ಕಾಪು : ದುಷ್ಟ ಶಕ್ತಿಗಳನ್ನು ನಾಶ ಮಾಡಿ ಶಿಷ್ಟರನ್ನು ಸದಾ ರಕ್ಷಿಸುವ ತಾಯಿ ಮಾರಿಯಮ್ಮ. ಕಾಪು ಶ್ರೀ ಹೊಸ ಮಾರಿಗುಡಿಯಲ್ಲಿ ಅದ್ಭುತವಾದ ಸೇವೆ ನಡೆಯುತ್ತಿದೆ. ದೇವಸ್ಥಾನದ ಮರದ ಕೆಲಸ, ಶಿಲಾ ಕೆಲಸಗಳು ಅದ್ಭುತವಾಗಿವೆ. ಇದು ಶ್ರದ್ಧೆಯಿಂದ ಮಾಡಿದ ಕೆಲಸ ಆಗಿದೆ. ಭಕ್ತಿ ಮತ್ತು ಶೃದ್ಧೆಯಿಂದ ಮಾಡುವ ಕಾರ್ಯಕ್ಕೆ ದೇವರ ಅನುಗ್ರಹವೂ ಪ್ರಾಪ್ತಿಯಾಗುತ್ತದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ರಾಜರ್ಷಿ ಡಾ.ಡಿ.ವೀರೇಂದ್ರ ಹೆಗ್ಗಡೆ ನುಡಿದರು.
ಅವರು ಮಂಗಳವಾರ ಕಾಪು ಶ್ರೀಹೊಸ ಮಾರಿಗುಡಿ ನೂತನ ದೇವಸ್ಥಾನದಲ್ಲಿ ಉಚ್ಚಂಗಿ ಸಹಿತ ಶ್ರೀ ಮಾರಿಯಮ್ಮನ ಪುನ:ಪ್ರತಿಷ್ಠಾಪನಾಪೂರ್ವಕ ಸಹಸ್ರ ಕುಂಭಾಭಿಷೇಕ ಪ್ರಯುಕ್ತ ಜರುಗುತ್ತಿರುವ 8ನೇ ದಿನದ ಧಾರ್ಮಿಕ ಅನುಷ್ಠಾನಗಳ ಶುಭಾವಸರದಲ್ಲಿ ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿ ನಂತರ ಜರುಗಿದ ಧಾರ್ಮಿಕ ಸಭಾಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.
ಡಾ.ಡಿ.ವೀರೇಂದ್ರ ಹೆಗ್ಗಡೆಯವರನ್ನು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾ.ಯೋಜನೆ ಉಡುಪಿ ಜಿಲ್ಲೆ, ಕಾಪು ವಲಯ ಹಾಗೂ ಒಕ್ಕೂಟದ ವತಿಯಿಂದ ಪದಾಧಿಕಾರಿಗಳು ಗೌರವಿಸಿದರು.
ದೇವಸ್ಥಾನ ಅಭಿವೃದ್ದಿ ಸಮಿತಿಯ ಕಾರ್ಯಾಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿ, ಉಪಾಧ್ಯಕ್ಷ ಮಾಧವ ಪಾಲನ್, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಹರಿಯಪ್ಪ ಕೊಟ್ಯಾನ್, ಕಾಪು ದಿವಾಕರ ಶೆಟ್ಟಿ, ಮಹೇಶ್ ಕೊಟ್ಯಾನ್, ಶಶಿಧರ ಶೆಟ್ಟಿ ಮಲ್ಲಾರು, ಯೋಗೀಶ್ ವಿ.ಶೆಟ್ಟಿ ಬಾಲಾಜಿ ಉಪಸ್ಥಿತರಿದ್ದರು.
ದಾಮೋದರ ಶರ್ಮಾ ಬಾರ್ಕೂರು ಮತ್ತು ಅಶೋಕ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.