ಶ್ರೀ ನಾರಾಯಣ ಗುರು ಯುವ ವೇದಿಕೆ ಉಡುಪಿ : ಶ್ರೀ ಶಂಭುಕಲ್ಲು ವೀರಭದ್ರ ಕ್ಷೇತ್ರ ಮಹಾತ್ಮೆ ಯಕ್ಷಗಾನ ಪ್ರದರ್ಶನ
Posted On:
07-02-2025 01:26PM
ಉಡುಪಿ : ಒಂದೇ ಜಾತಿ, ಒಂದೇ ಧರ್ಮ, ಒಬ್ಬರೇ ದೇವರು ಎಂಬ ಸಾರ್ವಕಾಲಿಕ ಸತ್ಯ ಸಂದೇಶದ ಯುಗ ಪ್ರವರ್ತಕ ಬ್ರಹ್ಮಶ್ರೀ ನಾರಾಯಣ ಗುರುಗಳ ಆದರ್ಶಗಳನ್ನು ಮುಖ್ಯ ತತ್ವವಾಗಿಸಿಕೊಂಡು ಅಸ್ತಿತ್ವದಲ್ಲಿರುವ ಶ್ರೀ ನಾರಾಯಣ ಗುರು ಯುವ ವೇದಿಕೆ (ರಿ.) ಉಡುಪಿ ಇದರ ಪ್ರಥಮ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಫೆಬ್ರವರಿ 8 ಶನಿವಾರದಂದು ಉದ್ಯಾವರದ ಶ್ರೀ ಶಂಭುಕಲ್ಲು ವೀರಭದ್ರ ದೇವಸ್ಥಾನದ ಬಳಿ 'ವರ್ಷದ ಹರ್ಷ' ಕಾರ್ಯಕ್ರಮ ಜರುಗಲಿದೆ ಎಂದು ಸಂಘಟನೆಯ ಪ್ರಕಟಣೆ ತಿಳಿಸಿದೆ.
ಬೆಳಿಗ್ಗೆ ಗಂಟೆ 10:30 ಕ್ಕೆ ಗುರುಕಟ್ಟೆಯಲ್ಲಿ ಶ್ರೀ ವಿಶ್ವನಾಥ ಕ್ಷೇತ್ರ ಕಟಪಾಡಿ ಇದರ ಅಧ್ಯಕ್ಷರಾದ ಬಿ ಎನ್ ಶಂಕರ ಪೂಜಾರಿ ಶ್ರೀ ನಾರಾಯಣ ಗುರುಗಳ ಧ್ವಜಾರೋಹಣದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಸಂಜೆ 5 ಗಂಟೆಗೆ ಉದ್ಯಾವರ ಶ್ರೀ ಆದಿಶಕ್ತಿ ಕ್ಷೇತ್ರ ಬಯಲುಜಿಡ್ಡ ಇಲ್ಲಿಂದ ಮೆರವಣಿಗೆ ಮೂಲಕ ಶ್ರೀ ಆದಿ ಶಕ್ತಿ ದೇವಿಯ ಮೂರ್ತಿಯನ್ನು ಚೌಕಿಗೆ ತರಲಾಗುವುದು. ಬಳಿಕ 6 ಗಂಟೆಯಿಂದ ಖ್ಯಾತ ನಾದಸ್ವರ ವಾದಕರಿಂದ ನಾದಸ್ವರ ವಾದನ ಕಾರ್ಯಕ್ರಮ ಜರುಗಲಿದೆ.
ಸಂಜೆ 7 ಗಂಟೆಗೆ ನಡೆಯಲಿರುವ ವಾರ್ಷಿಕೋತ್ಸವದ ಸಭಾ ಕಾರ್ಯಕ್ರಮದಲ್ಲಿ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಉದ್ಯಮಿಗಳಾದ ರಾಜಶೇಖರ್ ಕೋಟ್ಯಾನ್, ಪ್ರಸಾದ್ ರಾಜ್ ಕಾಂಚನ್, ಸೂರ್ಯ ಪ್ರಕಾಶ್, ಹರಿಪ್ರಸಾದ್ ರೈ, ಪ್ರಮುಖರಾದ ಜಿತೇಂದ್ರ ಶೆಟ್ಟಿ, ನಿತೇಶ್ ಸಾಲ್ಯಾನ್, ಜಯಕರ್ ಶೇರಿಗಾರ್, ಉಲ್ಲಾಸ್ ಶೆಟ್ಟಿ, ರಘುನಾಥ್ ಮಾಬೆನ್, ರಿಯಾಝ್ ಪಳ್ಳಿ, ಕಿರಣ್ ಕುಮಾರ್ ಮುಂತಾದವರು ಭಾಗವಹಿಸಲಿದ್ದಾರೆ.
ಸಭಾ ಕಾರ್ಯಕ್ರಮದ ಬಳಿಕ ಶ್ರೀ ಆದಿಶಕ್ತಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಬಯಲುಜಿಡ್ಡ ಉದ್ಯಾವರ ಇವರಿಂದ ಶ್ರೀ ಶಂಭುಕಲ್ಲು ವೀರಭದ್ರ ಕ್ಷೇತ್ರ ಮಹಾತ್ಮೆ ಯಕ್ಷಗಾನ ಪ್ರದರ್ಶನವಾಗಲಿದೆ. ಪ್ರಖ್ಯಾತ ಹಿಮ್ಮೇಳ ಮತ್ತು ಮುಮ್ಮೇಳದ ಕಲಾವಿದರು ಪಾತ್ರ ವಹಿಸಲಿದ್ದು ಇತಿಹಾಸ ಪ್ರಸಿದ್ಧ ವೀರಭದ್ರ, ಮಹಾಕಾಳಿ, ಪಂಜುರ್ಲಿ ಮತ್ತು ಶ್ರೀ ಕ್ಷೇತ್ರದ ಇನ್ನಿತರ ದೈವ ದೇವರುಗಳ ವಿಶಿಷ್ಟ ರೋಚಕ ಸನ್ನಿವೇಶಗಳ ಮೇಲೆ ಆಧಾರಿತ ಕಥೆಯಾಗಿದ್ದು, ಈ ಯಕ್ಷಗಾನ ಪ್ರೇಕ್ಷಕ ವರ್ಗದವರಲ್ಲಿ ವಿಶೇಷ ಕುತೂಹಲ ಕೆರಳಿಸಿದೆ ಮತ್ತು ಯಕ್ಷಗಾನದ ಇತಿಹಾಸದಲ್ಲಿ ಒಂದು ಹೊಸ ದಾಖಲೆ ಬರೆಯುವ ಪ್ರದರ್ಶನ ಮೂಡಿಬರಲಿದೆ ಎಂದು ಶ್ರೀ ನಾರಾಯಣ ಗುರು ಯುವ ವೇದಿಕೆ ಉಡುಪಿ ಇದರ ಪ್ರಕಟಣೆ ತಿಳಿಸಿದೆ.