ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಬೆಳ್ಳೆ ಗ್ರಾಮ ಪಂಚಾಯತಿಯಲ್ಲಿ ರೋಜ್ ಗಾರ್ ದಿನಾಚರಣೆ

Posted On: 21-02-2025 07:51PM

ಶಿರ್ವ : ಬೆಳ್ಳೆ ಗ್ರಾಮ ಪಂಚಾಯತಿಯಲ್ಲಿ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ರೋಜ್ ಗಾರ್ ದಿನಾಚರಣೆಯನ್ನು ಆಚರಿಸಲಾಯಿತು. ಜಿಲ್ಲಾ ಪಂಚಾಯತಿಯ ಉಪಕಾರ್ಯದರ್ಶಿ ಶ್ರೀನಿವಾಸ ರಾವ್ ಮುಖ್ಯ ಅತಿಥಿಯಾಗಿ ಮಾತನಾಡಿ ಗ್ರಾಮ ಪಂಚಾಯತ್ ಜೊತೆಗೆ ಸಮುದಾಯ ಸಂಘಟಿತವಾಗಿ ಭಾಗಿಯಾದರೆ ಉದ್ಯೋಗ ಖಾತರಿ ಯೋಜನೆಯ ಮುಖಾಂತರ ಸಾಕಷ್ಟು ವೈಯಕ್ತಿಕ ಮತ್ತು ಸಮುದಾಯದ ಅಭಿವೃದ್ಧಿಯನ್ನು ಮಾಡಬಹುದೆಂದು ಮತ್ತು ಇಂತಹ ಅರ್ಥಪೂರ್ಣ ಕಾರ್ಯಕ್ರಮಗಳು ಪ್ರತೀ ಗ್ರಾಮ ಮಟ್ಟದಲ್ಲಿ ನಡೆದಾಗ ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಸಮುದಾಯದೊಂದಿಗೆ ಉತ್ತಮ ಬಾಂಧವ್ಯಗಳು ಬೆಸೆಯುತ್ತವೆ ಎಂದು ತಿಳಿಸಿದರು. ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಜೇಮ್ಸ್ ಡಿಸಿಲ್ವರವರು ಮಾತನಾಡಿ ಗ್ರಾಮ ಪಂಚಾಯತ್ ಆಡಳಿತ ಮತ್ತು ಸಿಬ್ಬಂದಿ ಉತ್ತಮ ಬಾಂಧವ್ಯದಿಂದ ಕರ್ತವ್ಯ ನಿರ್ವಹಿಸುತ್ತಿದ್ದು, ಗ್ರಾಮ ಪಂಚಾಯತ್ ಉತ್ತಮ ಪ್ರಗತಿ ಸಾಧಿಸುತ್ತಿದೆ ಎಂದು ಹೇಳಿದರು.

ಸಾಮಾಗ್ರಿ ಹಸ್ತಾಂತರ, ಗೌರವಾರ್ಪಣೆ : ದಾನಿಗಳಿಂದ ಕೊಡುಗೆಯಾಗಿ ನೀಡಿದ ಕೆಲಸದ ಸಾಮಾಗ್ರಿಗಳನ್ನು ನೋಂದಾಯಿತ ಕೂಲಿಗಾರರಿಗೆ ಮುಖ್ಯ ಕಾರ್ಯದರ್ಶಿಯವರು ಹಸ್ತಾಂತರಿಸಿದರು. ವೈಯಕ್ತಿಕ ಫಲಾನುಭವಿಗಳಾದ ಹರೀಶ್ ಕರ್ಕೇರ ಮತ್ತು ಸುದೀಪ್ ರೋಷನ್ ಲೋಬೊ ಹಾಗೂ ಎಲ್ಲಾ ಕಾರ್ಮಿಕರನ್ನು ಗೌರವಿಸಲಾಯಿತು.

ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ದಿವ್ಯಾ ವಿ. ಆಚಾರ್ಯ ಇವರು ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ತಾ. ಪಂ. ಸಹಾಯಕ ನಿರ್ದೇಶಕರಾದ ಚಂದ್ರಕಲಾ, ತಾಂತ್ರಿಕ ಸಂಯೋಜಕರಾದ ಪವನ್ ಜಿ., ಬಿಎಫ್ ಟಿ ಶಂಕರ್, ಯೋಜನಾ ಸಂವಹನಕಾರರಾದ ಅಕ್ಷಯ್ ಕೃಷ್ಣ, ಪಂಚಾಯತ್ ಕಾರ್ಯದರ್ಶಿ ಅನಂದ್ ಕುಲಕರ್ಣಿ, ಗ್ರಾಮ ಪಂಚಾಯತ್ ಸದಸ್ಯರಾದ ಪರಶುರಾಮ ಭಟ್, ಹರೀಶ್ ಶೆಟ್ಟಿ, ಗ್ರಾಮ ಪಂಚಾಯತ್ ಸಿಬ್ಬಂದಿ ಸದಾನಂದ ಪೂಜಾರಿ, ರೇಷ್ಮಾ ಆಚಾರ್ಯ, ನೀತಾ ನಾಯಕ್, ರಕ್ಷಿತಾ, ಯಶೋದ, ಚಂದ್ರಿಕಾ, ರಮೇಶ್ ಶೆಟ್ಟಿ, ಪ್ರೀತೇಶ್, ಸುಂದರ ಹಾಗೂ ಸ್ಥಳೀಯರಾದ ಭಾಸ್ಕರ ಶೆಟ್ಟಿ, ಮಾಜಿ ಗ್ರಾ.ಪಂ. ಸದಸ್ಯರಾದ ಸುನೀತಾ ಶೆಟ್ಟಿ, ಮಮತಾ ವಾಗ್ಳೆ ಹಾಗೂ ಯೋಜನೆಯ ಸುಮಾರು ಮೂವತ್ತಾರು ಜನ ಕಾರ್ಮಿಕರು, ಗ್ರಾಮಸ್ಥರು, ಫಲಾನುಭವಿಗಳು ಉಪಸ್ಥಿತರಿದ್ದರು.

ಕೂಲಿಯಿಂದ ಮಗಳನ್ನು ಗಗನಸಖಿಯಾಗಿಸಿದ ಮಹಿಳೆ : ಕೂಲಿ ಕಾರ್ಮಿಕರಲ್ಲೊಬ್ಬರಾದ ಕುಸುಮ ನಾಯಕ್ ಇವರು ಆರು ವರ್ಷಗಳಿಂದ ಯೋಜನೆಯಲ್ಲಿ ಕೂಲಿ ಪಡೆದು, ಅದರಿಂದ ಮಗಳಿಗೆ ವಿದ್ಯಾಭ್ಯಾಸ ನೀಡಿ ಗಗನಸಖಿಯನ್ನಾಗಿಸಲು ಯೋಜನೆ ಪ್ರಯೋಜನವಾಗಿದೆಯೆಂದು ತಿಳಿಸಿ ಭಾವುಕರಾದರು. ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶಶಿಧರ ವಾಗ್ಳೆ ಸ್ವಾಗತಿಸಿ, ವಂದಿಸಿದರು. ಆರೋಗ್ಯ ಇಲಾಖೆಯ ಸಿ ಎಚ್ ಒ ವೈಷ್ಣವಿ ಮತ್ತು ಶಕುಂತಲ ಆರೋಗ್ಯ ತಪಾಸನೆ ನಡೆಸಿದರು