ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಮಾ. 20 ರಿಂದ 23 : ಬಂಟಕಲ್‌ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಕಾಲೇಜಿನಲ್ಲಿ ವರ್ಣೋತ್ಸವ, ವಾರ್ಷಿಕ ಸಮಾರಂಭ

Posted On: 19-03-2025 07:16PM

ಬಂಟಕಲ್ :‌ ಬಂಟಕಲ್‌ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ 2024-25 ನೇ ಸಾಲಿನ ವರ್ಣೋತ್ಸವ – 2025 ಮತ್ತು ವಾರ್ಷಿಕ ಸಮಾರಂಭಗಳು ಮಾರ್ಚ್ 20 ರಿಂದ 23ವರೆಗೆ ಕಾಲೇಜಿನ ಆವರಣದಲ್ಲಿ ನಡೆಯಲಿದೆ ಎಂದು ಸೋದೆ ಎಜ್ಯುಕೇಶನ್‌ ಟ್ರಸ್ಟ್‌ ಕಾರ್ಯದರ್ಶಿ ರತ್ನಕುಮಾರ್‌ ಹೇಳಿದ್ದಾರೆ. ಅವರು ಬುಧವಾರ ಕಾಲೇಜಿನ ಸಭಾ ಭವನದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.

ಗುರುವಾರ ಮಾರ್ಚ್ 20ರಂದು ಬೆಳಗ್ಗೆ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು 9-30ಕ್ಕೆ ನಡೆಯಲಿದ್ದು, ಶ್ರೀ ಸೋದೆ ವಾದಿರಾಜ ಮಠ ಶಿಕ್ಷಣ ಪ್ರತಿಷ್ಠಾನ ಇದರ ಉಪಾಧ್ಯಕ್ಷರಾದ ಶ್ರೀನಿವಾಸ ತಂತ್ರಿಗಳು ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ಸಂಸ್ಥೆಯ ಹಳೆ ವಿದ್ಯಾರ್ಥಿಗಳಾದ ಪವನ್‌ಕುಮಾರ್ ಶೆಟ್ಟಿ, ಮ್ಯುಸಿಕ್ ಟಿಬಿಒಎಸ್‌ಎಮ್‌ ನ ಹಿರಿಯ ಪ್ರಾಧ್ಯಾಪಕಿ ಶ್ರೀಮತಿ ಉಷಾ ರಾಮಚಂದ್ರ ಭಟ್  ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಕಾರ್ಯದರ್ಶಿಗಳಾದ ರತ್ನಕುಮಾರ್‌ ವಹಿಸಲಿದ್ದಾರೆ. ವರ್ಣೋತ್ಸವ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ವಿವಿಧ ಇಂಜಿನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಪಕ್ಕದ ರಾಜ್ಯ/ಜಿಲ್ಲೆಯ ತಾಂತ್ರಿಕ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.  ವಿವಿಧ ತಾಂತ್ರಿಕ ಸ್ಪರ್ಧೆಗಳ ಜೊತೆಗೆ ನೃತ್ಯ, ಗಾಯನ, ಫೋಟೋಗ್ರಫಿ, ಚಿತ್ರಕಲೆ, ಮುಖವರ್ಣ ಸ್ಪರ್ಧೆ ನಡೆಯಲಿರುವುದು. ಅದೇ ದಿನ ಸಂಜೆ  ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಂದ ಮನೋರಂಜನಾ ಕಾರ್ಯಕ್ರಮ  ನಡೆಯಲಿದೆ.

ವರ್ಣೋತ್ಸವದ ಸಮಾರೋಪ ಸಮಾರಂಭವು ಶುಕ್ರವಾರ ಮಾರ್ಚ್ 21ರಂದು ಸಂಜೆ ನಡೆಯಲಿದೆ.  ಸಮಾರಂಭದಲ್ಲಿ ಬೆಂಗಳೂರಿನ ಉದ್ಯಮಿ ವಿನೋದ್‌ಜಾನ್, ಖ್ಯಾತ ಚಲನ ಚಿತ್ರ ನಟ ಪೃಥ್ವಿಅಂಬರ್‌ ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಪರಮಪೂಜ್ಯ ಶ್ರೀ ಸೋದೆ ಶ್ರೀಪಾದರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಅದೇ ದಿನ ಸಂಜೆ ಕಾಲೇಜಿನ ಯಕ್ಷಗಾನ ಸಂಘ ಯಕ್ಷಸಿಂಚನದ ವಿದ್ಯಾರ್ಥಿಗಳಿಂದ 3 ಗಂಟೆಯ ಕಾಲ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಮಾರ್ಚ್ ರಂದು 22 ಕಾಲೇಜು ವಾರ್ಷಿಕೋತ್ಸವ ಸಮಾರಂಭವು ಸಂಸ್ಥೆಯ ಆವರಣದಲ್ಲಿ ಪರಮಪೂಜ್ಯ ಸೋದೆ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಮಧ್ಯಾಹ್ನ 3 ಗಂಟೆಗೆ ಸಭಾ ಕಾರ್ಯಕ್ರಮ ದೊಂದಿಗೆ ಪ್ರಾರಂಭವಾಗುವ ಸಮಾರಂಭವು ಸಂಜೆ ಕಾಲೇಜಿನ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಮಾಪನಗೊಳ್ಳಲಿದೆ.

ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಮಂಡಳಿಯ ನಿರ್ದೇಶಕರಾದ ಡಾ. ಎನ್. ಹೆಚ್. ಸಿದ್ದಲಿಂಗ ಸ್ವಾಮಿಯವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಬೆಂಗಳೂರಿನ ಪ್ರತಿಷ್ಠಿತ ಐಟಿ ಕಂಪೆನಿ ಡಾಟಾ ಪ್ಯಾಟರ್ನ್ಸ್ ಲಿಮಿಟೆಡ್‌ ಇದರ ಮುಖ್ಯಸ್ಥರು ಮತ್ತು ನಿರ್ದೇಶಕರಾದ ಶ್ರೀನಿವಾಸ ಗೋಪಾಲನ್ ರಂಗರಾಜನ್ ಮತ್ತು ಶ್ರೀಮತಿ ರೇಖಾಮೂರ್ತಿ ರಂಗರಾಜನ್‌ ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಶ್ರೀ ಮೂಡಬಿದ್ರಿಯ ಜೈನ ಮಠದ ಸ್ವಸ್ತಿಶ್ರೀ ಭಟ್ಟಾರಕಚಾರು ಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಯವರು ಈ ಸಮಾರಂಭಕ್ಕೆ ವಿಶೇಷ ಅತಿಥಿಗಳಾಗಿ ಆಗಮಿಸಿ ಆಶೀರ್ವಚನ ನೀಡಲಿದ್ದಾರೆ. ಆದಿತ್ಯವಾರ, 23 ಮಾರ್ಚ್ 2025 ರಂದು ಬೆಳಿಗ್ಗೆ 10-00 ರಿಂದ “ಆಟೋಎಕ್ಸ್ಪೋ”ದುಬಾರಿ ವಾಹನಗಳ ಪ್ರದರ್ಶನ ಮತ್ತು ಮದ್ಯಾಹ್ನ 3 ಗಂಟೆಗೆ ಹಳೆ ವಿದ್ಯಾರ್ಥಿಗಳ ಸಮಾವೇಶ ಸಮಾರಂಭ ನಡೆಯಲಿದೆ. ಸಂಜೆ 7 ಗಂಟೆಗೆ ಕೇರಳದ ಪ್ರತಿಷ್ಟಿತ ಮ್ಯುಸಿಕಲ್ ಬ್ಯಾಂಡ್ ಸಂಸ್ಥೆಯಾದ“ತಮರಶ್ಶೇರಿಚೂರಂ” ತAಡದಿಂದ ಸಂಗೀತ  ರಸಮಂಜರಿ ಮನೋರಂಜನಾ ಕಾರ್ಯಕ್ರಮ ಜರಗಲಿದೆ ಎಂದೂ ರತ್ನಕುಮಾರ್‌ ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಪ್ರಾಂಶುಪಾಲ ಡಾ. ತಿರುಮಲೇಶ್ವರ ಭಟ್‌, ಸಂಯೋಜಕರಾದ ಸಚಿನ್‌ ಪ್ರಭು, ಡಾ. ಶಿಲ್ಪಾ ಕಾಮತ್‌ ಉಪಸ್ಥಿತರಿದ್ದರು.