ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕಾಪು‌ ದಂಡತೀರ್ಥ ವಿದ್ಯಾಸಂಸ್ಥೆಯಲ್ಲಿ ಸ್ಕೌಟ್ಸ್ - ಗೈಡ್ಸ್ ದ್ವಿತೀಯ ಸೋಪಾನ ಪರೀಕ್ಷೆ

Posted On: 30-01-2025 09:31PM

ಕಾಪು : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕಾಪು ಮತ್ತು ಉಡುಪಿ ಸ್ಥಳೀಯ ಸಂಸ್ಥೆಯ ದ್ವಿತೀಯ ಸೋಪಾನ ಪರೀಕ್ಷೆಯು ದಂಡತೀರ್ಥ ವಿದ್ಯಾಸಂಸ್ಥೆಯಲ್ಲಿ ಗುರುವಾರದಂದು ನಡೆಯಿತು. ಕಾರ್ಯಕ್ರಮವನ್ನು ಭಾರತ್ ಸ್ಕೌಟ್ಸ್-ಗೈಡ್ಸ್ ಉಡುಪಿ ಜಿಲ್ಲಾ ಆಯುಕ್ತರಾದ ಜಯಕರ ಶೆಟ್ಟಿ ಇಂದ್ರಾಳಿಯವರು ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ಸ್ಕೌಟ್ ಚಳವಳಿಯು ಒಂದು ನಿರಂತರ ಪ್ರಕ್ರಿಯೆ. ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಇವುಗಳಲ್ಲಿ ತೊಡಗಿಕೊಂಡಾಗ, ಸಾಮಾಜಿಕ ಜೀವನದಲ್ಲಿ ಪರಿಪೂರ್ಣರಾಗಿ ಮೂಡಿಬರುತ್ತಾರೆ. ದೇಶಭಕ್ತಿಯ ಜೊತೆಗೆ ಸುಂದರ ಭವಿಷ್ಯದ ನಿರ್ಮಾಣಕ್ಕೆ ಕಾರಣರಾಗುತ್ತಾರೆ. ಸ್ಕೌಟ್ ಪರೀಕ್ಷೆಯ ಜೊತೆಗೆ ಮುಂಬರುವ ಶಾಲಾ ಪರೀಕ್ಷೆಗಳಲ್ಲಿಯೂ ತೇರ್ಗಡೆಯಾಗಿ ಪ್ರತಿಭಾನ್ವಿತರಾಗಿ ಮೂಡಿಬನ್ನಿ ಎಂಬ ಸಂದೇಶವನ್ನು ನೀಡಿದರು.

ಕಾಪು ಸ್ಥಳೀಯ ಸಂಸ್ಥೆಯ ಗೌರವಾಧ್ಯಕ್ಷರಾದ ಡಾ. ಕೆ. ಪ್ರಶಾಂತ್ ಶೆಟ್ಟಿಯವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಇಂತಹ ಪರೀಕ್ಷಾ ಶಿಬಿರಗಳಲ್ಲಿ ಭಾಗವಹಿಸುವುದರಿಂದ ಸ್ಕೌಟ್ಸ್-ಗೈಡ್ಸ್ ನ ಉನ್ನತ ಗೌರವ-ಪುರಸ್ಕಾರಗಳನ್ನು ಪಡೆದು ಪ್ರತಿಭಾನ್ವಿತರಾಗಿ ಮೂಡಿ ಬರಲು ಸಹಕಾರಿ ಎಂದು ಶುಭ ಹಾರೈಸಿದರು. ಈ ಸಂದರ್ಭ ಭಾರತ್ ಸ್ಕೌಟ್ಸ್-ಗೈಡ್ಸ್ ಉಡುಪಿ ಜಿಲ್ಲಾ ಆಯುಕ್ತರಾದ ಜಯಕರ ಶೆಟ್ಟಿ ಇಂದ್ರಾಳಿಯವರನ್ನು ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ರಾಜ್ಯ ಸಹಾಯಕ ಸಂಘಟನಾ ಆಯುಕ್ತೆ ಸುಮನ ಶೇಖರ್, ದಂಡತೀರ್ಥ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಆಲ್ಬನ್ ರೊಡ್ರಿಗಸ್, ಜಿಲ್ಲಾ ಸಹಾಯಕ ಆಯುಕ್ತ ರಿತೇಶ್ ಶೆಟ್ಟಿ ಸೂಡ, ಉಡುಪಿ ಸ್ಥಳೀಯ ಸಂಸ್ಥೆಯ ಖಜಾಂಚಿ ರಮೇಶ್ ಅಂಬಾಡಿ, ಶಿಬಿರದ ನಾಯಕರಾದ ಉಮೇಶ್ ಕಾಂಚನ್, ದಂಡತೀರ್ಥ ವಿದ್ಯಾಸಂಸ್ಥೆಯ ಪ್ರಾಂಶುಪಾಲ ನೀಲಾನಂದ ನಾಯ್ಕ್, ಪ್ರಾಥಮಿಕ ವಿಭಾಗದ ಮುಖ್ಯಸ್ಥ ಗೇಬ್ರಿಯಲ್ ಮಸ್ಕರೇನ್ಹಸ್, ವಿದ್ಯಾಸಂಸ್ಥೆಗಳ ಶಿಕ್ಷಕ - ಶಿಕ್ಷಕಿಯರು ಹಾಗೂ ಸುಮಾರು 500 ಮಂದಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕಾಪು ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಮರಿಯ ಅನಿತ ಮೆಂಡೋನ್ಸ ಸ್ವಾಗತಿಸಿದರು. ಉಡುಪಿ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಶೇಖರ್ ಪೂಜಾರಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಕ ಉದಯ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಣ ಸಂಯೋಜಕ ಶಿವಣ್ಣ ಬಾಯರ್ ವಂದಿಸಿದರು.