ಪಡುಬಿದ್ರಿ : ಪಡುಬಿದ್ರಿಯ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಸೋಮವಾರ ಬ್ರಹ್ಮಕಲಶೋತ್ಸವದ ಪೂರ್ವಭಾವೀ ದಾರು ಮುಹೂರ್ತ ಹಾಗೂ ಶಿಲ್ಪಿಗಳಿಗೆ ವೀಳ್ಯ ಪ್ರದಾನ ಸಮಾರಂಭವು ಜರಗಿತು.
ಪಡುಬಿದ್ರಿಯ ಗುಂಡ್ಲಾಡಿ ಕಟ್ಟೆಯಿಂದ ಭವ್ಯ ಮೆರವಣಿಗೆಯಲ್ಲಿ ಶಿಲೆಗಳು ಹಾಗೂ ದಾರುಖಂಡಗಳನ್ನು ದೇವಸ್ಥಾನಕ್ಕೆ ತರಲಾಯಿತು.
ಬಳಿಕ ಶ್ರೀ ದೇಗುಲದ ತಂತ್ರಿವರ್ಯರಾದ ಕಂಬ್ಳಕಟ್ಟ ಶ್ರೀ ರಾಧಾಕೃಷ್ಣ ಉಪಾಧ್ಯಾಯ ಅವರ ನೇತೃತ್ವದಲ್ಲಿ ದೇವಸ್ಥಾನದ ಅರ್ಚಕರಾದ ಪದ್ಮನಾಭ ಭಟ್ ಹಾಗೂ ವೈ. ಗುರುರಾಜ ಭಟ್‌ರವರ ಉಪಸ್ಥಿತಿಯಲ್ಲಿ ಶ್ರೀ ದೇವಸ್ಥಾನದ ಧ್ವಜಸ್ತಂಭದ ಎದುರು ಆದ್ಯ ಗಣಪತಿ ಪ್ರಾರ್ಥನೆಯ ಮೂಲಕ ದಾರು ದೇವತೆಗಳಿಗೆ ಪೂಜೆ ಸಲ್ಲಿಸಿ, ಸಾಮೂಹಿಕ ಪ್ರಾರ್ಥನೆಯನ್ನು ನೆರವೇರಿಸಲಾಯಿತು.
ತದನಂತರ ಜೀರ್ಣೊದ್ಧಾರ ಕಾರ್ಯಗಳ ಗುತ್ತಿಗೆದಾರ ಸುಜಯ ಕುಮಾರ್ ಶೆಟ್ಟಿ ಕಾರ್ಕಳ, ವಾಸ್ತು ಶಿಲ್ಪಿ ಕುಡುಪು ಕೃಷ್ಣರಾಜ ತಂತ್ರಿ, ಶಿಲ್ಪಿಗಳಿಗೆ ವೀಳ್ಯ ಪ್ರದಾನ ಮಾಡಲಾಯಿತು.
ಈ ಸಂದರ್ಭ ಉಡುಪಿ ಚಿಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, ದ.ಕ., ಜಿಲ್ಲಾ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಮಾಜಿ ಶಾಸಕ ಲಾಲಾಜಿ ಮೆಂಡನ್, ಶ್ರೀ ದೇಗುಲದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ, ಉದ್ಯಮಿ ಡಾ. ಕೆ. ಪ್ರಕಾಶ್ ಶೆಟ್ಟಿ, ಕಾರ್ಯದರ್ಶಿ ಶ್ರೀನಾಥ್ ಹೆಗ್ಡೆ, ಅನುವಂಶಿಕ ಆಡಳಿತ ಮೊಕ್ತೇಸರರಾದ ಪಡುಬಿದ್ರಿ ಬೀಡು ರತ್ನಾಕರ ರಾಜ್ ಅರಸ್ ಕಿನ್ಯಕ್ಕ ಬಲ್ಲಾಳರು, ಪಡುಬಿದ್ರಿ ಪೇಟೆಮನೆ ಭವಾನಿಶಂಕರ ಹೆಗ್ಡೆ, ದೇಗುಲದ ಕಾರ್ಯನಿರ್ವಹಣಾಧಿಕಾರಿ ರಾಜಗೋಪಾಲ ಉಪಾಧ್ಯಾಯ ಮತ್ತಿತರರು ಉಪಸ್ಥಿತರಿದ್ದರು.