ಸುಳ್ಳು ಹೇಳಿಕೆಗಳ ಮೂಲಕ ಜನರ ಹಾದಿ ತಪ್ಪಿಸುತ್ತಿರುವ ಕಾರ್ಕಳ ಶಾಸಕ ಸುನಿಲ್ ಕುಮಾರ್ : ಅನಿತ ಡಿಸೋಜ
Posted On:
01-02-2025 04:12PM
ಕಾರ್ಕಳ : ರಾಜ್ಯ ಕಾಂಗ್ರೆಸ್ ಸರಕಾರದ ಮೇಲೆ ಒಲೈಕೆ ನೀತಿ ಎಂಬ ಸುಳ್ಳು ಆರೋಪ ಮಾಡಿ ಜನರನ್ನು ದಿಕ್ಕು ತಪ್ಪಿಸುವ ಕಾರ್ಕಳ ಶಾಸಕ ಸುನಿಲ್ ಕುಮಾರ್ ವಿರುದ್ಧ ಜನರು ಸ್ವಯಂ ಪ್ರೇರಿತರಾಗಿ ಧ್ವನಿ ಎತ್ತಬೇಕು ಎಂದು ಕಾರ್ಕಳ ಬ್ಲಾಕ್ ಮಹಿಳಾ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಅನಿತಾ ಡಿಸೋಜಾ ಬೆಳ್ಮಣ್ ಆಗ್ರಹಿಸಿದ್ದಾರೆ.
ಜನ ವಿರೋಧಿ ಆಡಳಿತ ನೀಡಿ ಅಧಿಕಾರವನ್ನು ಕಳೆದುಕೊಂಡ ನಂತರ ಬಿಜೆಪಿ ಪಕ್ಷದ ನಾಯಕರಾದ ಸುನಿಲ್ ಕುಮಾರ್ ರವರು ರಾಜ್ಯ ಸರಕಾರದ ವಿರುದ್ಧ ಪದೇ ಪದೇ ಸುಳ್ಳು ಆರೋಪಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ಒಂದು ಕಡೆ ಸರಕಾರದ ಬೊಕ್ಕಸ ಖಾಲಿಯಾಗಿದೆ, ಅಭಿವೃದ್ಧಿಗೆ ಹಣವೇ ಇಲ್ಲ ಅಂತ ಆರೋಪ ಮಾಡುತ್ತಿದ್ದ ಇವರ ನಾಲಿಗೆ, ಇನ್ನೊಂದು ಕಡೆ ಕಾರ್ಕಳಕ್ಕೆ ಏಷ್ಟು ಕೋಟಿ ಬಿಡುಗಡೆಯಾಗಿದೆ ಅಂತ ಪತ್ರಿಕೆಗಳಲ್ಲಿ ಪ್ರಕಟಣೆ ನೀಡಿ ಪ್ರಚಾರ ಪಡೆಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯನ್ನು ಬಿಜೆಪಿ ತನ್ನ ಪ್ರಯೋಗಲಯ ಮಾಡಿ ಜಾತಿ, ಧರ್ಮ, ಗೋ ಹತ್ಯೆ, ಹಲಾಲ್, ಜಟ್ಕಾ, ಹಿಜಾಬ್ ವಿಷಯದಲ್ಲಿ ರಾಜಕೀಯ ಮಾಡಿ ಪ್ರಯೋಜನ ಪಡೆದಿರುವುದು ಎಲ್ಲಾ ಜಾತಿ, ಧರ್ಮ, ಕುಲ, ಗೋತ್ರದ ಜನಸಾಮಾನ್ಯರ ಗಮನದಲ್ಲಿದೆ.
ನಿಮ್ಮ ಆಲೋಚನೆಯಲ್ಲಿ ಎಲ್ಲಾ ಹಿಂದುಗಳು, ನಿಮ್ಮ ಕಪಟ ನಾಟಕ ಅರಿಯದ ಮುಗ್ದರು ಎಂದಿರಬಹುದು. ಆದರೆ ಅವರು ಮೂರ್ಖರಂತೂ ಅಲ್ಲಾ ಅನ್ನುವುದು ನಮ್ಮ ನಂಬಿಕೆ. ನೀವು ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿರಿ. ಅವಿಭಜಿತ ದಕ್ಷಿಣ ಕನ್ನಡಲ್ಲಿ ಬಹುತೇಕ ಗೋ ಹತ್ಯೆ, ಗೋ ಸಾಗಾಟದಲ್ಲಿ ಬಿಜೆಪಿ ಬೆಂಬಲಿತರೇ ಜಾಸ್ತಿ ಸಿಕ್ಕಿಕೊಂಡಿರೋದು ಹಾಗಾಗಿ ನಿಮಗೆ ಕಾಣಿಸುವುದಿಲ್ಲವೇ ಎಂದು ವ್ಯಂಗ್ಯವಾಡಿದ್ದಾರೆ.
ಗೋಮಾಂಸ ರಫ್ತಿನಲ್ಲಿ ಭಾರತ ಅಗ್ರಸ್ಥಾನದಲ್ಲಿದೆ ಎಂಬುದನ್ನು ಮರೆತಿರುವ ಶಾಸಕ ಸುನಿಲ್ ಕುಮಾರ್ ಅವರು ಮಾನಸಿಕ ಅಸ್ವಸ್ಥನೊಬ್ಬನು ಕೆಚ್ಚಲು ಕೊಯ್ದ ಘಟನೆಯನ್ನು ಹಿಡಿದುಕೊಂಡು ಹಿಂದುಗಳ ದಿಕ್ಕು ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ. ದೇಶದ ಈಶಾನ್ಯ ರಾಜ್ಯಗಳು ಮತ್ತು ಗೋವಾಗಳಲ್ಲಿ ಗೋಮಾಂಸ ತಿನ್ನುವವರ ಪರವಾಗಿ ಇವರದೇ ಪಕ್ಷ ಇದೆ. ಇಲ್ಲಿ ಗೋಮಾತೆಯ ಮೇಲೆ ವಿಶೇಷ ಮಮತೆ ಇರುವಂತಹ ನಾಟಕವನ್ನು ಆಡುತ್ತಿದ್ದಾರೆ. ಕರ್ನಾಟಕದಲ್ಲಿ ಇವರೇ ಬೆಳೆದು ಬಂದ ಸಂಘಟನೆಯ ಸದಸ್ಯರು ಗೋ ಸಾಗಾಟ ಪ್ರಕರಣಗಳಲ್ಲಿ ಸಿಕ್ಕಿ ಬಿದ್ದಿದಂತ ಹಲವಾರು ಪ್ರಕರಣಗಳು ದಾಖಲಾಗಿವೆ.
ಬಡವರು ಮನೆ ಕಟ್ಟಲು ಆಗುತ್ತಿರುವ ಸಮಸ್ಯೆ, ನಿಮ್ಮ ಸರಕಾರ ಇರುವಾಗಲೂ ಇತ್ತು. ಮಂತ್ರಿ ಸ್ಥಾನದಲ್ಲಿ ಇದ್ದ ನೀವು ಯಾಕೆ ಆ ಸಮಸ್ಯೆ ಹೋಗಲಾಡಿಸಲು ಪ್ರಯತ್ನಿಸಲಿಲ್ಲ. ರೇಷನ್ ಕಾರ್ಡ್ ತೊಂದರೆಯಾಗಿರುವುದು ನಿಮ್ಮ ಕೇಂದ್ರ ಸರಕಾರದ ನೀತಿಯಿಂದ ಹೊರತು ರಾಜ್ಯ ಸರಕಾರದ ತಪಲ್ಲ. ಆದರೂ ರಾಜ್ಯ ಕಾಂಗ್ರೆಸ್ ಸರಕಾರ ರೇಷನ್ ಕಾರ್ಡ್ ವಿಷಯದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.
ಕಾಂಗ್ರೆಸ್ ಸರಕಾರ ಬಂದಮೇಲೆ ಹಾಲಿನ ದರ ಏರಿಕೆಯಾಗಲೇ ಇಲ್ಲ, ನೀವು ಹಾಲಿನ ದರ ಏರಿಕೆಯಾಗಿದೆಯಂತ ಜನರಿಗೆ ಸುಳ್ಳು ಹೇಳುತ್ತಿದ್ದೀರಿ. ರಾಜ್ಯ ಸರಕಾರದ ಅಭಿವೃದ್ಧಿ ಮತ್ತು ಜನಪರ ಯೋಜನೆಗಳನ್ನು ಜಾರಿ ಮಾಡಿ ಜನರಿಗೆ ತಲುಪಿಸುವ ಕೆಲಸವನ್ನು ಸರಕಾರ ಉತ್ತಮವಾಗಿ ಮಾಡುತ್ತಿದೆ. ಇದನ್ನು ಕಂಡು ಸಹಿಸದ ನೀವು ಜನರನ್ನು ದಿಕ್ಕು ತಪ್ಪಿಸುವ ಕೆಲಸದಲ್ಲಿ ನಿರತರಾಗಿದ್ದೀರಿ. ನಿಮ್ಮ ಈ ಕುತಂತ್ರ ಕಾರ್ಕಳ ಜನರ ಮುಂದೆ ಎಲ್ಲಾ ಸಮಯದಲ್ಲೂ ನಡೆಯುವುದಿಲ್ಲ ಎಂದು ತಾವು ಮನಗಣಬೇಕು. ಎಚ್ಚೆತ್ತು ಕೊಳ್ಳಿ ಸುನಿಲ್ ಕುಮಾರ್ ಅವರೇ, ದೇವರು ಕೈ ಬಿಟ್ಟಲ್ಲಿ ನಿಮ್ಮ ರಾಜಕೀಯ ಇತಿಶ್ರೀ ಯಾಗುವುದು ಖಂಡಿತಾ ಎಂದು ಅನಿತಾ ಡಿಸೋಜ ತಿಳಿಸಿದ್ದಾರೆ.