ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಫೆ.25 ರಿಂದ ಮಾ.5 : ಕಾಪುವಿನ ಅಮ್ಮನ ಪ್ರತಿಷ್ಠಾ ಬ್ರಹ್ಮಕಲಶೋತ್ಸವ

Posted On: 24-02-2025 04:41PM

ಕಾಪು : ಸಂಪೂರ್ಣ ಶಿಲಾಮಯವಾಗಿ ನಿರ್ಮಾಣಗೊಂಡಿರುವ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಫೆಬ್ರವರಿ 25 ರಿಂದ ಮಾರ್ಚ್ 5 ವರೆಗೆ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಜರಗಲಿದ್ದು, ಸಕಲ ಸಿದ್ಧತೆಗಳನ್ನು ಮಾಡಲಾಗಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಡಾ.ಕೆ‌. ಪ್ರಕಾಶ್ ಶೆಟ್ಟಿ ಹೇಳಿದರು. ಅವರು ಕಾಪುವಿನಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಪ್ರತಿನಿತ್ಯ ಬೆಳಿಗ್ಗೆ ಕ್ಷೇತ್ರದ ತಂತಿವರ್ಯರು, ಅರ್ಚಕರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು, ಅನ್ನಸಂತರ್ಪಣೆ, ಸಂಜೆ ಸಾಂಸ್ಕೃತಿಕ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮಗಳು ನಡೆಯಲಿದೆ ಎಂದು ತಿಳಿಸಿದರು.

ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಕಾಪು ಸಮೃದ್ಧಿ, ಸಾಮರಸ್ಯದ ಊರಾಗಿದೆ. ಅನ್ಯ ಧರ್ಮೀಯರು ಹೊರೆಕಾಣಿಕೆ ನೀಡಿದ್ದಾರೆ. ಹೆಜಮಾಡಿಯಿಂದ ಉದ್ಯಾವರದವರೆಗೆ ಪತಾಕೆ ಹಾಕಲಾಗಿದ್ದು, 8 ಕಿ.ಮೀ. ವ್ಯಾಪ್ತಿಯವರೆಗೆ ವಿದ್ಯುದ್ದೀಪಾಲಂಕಾರ ಮಾಡಲಾಗಿದೆ. ಸ್ಥಳೀಯರಿಂದ ರಾಷ್ಟ್ರಮಟ್ಟದ ಪ್ರತಿಭೆಗಳು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಕೆಲವು ಕಡೆಗಳಲ್ಲಿ ವಾಹನ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು, ಅಲ್ಲಿಂದ ದೇವಳಕ್ಕೆ ಭಕ್ತರನ್ನು ಕರೆದುತರುವ ವ್ಯವಸ್ಥೆ ಮಾಡಲಾಗಿದೆ.

ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ಮಾತನಾಡಿ, ಟೆಂಡರ್ ಪ್ರಕ್ರಿಯೆಯ ಮೂಲಕ 30 ಕೋಟಿಯಲ್ಲಿ ದೇವಳದ ಪ್ರಥಮ ಹಂತದ ಕಾಮಗಾರಿ ಮುಗಿದಿದ್ದು, ಭಕ್ತರ ಸಂಕಲ್ಪದಿಂದ ರಾಜಗೋಪುರ, ಸ್ವರ್ಣ ಗದ್ದುಗೆ, ದೇವಿಗೆ ಚಿನ್ನದ ಮುಖ, ರಜತ ರಥ, ಉಚ್ಚಂಗಿ ಚಿನ್ನದ ಮುಖ ಸೇರಿದಂತೆ 65 ಕೋಟಿಯ ಕೆಲಸವಾಗಿದೆ. ಅನಂತ ಉಗ್ರಾಣದಲ್ಲಿ ದಾಖಲೆ ಸಂಖ್ಯೆಯಲ್ಲಿ ಹಸುರುವಾಣಿ ಹೊರೆಕಾಣಿಕೆ ಸಂಗ್ರಹವಾಗಿದೆ. ಉತ್ತಮ ವ್ಯವಸ್ಥೆಗೆ ಸ್ವಯಂ ಸೇವಕರು ಸಹಕರಿಸಲಿದ್ದಾರೆ. ಶ್ರೀ ಕ್ಷೇತ್ರದಲ್ಲಿ ಅಶ್ವ ಪೂಜೆ, ಗಜೆ ಪೂಜೆಯು ನಡೆಯಲಿದೆ. ಬ್ರಹ್ಮಕಲಶೋತ್ಸವದ ಬಳಿಕ 48 ದಿನ ಕ್ಷೇತ್ರದ ದಾನಿಗಳಿಂದ ಚಂಡಿಕಾಯಾಗವೂ ನಡೆಯಲಿದೆ ಎಂದರು.

ಉದಯ ಸುಂದರ್ ಶೆಟ್ಟಿ ಮಾತನಾಡಿ, ಬೆಳಗ್ಗೆ ಮತ್ತು ಸಂಜೆ ಉಪಾಹಾರ, ಮಧ್ಯಾಹ್ನ ಮತ್ತು ಸಂಜೆ ಊಟದ ವ್ಯವಸ್ಥೆ ಮಾಡಲಾಗಿದೆ. ದೇವಳದ 4 ಕಡೆಗಳಲ್ಲಿ ಬಫೆ ಮತ್ತು ಎಲೆಯ ಊಟದ ವ್ಯವಸ್ಥೆ ಮಾಡಲಾಗಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ, ಸದಸ್ಯ ಮಾಧವ ಪಾಲನ್, ಯೋಗೀಶ್ ವಿ. ಶೆಟ್ಟಿ, ಸುಹಾಸ್ ಹೆಗ್ಡೆ ನಂದಳಿಕೆ, ಕಾರ್ಯನಿರ್ವಹಣಾಧಿಕಾರಿ ರವಿಕಿರಣ್ ಉಪಸ್ಥಿತರಿದ್ದರು.