಭ್ಯರ್ಥಿಗಳಿಗೆ ವಂಚಿಸಿರುತ್ತಾರೆ. ಈ ರೀತಿ ನೇಮಕಾತಿ ನಡೆಸಿದರೂ ಯಾರೂ ಪ್ರಶ್ನಿಸುವಂತಿಲ್ಲ, ಅನ್ಯಾಯಕ್ಕೆ ಒಳಗಾದ ಯುವಜನತೆಯ ಪರವಾಗಿ ಇಂತಹ ಸ್ವಾರ್ಥ ಆಡಳಿತ ಮಂಡಳಿಯ ವಿರುದ್ದ ಪ್ರಜ್ಞಾವಂತ ಮತದಾರರು ಧ್ವನಿಯಾಗಬೇಕಾಗಿದೆ. ಯಾಕೆಂದರೆ 13 ಸದಸ್ಯರೂ ಒಂದೇ ಗುಂಪಿನವರಾಗಿದ್ದೂ ವಿರೋಧ ಪಕ್ಷ ಇಲ್ಲದಿರುವುದೇ ಇದಕ್ಕೆಲ್ಲ ಕಾರಣ. ಇದಲ್ಲದೆ, ಬ್ಯಾಂಕಿನ ಈಗಿರುವ ಕೆಲವು ನಿರ್ದೇಶಕರು ರಾಷ್ಟ್ರೀಯ ಬ್ಯಾಂಕಿನಲ್ಲಿ ಮತ್ತು ಸೊಸೈಟಿಯಲ್ಲಿಯೇ ಸಾಲದ ಸುಸ್ತಿದಾರರಾಗಿದ್ದು ಮತ್ತೆ ಸ್ಪರ್ಧಿಸುತ್ತಿದ್ದಾರೆ. ಇಂಥವರು ಚುನಾವಣೆಯಲ್ಲಿ ಗೆದ್ದರೆ ಪಡುಬಿದ್ರಿ ಸಿ.ಎ.ಸೊಸೈಟಿ ದಿವಾಳಿ ಆಗುವುದು ಖಂಡಿತ ಎಂದಿದ್ದಾರೆ.

ಆದ್ದರಿಂದ ಎರಡು ದಶಕಗಳ ಕಾಲ ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸಂಘವನ್ನು ದುರಾಡಳಿತ ನಡೆಸಿ ಸಾರ್ವಜನಿಕರನ್ನು ಹಾಗು ಯುವಜನತೆಯನ್ನು, ಉದ್ಯೋಗಾಕಾಂಕ್ಷಿಗಳನ್ನು ವಂಚಿಸಿ ಮತ್ತೆ ಚುನಾವಣೆಗೆ ಸ್ಪರ್ಧಿಸಲು ಮುಂದಾದ ಸೊಸೈಟಿ ಅಧ್ಯಕ್ಷ ಹಾಗು ಅಡಳಿತ ಮಂಡಳಿ ವಿರುದ್ಧ ಇಲಾಖಾ ತನಿಖೆಯ ಬಗ್ಗೆ ಹಕ್ಕೊತ್ತಾಯ ಪಡಿಸಲು ಜನಜಾಗೃತಿಗಾಗಿ "ಸಾರ್ವಜನಿಕ ಬೃಹತ್ ಪ್ರತಿಭಟನೆಯು" ನಡೆಯಲಿದೆ. ಈ ಪ್ರತಿಭಟನಾ ಸಭೆಯಲ್ಲಿ ಪ್ರಜ್ಞಾವಂತ ನಾಗರಿಕರು, ವಿದ್ಯಾರ್ಥಿಗಳು , ಮಹಿಳೆಯರು ಹಾಗು ಮತದಾರರು ಭಾಗವಹಿಸುವಂತೆ ವಿನಂತಿಸಿದ್ದಾರೆ.