ಗಗ್ಗಲ್ಲ ಕೋಟೆಯ(ಕಲ್ಲಟ್ಟೆ) ಜಾರಂದಾಯ ಬಂಟ ದೈವ
ಪ್ರಾಚೀನ ಕಾಲದಲ್ಲಿ ಕಲ್ಲಟ್ಟೆಯನ್ನು ಕಲ್ಲೊಟ್ಟು ಅಥವಾ ಗಗ್ಗಲ್ಲ ಕೋಟೆಯೆಂದು ಕರೆಯುತ್ತಿದ್ದರು.
ಈ ಪ್ರದೇಶವು ಪಾದೇ ಕಲ್ಲಿನಿಂದ ತುಂಬಿದ ಪ್ರದೇಶ. ಬಹು ಪ್ರಾಚೀನ ಹಾಗು ಕಾರ್ಣಿಕ ಸ್ಥಳ, ಪಡುಬಿದ್ರಿ ಬ್ರಹ್ಮಸ್ಥಾನದ ಖಡಗೇಶ್ಶ್ವರಿ ದೇವಿಯ ದೂತ ಕಲ್ಲಟೆ ಜಾರಂದಾಯ ಬಂಟ.
ಪಡುಬಿದ್ರಿ ಪೇಟೆಯಿಂದ , ಬ್ರಹ್ಮಸ್ಥಾನಕ್ಕೆ ಹೋಗು ದಾರಿಯಲ್ಲಿ ಕಲ್ಲಟ್ಟೆ ಜಾರಂದಾಯನ ಸುಂದರ ದೈವಸ್ಥಾನ ಕಾಣಲು ಸಿಗುತ್ತದೆ.
ಇಲ್ಲಿ ಕಲ್ಲಿನ ಕೋರೆಯಲ್ಲಿ ಒಂದು ಪಂಜುರ್ಲಿ ದೈವವು ಇದೆ.
ಇದಕ್ಕೆ ಕೋರೆ ಪಂಜುರ್ಲಿ ಎನ್ನುತ್ತಾರೆ.
ಮಂಜಿ ಮರಕಾಲ ಎಂಬ ಮೀನು ಹಿಡಿಯುವವನಿಗೆ ತನ್ನ ನಿಜ ರೂಪ ತೋರಿಸಿ,ಅವನಿಂದ ಕುದುರೆ ಬಂಡಿಯನ್ನು ಮಾಡಿಸಿ ಈಡೀ ಗಗ್ಗಲ್ಲ ಕೋಟೆಯಲ್ಲಿ ಮೆರೆಯುವ ದೈವ ಜಾರಂದಾಯ ಬಂಟ.
ಮಂಜಿ ಮರಕಾಲನ ಕಥೆ :
ಪ್ರಾಚೀನ ಕಾಲದಲ್ಲಿ ಮಂಜಿ ಮರಕಾಲ ಎಂಬವನು ಗಗ್ಗಲ್ಲ ಕೋಟೆಯಲ್ಲಿ ವಾಸವಾಗಿದ್ದನು. ಇವನ ಕಸುಬು ಮೀನುಗಾರಿಕೆ, ಸಮುದ್ರದಲ್ಲಿ ಮೀನು ಹಿಡಿಯುವುದು.
ಒಂದು ದಿನ ಮಧ್ಯ ರಾತ್ರಿಯಲ್ಲಿ ಜಾರಂದಾಯನು ಕಂಚಿನ ಕೋಳಿಯ ರೂಪ ಧರಿಸಿ, ಮಂಜಿ ಮರಕಲನ ಮನೆಯ ಮುಂದೆ ಬಂದು ಕೂಗುತ್ತಾನೆ.
ಮಂಜಿ ಮರಕಾಲನು ಕೋಳಿ ಕೂಗು ಕೇಳಿಸಿ ಬೆಳಗ್ಗಾಯಿತು ಎಂದು ಭಾವಿಸಿ, ಬಲೆ ಮತ್ತಿತರ ಮೀನು ಹಿಡಿಯುವ ಸಲಕರಣೆಗಳನ್ನು ಹೊತ್ತು ಸಮುದ್ರ ತೀರಕ್ಕೆ ಹೊರಡುತ್ತಾನೆ.
ಮುಟ್ಟಿಕಲ್ಲು ಎಂಬಲ್ಲಿ ಜಾರಂದಾಯನು ನಿಜ ರೂಪ ತೋರಿಸುತ್ತಾನೆ ಮಂಜಿ ಮರಕಾಲನಿಗೆ ಜಾರಂದಾಯನ ನಿಜ ರೂಪ ನೋಡಿ,
"ನನಗೆ ಏಕೆ ಒಲಿದೆ ಜಾರಂದಾಯ" ಎಂದು ಕೇಳುತ್ತಾನೆ, ಜಾರಂದಾಯನು ಮಂಜಿ ಮರಕಲನನ್ನು ಕುರಿತು
"ಮಂಜಿ ಮರಕಾಲ, ಗಗ್ಗಲ್ಲ ಕೋಟೆಯಲ್ಲಿ ತಿರುಗಲು ನನಗೆ ಒಂದು ಕುದುರೆ ಬಂಡಿ ಬೇಕು, ಅದನ್ನು ಮಾಡಿಸಿ ಕೊಡು" ಎಂದು ಆಜ್ಞಾಪಿಸುತ್ತಾನೆ. ಇದನ್ನು ಕೇಳಿ ಮಂಜಿ ಮರಕಾಲನು "ಜಾರಂದಾಯ, ಒಂದು ಹೊತ್ತು ಊಟ ಮಾಡಲು ಅನ್ನವೇ ಇಲ್ಲದಂತಹ ನನ್ನ ಈ ಪರಿಸ್ಥಿತಿಯಲ್ಲಿ, ಕುದುರೆ ಬಂಡಿ ಹೇಗೆ ಮಾಡಿಸಲಿ " ಎಂದು ಪರಿ ಪರಿಯಾಗಿ ಪ್ರಾರ್ಥಿಸುತ್ತಾನೆ.
ಇದನ್ನು ಕೇಳಿ ಜಾರಂದಾಯನು
"ಮಂಜಿ ಮರಕಾಲ,ನಿನ್ನ ಕೈಯಲ್ಲಿ ಇದನ್ನು ಮಾಡಿಸುತ್ತೇನೆ, ಏನು ಹೆದರಬೇಡ" ಎಂದು ಹೇಳಿ ಬೆಳ್ಳಿಯ ಕುದುರೆ ಏರಿ ಮಾಯವಾಗುತ್ತಾನೆ. ಹೀಗೆ ಮುಂದಿನ ದಿನಗಳಲ್ಲಿ, ಮಂಜಿ ಮರಕಾಲನು, ಜಾರಂದಾಯನ ದಯೆಯಿಂದ ವ್ಯಾಪಾರದಲ್ಲಿ ತುಂಬಾ ಲಾಭಗಳಿಸಿ, ಅತಿ ಸುಂದರವಾದ ಕುದುರೆ ಬಂಡಿಯನ್ನು ಮಾಡಿಸುತ್ತಾನೆ. ಮಂಜಿ ಮರಕಾಲನ ಕಾಲದಲ್ಲಿ ಒಪ್ಪಿಸಿದ ಕುದುರೆ ಬಂಡಿ ಜೀರ್ಣಾವಸ್ಥೆಯಲ್ಲಿ ಇದ್ದು , ಸ್ವಲ್ಪ ವರ್ಷಗಳ ಹಿಂದೆ ಇದೆ ಮಂಜಿ ಮರಕಾಲನ ಸಂಸಾರದವರು ಹೊಸ ಕುದುರೆ ಬಂಡಿಯನ್ನು ಜಾರಂದಾಯನಿಗೆ ಒಪ್ಪಿಸಿರುತ್ತಾರೆ.
ಇವತ್ತಿಗೂ ಮಂಜಿ ಮರಕಾಲ ಸಂಸಾರದವರು ಜಾರಂದಾಯ ನೇಮದ ದಿನ ಅವರ ಮನೆಯಲ್ಲಿ ದೀಪವನ್ನು ಹಚ್ಚಿ ಇಡೀ ನೇಮ ಮುಗಿಯುವವರೆಗೆ ಮನೆ ಬಾಗಿಲನ್ನು ತೆರೆದು ಇಡುತ್ತಾರೆ.
ಇವತ್ತಿಗೂ ಜಾರಂದಾಯನು ಮಂಜಿ ಮಾರಕಲನ ಮನೆಗೆ ಭೇಟಿ ಕೊಡುತ್ತಾನೆ ಎಂದು ಪ್ರತೀತಿ ಇದೆ.
ಬರಹ: ಜಗನ್ನಾಥ ಭಟ್ಟ ಕಟಪಾಡಿ.
Coastal Diaries..
ನಮ್ಮ ಕಾಪು